ಕಾವೇರಿ ನದಿ ನೀರು ವಿವಾದ: ತಮಿಳುನಾಡಿಗೆ ಹದಿನೈದು ದಿನ ನೀರು ಬಿಡಲು ಸಾಧ್ಯವಿಲ್ಲ- ಎಂಬಿ ಪಾಟೀಲ್

ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಜಟಾಪಟಿ ನಡುವೆ, ತಮಿಳುನಾಡಿಗೆ ಹದಿನೈದು ದಿನ ನೀರು ಕೊಡುವುದು ಕರ್ನಾಟಕಕ್ಕೆ ತುಂಬಾ ಕಷ್ಟ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಸಚಿವ ಎಂಬಿ ಪಾಟೀಲ್
ಸಚಿವ ಎಂಬಿ ಪಾಟೀಲ್

ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಜಟಾಪಟಿ ನಡುವೆ, ತಮಿಳುನಾಡಿಗೆ ಹದಿನೈದು ದಿನ ನೀರು ಕೊಡುವುದು ಕರ್ನಾಟಕಕ್ಕೆ ತುಂಬಾ ಕಷ್ಟ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

'ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ತಮಿಳುನಾಡಿಗೆ ಹದಿನೈದು ದಿನಗಳವರೆಗೆ 5,000 ಕ್ಯೂಸೆಕ್ ನೀರು ನೀಡುವಂತೆ ಸೂಚಿಸಿದೆ. ನಮ್ಮಲ್ಲಿ ನೀರಿಲ್ಲ. ಹೀಗಾಗಿ, ಈ ಆದೇಶವನ್ನು ಜಾರಿಗೆ ತರಲು ನಮಗೆ ತುಂಬಾ ಕಷ್ಟ. ಆದ್ದರಿಂದ ನಾವು ಕಾನೂನಿನ ಮೊರೆ ಹೋಗುತ್ತೇವೆ. ದೀರ್ಘಕಾಲದಿಂದ ಬಾಕಿಯಿರುವ ಈ ಸಮಸ್ಯೆಗೆ ನಾವು ಸಂಕಷ್ಟದ ಸೂತ್ರವನ್ನು ಬಯಸುತ್ತೇವೆ. ವೈಜ್ಞಾನಿಕ ಮತ್ತು ಪ್ರಾಯೋಗಿಕ ವಿಧಾನವನ್ನು ಆಧರಿಸಿದ ಒಂದು ಸೂತ್ರ ಅಗತ್ಯವಿದೆ. ಸೂತ್ರವಿಲ್ಲದ ಹೊರತು ನಮಗೆಲ್ಲರಿಗೂ ಮುಜುಗರದ ಪರಿಸ್ಥಿತಿಯಾಗಿದೆ' ಎಂದು ಎಎನ್‌ಐಗೆ ತಿಳಿಸಿದರು.

ಕಾವೇರಿ ನೀರು ನಿಯಂತ್ರಣ ಸಮಿತಿಯು (ಸಿಡಬ್ಲ್ಯುಆರ್‌ಸಿ) ಮಧ್ಯಂತರ ಆದೇಶ ಹೊರಡಿಸಿದ್ದು, ಮಂಗಳವಾರದಿಂದ (ಆಗಸ್ಟ್ 28) ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದೆ.

ಹದಿನೈದು ದಿನಗಳವರೆಗೆ ನೀರು ಬಿಟ್ಟರೆ ನಮ್ಮ ಕುಡಿಯುವ ನೀರು ಮತ್ತು ನಮ್ಮ ರೈತರ ಹಿತಾಸಕ್ತಿಗೆ ತೊಂದರೆ ಉಂಟಾಗಲಿದೆ ಎಂದು ಎಂಬಿ ಪಾಟೀಲ ಹೇಳಿದರು.

ಪ್ರತಿನಿತ್ಯ 24 ಸಾವಿರ ಕ್ಯುಸೆಕ್ ಕಾವೇರಿ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ಮೇಲೆ ಯಾವುದೇ ಆದೇಶ ನೀಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್‌, ಕರ್ನಾಟಕವು ತಮಿಳುನಾಡಿಗೆ ಬಿಡುಗಡೆ ಮಾಡಿರುವ ಕಾವೇರಿ ನದಿ ನೀರಿನ ಪ್ರಮಾಣದ ವರದಿಯನ್ನು ಸಲ್ಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಿದ್ದು, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿದೆ.

ಕರ್ನಾಟಕದಲ್ಲಿರುವ ಜಲಾಶಯಗಳಿಂದ ಪ್ರತಿದಿನ 24,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಮೊದಲು ನಮ್ಮ ರಾಜ್ಯದ ರೈತರಿಗೆ ಆದ್ಯತೆ ನೀಡಿ, ಕಾವೇರಿ ಮತ್ತು ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿನ ಬೆಳೆಗಳಿಗೆ ಆದ್ಯತೆ ಮೇರೆಗೆ ನೀರು ಹರಿಸಿ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸೂಚನೆ ನೀಡಿದ್ದಾರೆ.

'ನಾವು 83 ಟಿಎಂಸಿ ನೀರನ್ನು ಬಿಡಲು ಸಾಧ್ಯವಿಲ್ಲ. ಏಕೆಂದರೆ, ಇದು ಜಲಾಶಯಗಳನ್ನು ಖಾಲಿ ಮಾಡುತ್ತದೆ ಮತ್ತು ಕುಡಿಯುವ ನೀರಿಗೆ ತೊಂದರೆ ಉಂಟುಮಾಡುತ್ತದೆ' ಎಂದು ಅವರು ಹೇಳಿದರು.

ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿರುವ ಸಿಡಬ್ಲ್ಯುಆರ್‌ಎ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಹಲವಾರು ರೈತರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ಕಾವೇರಿ ನೀರಿನ ಸಮಸ್ಯೆಯು ಕರ್ನಾಟಕ ಮತ್ತು ತಮಿಳುನಾಡು ನಡುವೆ ದಶಕಗಳಿಂದ ವಿವಾದಾಸ್ಪದ ವಿಷಯವಾಗಿ ಉಳಿದುಕೊಂಡಿದೆ. ಲಕ್ಷಾಂತರ ಜನರಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಕಾವೇರಿ ನದಿಯ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ನಡುವೆ ಸಮಸ್ಯೆ ಬಿಗಡಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com