ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಮುಂಗಾರು ದುರ್ಬಲ; ಸೆಪ್ಟೆಂಬರ್ 8 ರ ನಂತರ ಮಳೆ ಸಾಧ್ಯತೆ: ಐಎಂಡಿ
ಬೆಂಗಳೂರು: ರಾಜ್ಯದಲ್ಲಿ ಶೇ.21ರಷ್ಟು ಮಳೆ ಕೊರತೆಯುಂಟಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ.35ರಷ್ಟು ಕೊರತೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಯ ಅಧಿಕಾರಿಗಳು ಹೇಳಿದ್ದಾರೆ.
ತಾಪಮಾನ ಏರಿಕೆಯಾಗಿದ್ದು, ಸೆಪ್ಟೆಂಬರ್ 8 ರವರೆಗೆ ಇದೇ ರೀತಿಯ ಪರಿಸ್ಥಿತಿ ಮುಂದುವರೆಯುತ್ತದೆ. ನಂತರ ರಾಜ್ಯದಲ್ಲಿ 15 ದಿನಗಳ ಕಾಲ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ (ನೈಋತ್ಯ ಮಾನ್ಸೂನ್‌ನ ಕೊನೆಯ ತಿಂಗಳು) ರಾಜ್ಯದಲ್ಲಿ 16 ಸೆಂ.ಮೀನಷ್ಟು ಮಳೆಯಾಗಬೇಕಿದೆ, ಆಗಸ್ಟ್ ತಿಂಗಳಿನಲ್ಲಿ 21.7 ಸೆಂ.ಮೀ.ನಷ್ಟು ಆಗಬೇಕಿದ್ದ ಮಳೆ ಆಗಸ್ಟ್ 29, 2023 ರವರೆಗೆ 5.2 ಸೆಂ.ಮೀನಷ್ಟು ಅಷ್ಟೇ ಮಳೆಯಾಗಿದೆ.
ನೈಋತ್ಯ ಮಾನ್ಸೂನ್ ಹಿಮಾಲಯದ ತಪ್ಪಲಿನತ್ತ ಸಾಗಿದ್ದು, ಹೀಗಾಗಿ ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಮುಂಗಾರು ದುರ್ಬಲವಾಗಿದ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಪಶ್ಚಿಮ ಘಟ್ಟಗಳು, ನೀಲಗಿರಿ ಮತ್ತು ಕೊಯಮತ್ತೂರು ಹೊರತುಪಡಿಸಿ, ಬಹುತೇಕ ಭಾಗಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ (7 ಸೆಂ.ಮೀ.ಗಿಂತ ಹೆಚ್ಚು)ಯಾಗಲಿದೆ. ಮೆಟ್ಟೂರು ಅಣೆಕಟ್ಟು ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಸೆಪ್ಟೆಂಬರ್ 8 ರಿಂದ ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಅಲ್ಲದೆ, ಸಾಮಾನ್ಯ ಮಳೆಯಾಗಲಿದೆ. ಸೆಪ್ಟೆಂಬರ್‌ನಲ್ಲಿ ಮಳೆಯ ಮುನ್ಸೂಚನೆಗಳಿದ್ದರೂ ಇದು ಕೊರತೆಯನ್ನು ನೀಗಿಸುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ