ಹೊಸದಾಗಿ ವೈಜ್ಞಾನಿಕ ಜಾತಿ ಸಮೀಕ್ಷೆ ನಡೆಸಿ: ಸಿಎಂ ಸಿದ್ದರಾಮಯ್ಯಗೆ ಲಿಂಗಾಯತರ ಮನವಿ

ವೈಜ್ಞಾನಿಕ ಮತ್ತು ವಾಸ್ತವಾಂಶ ಆಧಾರಿತವಾಗಿ ಹೊಸದಾಗಿ ಜಾತಿ ಜನಗಣತಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದ ನಿಯೋಗ ಶುಕ್ರವಾರ ಮನವಿ ಮಾಡಿಕೊಂಡಿದೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಳಗಾವಿ: ವೈಜ್ಞಾನಿಕ ಮತ್ತು ವಾಸ್ತವಾಂಶ ಆಧಾರಿತವಾಗಿ ಹೊಸದಾಗಿ ಜಾತಿ ಜನಗಣತಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದ ನಿಯೋಗ ಶುಕ್ರವಾರ ಮನವಿ ಮಾಡಿಕೊಂಡಿದೆ.

ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಶಾಸಕ ಶಾಮನೂರ ಶಿವಶಂಕರಪ್ಪ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಚಿವರು, ಶಾಸಕರ ನಿಯೋಗ ಸಿದ್ದರಾಮಯ್ಯ ಅವರನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಭೇಟಿ ಮಾಡಿ, ಮನವಿ ಸಲ್ಲಿಸಿತು.

ನಿಯೋಗದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ, ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಎಂ. ಪಟ್ಟಣ ಇದ್ದರು.

ಗುರುವಾರ ನಡೆದ ಸಮಾಜ ಎಲ್ಲ ಸಚಿವರು ಮತ್ತು ಶಾಸಕರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದೂ ಮನವಿಯಲ್ಲಿ ತಿಳಿಸಲಾಗಿದೆ. ಮನವಿಗೆ ಶಾಸಕರಾದ ಎಂ.ವೈ. ಪಾಟೀಲ, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ ಸಹಿ ಹಾಕಿದ್ದಾರೆ.

ನಾವು ಜಾತಿ ಜನಗಣತಿಯ ವಿರೋಧಿಗಳಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ. ಆದರೆ, ಕಳೆದ 8 ವರ್ಷಗಳ ಹಿಂದ ನಡೆಸಲಾದ ಈ ಸಾಮಾಜಿಕ ಆರ್ಥಿಕ ಸಮೀಕ್ಷೆ ಹಲವು ವೈರುಧ್ಯ ಮತ್ತು ಲೋಪಗಳಿಂದ ಕೂಡಿದೆ. ಇದನ್ನು ಸರಿಪಡಿಸುವ ಅಗತ್ಯವಿದೆ. ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು. ಮಹಾಸಭಾದ ಅನೇಕ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಭೆಗಳಲ್ಲಿ ಈ ಸಮೀಕ್ಷೆಯ ಬಗ್ಗೆ ಪ್ರಸ್ತಾಪಿಸಿದಾಗ ಅನೇಕರು ತಮ್ಮ ಮನೆಗೆ ಸರ್ಕಾರಿ ಅಧಿಕಾರಿಗಳು ಬಂದಿಲ್ಲ. ತಮ್ಮ ಕುಟುಂಬದ ಯಾವುದೇ ಮಾಹಿತಿ ಪಡೆದಿಲ್ಲ. ಕಚೇರಿಯಲ್ಲಿಯೇ ಕುಳಿತು ಈ ಸಮೀಕ್ಷಾ ವರದಿ ಸಿದ್ಧಪಡಿಸಿ ಕಳುಹಿಸಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.

ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆದಾಗ ನಮ್ಮ ವೀರಶೈವ ಲಿಂಗಾಯತ ಸಮುದಾಯದ ಬಹುಪಾಲು ಜನರು ತಮಗೆ ಲಭಿಸುವ ಮೀಸಲಾತಿಯಲ್ಲಿ ಅನಾಯವಾಗುತ್ತದೆ ಎಂಬ ಭಯದಿಂದ ವೀರಶೈವ ಅಥವಾ ಲಿಂಗಾಯತ ಎಂದು ಬರೆಸದ ತಮ್ಮ ಒಳಪಂಗಡಗಳನ್ನು ನಮೂದಿಸಿದ್ದಾರೆ. ಅಂತೆಯೇ ಕರ್ನಾಟಕದಲ್ಲಿರುವ ಹಲವರು ತಮ್ಮ ಜಾತಿಯ ಕುರಿತಂತೆ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ , ನಿಜವಾಗಿಯೂ ಅವರು ಆ ಜಾತಿ, ಸಮುದಾಯಕ್ಕೆ ಸೇರಿದವರೇ ಎಂಬ ಸತ್ಯಾಸತ್ಯತೆ ಅರಿಯಲು ಯಾವುದೇ ಪರಿಶೀಲನೆ ಅಥವಾ ಪರಾಮರ್ಶೆ ಆಗಿಲ್ಲ.ಹೀಗಾಗಿ ಈ ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಹಿತಿಯಲ್ಲೇ ದೋಷವಿದೆ ಎಂಬುದು ನಮ್ಮ ಸಭಾದ ಒಟ್ಟು ಅಭಿಪ್ರಾಯವಾಗಿದೆ.

ಪತಿ 10 ವರ್ಷಗಳಿಗೆ ಒಮ್ಮೆ ಜನಗಣತಿ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಈಗಾಗಲೇ ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ 8 ವರ್ಷದಷ್ಟು ಹಳೆಯದಾಗಿದೆ. ಇದನ್ನು ಯಥಾವತ್ ಅಂಗೀಕರಿಸುವುದು ಸೂಕ್ತ ಅಲ್ಲ. ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಸೇರಿಸಿ ಸಂಪೂರ್ಣ ವೈಜಾನಿಕವಾಗಿ ಹೊಸದಾಗಿ ಜಾತಿ ಜನಗಣತಿ ನಡೆಸಿ ವಾಸ್ತವಾಂಶ ಆಧಾರಿತವಾಗಿ ಅಂಕಿ – ಅಂಶಗಳನ್ನು ದಾಖಲಿಸಿದರೆ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ತಿಳಿಸಲಾಗಿದೆ.‌

ಲಿಂಗಾಯತ ಸಮುದಾಯದ ಈ ಮನವಿ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಅವರು, ದೊಡ್ಡ ಸಮುದಾಯಗಳು ಸಣ್ಣ ಸಮುದಾಯಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದರೆ ಉತ್ತಮವಾಗಿರುತ್ತದೆ. ಆದರೆ, ದೊಡ್ಡ ಸಮುದಾಯವರೇ ಈ ರೀತಿ ವರ್ತಿಸಿದರೆ ಸಣ್ಣ ಸಮುದಾಯದ ಕಥೆಯೇನು? ಬಸವಣ್ಣನವರ ಭೂಮಿ ಬೆಳಗಾವಿ’ಯಲ್ಲಿ ಈ ಆಕ್ಷೇಪ ಎತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಲಿಂಗಾಯತ ನಾಯಕರು ಅಧಿವೇಶನದ ಮುಕ್ತಾಯದ ದಿನದಂದೇ ಈ ಬೇಡಿಕೆಯನ್ನು ಇಟ್ಟಿರುವುದು ವಿಪರ್ಯಾಸ ಸಂಗತಿಯಾಗಿದೆ. ಈ ವಿಚಾರವನ್ನುಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಬಹುದಿತ್ತು,’’ ಎಂದು ಹಿಂದುಳಿದ ವರ್ಗಗಳ ಕೆಲ ನಾಯಕರು ಹೇಳಿದ್ದಾರೆ.

ಬಿಜೆಪಿ ಎಂಎಲ್ಸಿ ಎ.ಎಚ್.ವಿಶ್ವನಾಥ್ ಅವರು ಮಾತನಾಡಿ, ಲಿ ಲಿಂಗಾಯತರು ಮತ್ತು ಒಕ್ಕಲಿಗರ ಈ ಧೋರಣೆಯಿಂದ ಆಶ್ಚರ್ಯವೇನಿಲ್ಲ. ಈ ಹಿಂದೆಯೂ ಇಂತಹ ವರದಿಗಳು ಸಲ್ಲಿಕೆಯಾದಾಗ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಿದ್ದರು. ಒಂದು ವರದಿಯನ್ನು ಲಿಂಗಾಯತರು ಮತ್ತು ಒಕ್ಕಲಿಗರು ಹರಿದು ಹಾಕಿದ್ದರು. ಪ್ರಸ್ತುತದ ವರದಿಯನ್ನು ಇನ್ನೂ ಯಾರು ಓದದೇ ಇರುವಾಗ ಅದು ಅವೈಜ್ಞಾನಿಕ ಎಂದು ಹೇಳಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com