ಭೂ ಮಾಲೀಕರಿಂದ ನಿಯಮ ಉಲ್ಲಂಘನೆ: ನಗರದಲ್ಲಿ ಅನಧಿಕೃತ ಬೋರ್ ವೆಲ್'ಗಳ ಹೆಚ್ಚಳ!

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ)ಯಿಂದ ಅನುಮತಿ ಪಡೆಯದ ಹೊರತು ನಗರದಲ್ಲಿ ಬೋರ್‌ವೆಲ್‌ಗಳನ್ನು ಕೊರೆಯುವಂತಿಲ್ಲ. ಈ ನಿಯಮದ ಹೊರತಾಗಿಯೂ ನಗರದಲ್ಲಿ ಭೂ ಮಾಲೀಕರು ಬೋರ್ ವೆಲ್ ಗಳನ್ನು ಕೊರೆಸುತ್ತಿರುವುದು ವರದಿಯಾಗುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ)ಯಿಂದ ಅನುಮತಿ ಪಡೆಯದ ಹೊರತು ನಗರದಲ್ಲಿ ಬೋರ್‌ವೆಲ್‌ಗಳನ್ನು ಕೊರೆಯುವಂತಿಲ್ಲ. ಈ ನಿಯಮದ ಹೊರತಾಗಿಯೂ ನಗರದಲ್ಲಿ ಭೂ ಮಾಲೀಕರು ಬೋರ್ ವೆಲ್ ಗಳನ್ನು ಕೊರೆಸುತ್ತಿರುವುದು ವರದಿಯಾಗುತ್ತಿವೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕಚೇರಿ ಬಳಿಯೇ ಭೂ ಮಾಲೀಕರೊಬ್ಬರು ನಿಯಮ ಉಲ್ಲಂಘಿಸಿ ಬೋರ್‌ವೆಲ್‌ ಕೊರೆಸಿರುವುದು ಬೆಳಕಿಗೆ ಬಂದಿದೆ. ಹೆಚ್ಎಎಲ್ ವಾರ್ಡ್ ವ್ಯಾಪ್ತಿಗೆ ಬರುವ ತಲಕಾವೇರಿ ಲೇಔಟ್ ನಲ್ಲಿ. ಡಿ.8ರಂದು ಅಕ್ರಮವಾಗಿ ಕೊಳವೆಬಾವಿ ಕೊರೆಸಿರುವುದು ವರದಿಯಾಗಿದೆ.

ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ನಾರಾಯಣಪುರ ಉಪವಿಭಾಗದ ಬಿಡಬ್ಲ್ಯುಎಸ್‌ಎಸ್‌ಬಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹಮ್ಮದ್ ಮುದಸ್ಸಿರ್ ಅವರು, ಅನಧಿಕೃತ ಬೋರ್‌ವೆಲ್‌ ನಿರ್ಮಾಣವನ್ನು ತಡೆದರು. ಅಲ್ಲದೆ, ಈ ಕುರಿತು ಕ್ರಮ ಕೈಗೊಳ್ಳುವಂತೆ ಅಂತರ್ಜಲ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.

ಅನುಮತಿ ಇಲ್ಲದೆ ಬೋರ್‌ವೆಲ್‌ ಕೊರೆಯಲಾಗುತ್ತಿದೆ ಎಂಬ ಮಾಹಿತಿ ಬಂದ ತಕ್ಷಣ ನಾನು ಸ್ಥಳಕ್ಕೆ ಭೇಟಿ ನೀಡಿದ್ದೆ. ಸ್ಥಳದಲ್ಲಿದ್ದ ಕಾರ್ಮಿಕರು ಹಾಗೂ ವಾಹನ ಚಾಲಕರನ್ನು ವಿಚಾರಿಸಿದೆ. ಈ ವೇಳೆ ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಅಂತರ್ಜಲ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದಿರುವುದು ತಿಳಿದುಬಂದಿತ್ತು. ಬಳಿಕ ಭೂಕೊರೆತ ಕಾರ್ಯ ನಿಲ್ಲುವಂತೆ ಸೂಚಿಸಿ. ಅನ್ನಸಂದ್ರ ಪಾಳ್ಯ ಮುಖ್ಯರಸ್ತೆಯಲ್ಲಿ ಇನ್ನೊಂದು ಕಾಮಗಾರಿ ಪರಿಶೀಲನೆಗೆ ತೆರಳಿದ್ದೆ. ಮರಳಿ ಸ್ಥಳಕ್ಕೆ ಬರುವಷ್ಟರಲ್ಲಿ ಸ್ಥಳದಲ್ಲಿ ಕಾರ್ಮಿಕರು ಸೇರಿದಂತೆ ಯಾರೊಬ್ಬರೂ ಇರಲಿಲ್ಲ.

ಈ ಸಂಬಂಧ ಅಂತರ್ಜಲ ಪ್ರಾಧಿಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದ್ದೇನೆ. ಭೂಮಿಯನ್ನ ಕೊರೆಯುತ್ತಿದ್ದ ಲಾರಿಯ (ಕೆಎ-06-ಝಡ್-7477) ವಿವರಗಳನ್ನೂ ತಿಳಿಸಿದ್ದೇನೆಂದು ಮುದಸ್ಸಿರ್ ಅವರು ತಿಳಿಸಿದ್ದಾರೆ.

ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಉಪನಿರ್ದೇಶಕ ಜಿ ಜಯಣ್ಣ ಮಾತನಾಡಿ, ಬೆಂಗಳೂರು ವ್ಯಾಪ್ತಿಯಲ್ಲಿ ಕಾವೇರಿ ನೀರು ಪೂರೈಕೆ ಕಡಿಮೆಯಾದಾಗ ಅಥವಾ ಪೂರೈಕೆ ಇಲ್ಲದಿರುವ ಸಂದರ್ಭದಲ್ಲಿ ಕುಡಿಯುವ ನೀರಿನ ಉದ್ಧೇಶಕ್ಕಾಗಿ ಮಾತ್ರವೇ ಬೋರ್ ವೆಲ್ ಕೊರೆಯಲು ಅನುಮತಿ ನೀಡಬೇಕಾಗುತ್ತದೆ. ಇದರ ಹೊರತಾಗಿ ಅನುಮತಿ ಪಡೆಯದೆ ಅನಧಿಕೃತ ಬೋರ್‌ವೆಲ್‌ಗಳನ್ನು ಕೊರೆಯುವುದು ಕಂಡುಬಂದರೆ ದಂಡ ವಿಧಿಸುವ ಮತ್ತು ಬೋರ್‌ವೆಲ್ ಕೊರೆಯುವ ವಾಹನಗಳನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಬಿಡಬ್ಲ್ಯೂಎಸ್‌ಎಸ್‌ಬಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಎಚ್‌ಎಎಲ್‌ ವಾರ್ಡ್‌ನ ನಿವಾಸಿಯೊಬ್ಬರು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಮಹದೇವಪುರ ವಲಯದಲ್ಲಿ ಅಕ್ರಮವಾಗಿ ಬೋರ್‌ವೆಲ್‌ಗಳು ಕೊರೆಯುತ್ತಿರುವುದು ಕಂಡು ಬರುತ್ತಿದೆ. ಪ್ರಮುಖವಾಗಿ ಕೆರೆಗಳ ಸುತ್ತ ಹೆಚ್ಚಾಗಿ ಬೋರ್ ವೆಲ್ ಗಳನ್ನು ಕೊರೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com