ಅಮೃತ್ ಭಾರತ್ ನಿಲ್ದಾಣ ಯೋಜನೆ: ಕೆಆರ್ ಪುರಂ, ವೈಟ್‌ಫೀಲ್ಡ್ ಸೇರಿದಂತೆ 15 ರೈಲು ನಿಲ್ದಾಣಗಳ ನವೀಕರಣ

ಬೆಂಗಳೂರಿನ ಹೊರವಲಯದಲ್ಲಿರುವ ರೈಲು ನಿಲ್ದಾಣಗಳು ‘ಅಮೃತ್ ಭಾರತ್ ನಿಲ್ದಾಣ ಯೋಜನೆ’ ಅಡಿಯಲ್ಲಿ ಹೊಸ ರೂಪ ಪಡೆಯಲು ಸಿದ್ಧವಾಗಿವೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್ ಹೇಳಿದ್ದಾರೆ. 
ವೈಟ್‌ಫೀಲ್ಡ್ ರೈಲ್ವೆ ನಿಲ್ದಾಣ
ವೈಟ್‌ಫೀಲ್ಡ್ ರೈಲ್ವೆ ನಿಲ್ದಾಣ

ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿರುವ ರೈಲು ನಿಲ್ದಾಣಗಳು ‘ಅಮೃತ್ ಭಾರತ್ ನಿಲ್ದಾಣ ಯೋಜನೆ’ ಅಡಿಯಲ್ಲಿ ಹೊಸ ರೂಪ ಪಡೆಯಲು ಸಿದ್ಧವಾಗಿವೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್ ಹೇಳಿದ್ದಾರೆ. 

ಬಂಗಾರಪೇಟೆ, ಕೆಂಗೇರಿ, ಕೃಷ್ಣರಾಜಪುರಂ, ಮಂಡ್ಯ, ಚನ್ನಪಟ್ಟಣ, ಹೊಸೂರು, ಹಿಂದೂಪುರ, ಕುಪ್ಪಂ, ಮಾಲೂರು, ರಾಮನಗರ, ತುಮಕೂರು ಮತ್ತು ವೈಟ್‌ಫೀಲ್ಡ್ ಸೇರಿದಂತೆ 15 ನಿಲ್ದಾಣಗಳು ಆಧುನೀಕರಣಗೊಳ್ಳಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸೋಮವಾರ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ (ಡಿಆರ್‌ಯುಸಿಸಿ) ಮೂರನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಯೋಗೇಶ್ ಮೋಹನ್, ತುಮಕೂರಿನ ಕ್ಯಾತಸಂದ್ರ, ನಿಡವಂಡ, ಪೆನುಕೊಂಡ ಮತ್ತು ವೈಟ್‌ಫೀಲ್ಡ್‌ನಲ್ಲಿರುವ ಗೂಡ್ಸ್ ಶೆಡ್‌ಗಳನ್ನು ಫೆನ್ಸಿಂಗ್‌, ಆಶ್ರಯ, ವ್ಯಾಪಾರಿ ಕೊಠಡಿ, ಕಾರ್ಮಿಕರಿಗೆ ಕ್ಯಾಂಟೀನ್ ಮತ್ತು ವಿಶ್ರಾಂತಿ ಕೊಠಡಿಯಂತಹ ಸೌಲಭ್ಯಗಳೊಂದಿಗೆ ನವೀಕರಿಸಲು ಉದ್ದೇಶಿಸಲಾಗಿದೆ ಎಂದರು. 

<strong>ಸಭೆಯಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್</strong>
ಸಭೆಯಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್

ಕಳೆದ ಒಂದು ವರ್ಷದಲ್ಲಿ ವಿಭಾಗದ ಸಾಧನೆಗಳನ್ನು ವಿವರಿಸಿದ ಮೋಹನ್, ನವೆಂಬರ್‌ನಲ್ಲಿ 24.22 ಕೋಟಿ ರೂ. ಆದಾಯ ಬಂದಿದ್ದು, ಇದು ಇದುವರೆಗಿನ ತಿಂಗಳೊಂದರಲ್ಲಿ ಅತ್ಯಧಿಕ ಸರಕು ಸಾಗಣೆ ಆದಾಯವಾಗಿದೆ. ಪ್ರಸಕ್ತ ವರ್ಷದಲ್ಲಿ ಈ ವಿಭಾಗವು ಇಲ್ಲಿಯವರೆಗೆ 173.17 ಕೋಟಿ ರೂ.ಗಳ ಒಟ್ಟು ಸರಕು ಸಾಗಣೆ ಆದಾಯವನ್ನು ದಾಖಲಿಸಿದೆ ಎಂದು ಹೇಳಿದರು.

ಈ ವರ್ಷ ವಿಭಾಗವು ಅನೇಕ ಪ್ರಥಮಗಳನ್ನು ದಾಖಲಿಸಿದೆ. 'ಈ ವರ್ಷದ ಏಪ್ರಿಲ್‌ನಲ್ಲಿ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರೂಪದಲ್ಲಿ ಹೊಸ ಸಂಚಾರ ಪ್ರಾರಂಭವಾಗಿದೆ. ಇಲ್ಲಿಯವರೆಗೆ 63 ರೇಕ್‌ಗಳನ್ನು ಲೋಡ್ ಮಾಡಲಾಗಿದ್ದು, ಇದರಿಂದ 9.33 ಕೋಟಿ ರೂ. ಆದಾಯ ಬಂದಿದೆ. ಅಕ್ಟೋಬರ್‌ನಲ್ಲಿ, ದೊಡ್ಡಬಳ್ಳಾಪುರದಿಂದ ರಾಜಸ್ಥಾನದ ಕನಕಪುರಕ್ಕೆ ಮೊದಲ ಬಾರಿಗೆ ಟ್ರ್ಯಾಕ್ಟರ್‌ಗಳನ್ನು ಲೋಡ್ ಮಾಡಲಾಗಿದೆ' ಎಂದು ಮೋಹನ್ ಹೇಳಿದರು.

ನವೆಂಬರ್ 2023 ರವರೆಗೆ 515 ರೇಕ್‌ಗಳನ್ನು ಲೋಡ್ ಮಾಡಲಾಗಿದ್ದು,  ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 46 ರಷ್ಟು ಬೆಳವಣಿಗೆ ಕಂಡುಬಂದಿದೆ. ಹೆಚ್ಚುವರಿಯಾಗಿ, ರೈಲುಗಳ ಮೂಲಕ ಆಟೋಮೊಬೈಲ್‌ಗಳ ಸಾಗಣೆಯು ಗಮನಾರ್ಹವಾದ ಹೆಚ್ಚಳವನ್ನು ಕಂಡಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com