ಬೆಳಗಾವಿ: ಗುರುವಾರ ಬೆಳಗಾವಿ ಜಿಲ್ಲೆಯ ಬಾಂಬರ್ಗೆ ಕ್ರಾಸ್‌ನಲ್ಲಿ ಕಾರು ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ 12 ವರ್ಷದ ಬಾಲಕಿ ಮತ್ತು ಓರ್ವ ಪುರುಷ ಸಜೀವ ದಹನಗೊಂಡಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರು ಸಂಬಂಧಿಕರಾಗಿದ್ದರು. ಅವರನ್ನು ಬಾಂಬರ್ಗೆ ನಿವಾಸಿಗಳಾದ 24 ವರ್ಷದ ಮೋಹನ ಮಾರುತಿ ಬೆಳಗೋಕರ್ ಮತ್ತು ಮಚ್ಚೆ ಗ್ರಾಮದ ಸಮೀಕ್ಷಾ ದೇಯಕರ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಒಟ್ಟು ನಾಲ್ಕು ಜನರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ಬಾಂಬರ್ಗೆ ಕ್ರಾಸ್‌ನಲ್ಲಿ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಟಿಪ್ಪರ್‌ನ ಡೀಸೆಲ್ ಟ್ಯಾಂಕ್‌ಗೆ ಹಾನಿಯಾಗಿದ್ದು, ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾರು ಮತ್ತು ಟಿಪ್ಪರ್ ಎರಡನ್ನೂ ಆವರಿಸಿದೆ ಎಂದು ಪೊಲೀಸ್ ವರದಿ ತಿಳಿಸಿದೆ.
ದೇವಗಿರಿಯಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಕಾರಿನಲ್ಲಿ ಮರಳಿ ಬಾಂಬರ್ಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಕಾರಿನಲ್ಲಿದ್ದ ನಾಲ್ವರಲ್ಲಿ ಮಹೇಶ್ ಬೆಳಗೋಕರ್ ಮತ್ತು ಸ್ನೇಹಾ ಬೆಳಗುಂದಕರ್ ಇಬ್ಬರನ್ನು ರಕ್ಷಿಸಿದ್ದಾರೆ.
ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ, ತುರ್ತು ಸೇವಾ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಕಾಕತಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಟಿಪ್ಪರ್ ವಾಹನದ ಚಾಲಕ ಪೊಲೀಸರಿಗೆ ಶರಣಾಗಿದ್ದಾನೆ.
Advertisement