ಎಸ್‌ಸಿ/ಎಸ್‌ಟಿ ಮೀಸಲಾತಿ ನೆಪದಲ್ಲಿ ಹೊಸ ಮದ್ಯದಂಗಡಿ ತೆರೆಯದಿರಿ: ಸರ್ಕಾರಕ್ಕೆ ಬಿಜೆಪಿ ಆಗ್ರಹ

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡುವ ನೆಪದಲ್ಲಿ ಹೊಸ ಮದ್ಯದಂಗಡಿ ತೆರೆಯಲು ಪರವಾನಗಿ ನೀಡದಂತೆ ಪ್ರತಿಪಕ್ಷ ಬಿಜೆಪಿ ಮಂಗಳವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡುವ ನೆಪದಲ್ಲಿ ಹೊಸ ಮದ್ಯದಂಗಡಿ ತೆರೆಯಲು ಪರವಾನಗಿ ನೀಡದಂತೆ ಪ್ರತಿಪಕ್ಷ ಬಿಜೆಪಿ ಮಂಗಳವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ನಿನ್ನೆಯಷ್ಟೇ ಮದ್ಯದಂಗಡಿ ಪರವಾನಗಿ ನೀಡುವಲ್ಲಿ ಕಾನೂನು ಉಲ್ಲಂಘಿಸಿರುವ ವಿಷಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.

ಸಿಎಲ್ 7 ಸನ್ನದು ಪರವಾನಗಿಯಂತೂ ದಂಧೆಯಾಗಿದೆ. ಸಾವಿರ ಕೋಟಿ ರೂ. ಹಗರಣವಾಗಿದೆ. ಇದನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಸದಸ್ಯರು ಪಕ್ಷ ಬೇಧ ಮರೆತು ಆರೋಪಿಸಿದರು.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕಾನೂನು ಉಲ್ಲಂಘಿಸಿ ಮದ್ಯದ ಅಂಗಡಿ ಲೈಸನ್ಸ್ ನೀಡಲಾಗಿದೆ ಎಂಬ ಕಾಂಗ್ರೆಸ್ ಸದಸ್ಯರ ಆಕ್ಷೇಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಹಿಂದಿನ ಅಬಕಾರಿ ಸಚಿವರೂ ಆಗಿದ್ದ ಶಾಸಕ ಗೋಪಾಲಯ್ಯ, ಸರ್ಕಾರಕ್ಕೆ ಧೈರ್ಯ ಮತ್ತು ಕಾಳಜಿ ಇದ್ದರೆ ಈ ಬಗ್ಗೆ ತನಿಖೆ ಮಾಡಿ ಅಕ್ರಮವಾಗಿರುವುದನ್ನು ರದ್ದು ಮಾಡಿ ಎಂದು ಸವಾಲು ಹಾಕಿದರು.

ಪ್ರಶ್ನೋತ್ತರದ ಅವಧಿಯಲ್ಲಿ ಕಾಂಗ್ರೆಸ್​ನ ಎಸ್.ಎನ್.ನಾರಾಯಣಸ್ವಾಮಿ ವಿಷಯ ಪ್ರಸ್ತಾಪಿಸಿ, ತಮ್ಮ ಕ್ಷೇತ್ರದಲ್ಲಿ ನಿಯಮ ಮೀರಿ ಸಿಎಲ್ 7 ಪರವಾನಗಿ ನೀಡಲಾಗಿದೆ. ಇದರಲ್ಲಿ ಶೇ.80 ನಿಯಮಗಳ ಉಲ್ಲಂಘನೆಯಾಗಿದೆ. ಜಿಲ್ಲಾ ಅಬಕಾರಿ ಕಚೇರಿಯಲ್ಲಿ ಸೂಪರಿಟೆಂಡೆಂಟ್ ನಿಯಮ ಮೀರಿ ಪರವಾನಗಿಗಳನ್ನು ಕೊಟ್ಟಿದ್ದಾರೆ. ಪರವಾನಗಿ ಕೊಟ್ಟಿರುವ ಮದ್ಯದಂಗಡಿಗಳಲ್ಲಿ ಅವರೇ ಪಾಲುದಾರರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಸಿಎಲ್ 7 ಪರವಾನಗಿಗಳನ್ನು ನೀಡಬೇಕಾದರೆ 18 ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಬಹುತೇಕ ಎಲ್ಲ ಸನ್ನದ್ಧುದಾರರಲ್ಲೂ ಪ್ರಮಾಣಪತ್ರಗಳಿವೆ. ಆದರೆ, ಕಟ್ಟಡ ವಿನ್ಯಾಸ ಮತ್ತು ರ್ಪಾಂಗ್ ಸ್ಥಳದ ಬಗ್ಗೆ ಸ್ಪಷ್ಟ ನಿಯಮಗಳಿಲ್ಲ. ತಮ್ಮ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ನಿಯಮಗಳನ್ನು ರೂಪಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: ಅಬಕಾರಿ ಕಾಯಿದೆಗೆ ತಿದ್ದುಪಡಿ; ಪರವಾನಗಿಯಲ್ಲೂ ಮೀಸಲಾತಿ ನೀಡುವ ಬಗ್ಗೆ ಪರಿಶೀಲನೆ: ಸಚಿವ ತಿಮ್ಮಾಪುರ

3975 ಸಿಎಲ್ 2 ಪರವಾನಗಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ತಲಾ 65 ಹಂಚಿಕೆ ಮಾಡಲಾಗಿದೆ. 3024 ಸಿಎಲ್ ಲೈಸನ್ಸ್ ನಲ್ಲಿ ಪರಿಶಿಷ್ಟ ಜಾತಿಗೆ 49, ಪರಿಶಿಷ್ಟ ಪಂಗಡಕ್ಕೆ 34, ಸಿಎಲ್ 7ರ 2444 ರಲ್ಲಿ ಪರಿಶಿಷ್ಟ ಜಾತಿಗೆ 96, ಪರಿಶಿಷ್ಟ ಪಂಗಡಕ್ಕೆ 68 ಪರವಾನಗಿ ನೀಡಲಾಗಿದೆ. ಮೀಸಲಾತಿ ಜಾರಿಯಾಗಿಲ್ಲ ಎಂಬುದು ಸರಿಯಿದೆ. ಈ ಕುರಿತು ಅನುಸೂಚಿತ ಜಾತಿ ಮತ್ತು ಪಂಗಡಗಳ ಸಮಿತಿಯೂ ವರದಿ ನೀಡಿದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಇದೇ ವೇಳೆ ಭರವಸೆ ನೀಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಕೆ.ಎಂ.ಶಿವಲಿಂಗೇಗೌಡ ಸಿಎಲ್ 7 ದಂಧೆಯಾಗಿದೆ ಎಂದರೆ, ಇದು ಸುಮಾರು 1 ಸಾವಿರ ಕೋಟಿ ರೂ.ಗಳಷ್ಟು ಹಗರಣ. ಈ ಬಗ್ಗೆ ತನಿಖೆಯಾಗಬೇಕು ಎಂದು ಬೇಳೂರು ಗೋಪಾಲಕೖಷ್ಣ ಒತ್ತಾಯಿಸಿದರು.

ನಿಯಮ ಉಲ್ಲಂಘನೆಯಾಗಿದ್ದರೆ ಯಾರ ಕಾಲದಲ್ಲಿ ನೀಡಿರುವ ಲೈಸನ್ಸ್ ಆಗಿದ್ದರೂ ರದ್ದು ಮಾಡಿ ಎಂದು ಆರ್.ಅಶೋಕ್ ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com