'ಜೈ ಶ್ರೀರಾಮ್' ಹೇಳುವಂತೆ ಒತ್ತಾಯ: ಹಿರಿಯ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ, ಎಫ್ಐಆರ್ ದಾಖಲು!

‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ 65 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನ.25ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹುಸೇನಸಾಬ್
ಹುಸೇನಸಾಬ್

ಕೊಪ್ಪಳ: ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ 65 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನ.25ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಮೆಹಬೂಬ್ ನಗರದ ಹುಸೇನಸಾಬ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲಸದ‌ ನಿಮಿತ್ತ ಹೊಸಪೇಟೆಗೆ ಹೋಗಿ ನ. 25ರಂದು ಮಧ್ಯರಾತ್ರಿ ಗಂಗಾವತಿಗೆ ಬಂದು ಮನೆಗೆ ಹೋಗಲು ಆಟೋ ನಿಲ್ದಾಣದ ಬಳಿ ಕಾಯುತ್ತಿದ್ದೆ. ಈ ವೇಳೆ ಬೈಕ್ ಮೇಲೆ ಬಂದ ಇಬ್ಬರು ಯುವಕರು ಎಲ್ಲಿಗೆ ಹೋಗುತ್ತಿದ್ದಿಯಾ? ಎಂದು ಪ್ರಶ್ನಿಸಿದರು. ಬಳಿಕ ಬಲವಂತವಾಗಿ ಬೈಕ್ ಮೇಲೆ ಕೂರಿಸಿಕೊಂಡು ಪಂಪಾನಗರ ಬಳಿ ಕರೆದುಕೊಂಡು ಹೋದರು.

ನಂತರ ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಕೊಲೆ ಬೆದರಿಕೆ ಹಾಕಿದರು. ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದುಕೊಂಡು ಹೋಗಿ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.

ನೆಲದ ಮೇಲೆ ನನ್ನನ್ನು ಬೀಳಿಸಿ ಹಲ್ಲೆ ಮಾಡಿದ ಯುವಕರ ಗುಂಪು, ಬಿಯರ್ ಬಾಟಲಿಯನ್ನು ಒಡೆದು ಗಾಜಿನ ತುಂಡಿನಿಂದ ನನ್ನ ಗಡ್ಡವನ್ನು ಕತ್ತರಿಸಲು ಪ್ರಯತ್ನಿಸಿದರು. ಈ ಪ್ರಯತ್ನ ಯಶಸ್ವಿಯಾಗದಿದ್ದಾಗ ನನ್ನ ಗಡ್ಡಕ್ಕೆ ಬೆಂಕಿ ಹಚ್ಚಿದರು. ಕೂಡಲೇ ಅದನ್ನು ನಂದಿಸಿದೆ. ನನಗೆ ಕಣ್ಣು ಕಾಣಿಸುವುದಿಲ್ಲ ಎಂದು ಹೇಳಿದರೂ, ಬಿಡದ ಯುವಕರು ಧಳಿಸಿದರು. ಬಳಿಕ ಬಳಿಯಿದ್ದ ಹಣ ದೋಚಿಕೊಂಡು ಹೋದರು. ಬೆಳಗಿನ ಜಾವ ಕುರಿ ಕಾಯುವ ಹುಡುಗರು ನನ್ನನ್ನು ರಕ್ಷಣೆ ಮಾಡಿ, ಮನೆಗೆ ತಲುಪಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹುಸೇನಸಾಬ್ ಅವರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಹುಸೇನ್ ಅವರನ್ನು ಭೇಟಿ ಮಾಡಿ, ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಪೊಲೀಸರು ಇದೀಗ ಬಸ್ ನಿಲ್ದಾಣ, ಮುಖ್ಯರಸ್ತೆ, ಪಂಪಾನಗರದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಹುಸೇನಸಾಬ್ ಅವರು ತಮ್ಮ ಮಗಳೊಂದಿಗೆ ಗಂಗಾವತಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ. ದೃಷ್ಟಿ ಹೀನವಾಗುತ್ತಿರುವುದರಿಂದ ಕಳೆದ ಕೆಲ ತಿಂಗಳಿಂದ ಕೊಪ್ಪಳ, ವಿಜಯನಗರ ಜಿಲ್ಲೆಗಳ ಹಲವೆಡೆ ಭಿಕ್ಷಾಟನೆ ನಡೆಸುತ್ತಿದ್ದಾರೆ.

ಘಟನೆ ಬೆನ್ನಲ್ಲೇ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸದಸ್ಯರು ಗಂಗಾವತಿಯಲ್ಲಿರುವ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

''ನಮ್ಮ ಜಿಲ್ಲೆಯಲ್ಲಿ ಎಲ್ಲ ವರ್ಗದ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ವೃದ್ಧ ವ್ಯಕ್ತಿಯನ್ನು ಥಳಿಸಿ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಬಲವಂತ ಮಾಡಿರುವುದು ಕ್ರೂರತನ. ವೃದ್ಧ ವ್ಯಕ್ತಿಯ ಹಲ್ಲೆ ಮತ್ತು ಮಾನಸಿಕ ಹಿಂಸೆ ನೀಡಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಹುಸೇನಸಾಬ್ ಅವರ ಚಿಕಿತ್ಸಾ ವೆಚ್ಚವನ್ನು ಎಸ್‌ಡಿಪಿಐ ಭರಿಸಲು ನಿರ್ಧರಿಸಿದೆ ಎಂದು ಕೊಪ್ಪಳದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಲೀಂ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com