ಆಸ್ತಿಗಾಗಿ ಪತ್ನಿ, ಮಕ್ಕಳಿಂದ ಕಿರುಕುಳ: ಗೋಡೆ ಮೇಲೆ ಡೆತ್ ನೋಟ್ ಬರೆದು ವೃದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು!

ಆಸ್ತಿಗಾಗಿ ಪತ್ನಿ, ಮಕ್ಕಳು ಹಾಗೂ ಮೊಮ್ಮಕ್ಕಳು ನೀಡಿದ ಕಿರುಕುಳ ತಾಳಲಾರದೆ ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟು 82 ವರ್ಷದ ವೃದ್ಧ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ 2ನೇ ಹಂತದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಸ್ತಿಗಾಗಿ ಪತ್ನಿ, ಮಕ್ಕಳು ಹಾಗೂ ಮೊಮ್ಮಕ್ಕಳು ನೀಡಿದ ಕಿರುಕುಳ ತಾಳಲಾರದೆ ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟು 82 ವರ್ಷದ ವೃದ್ಧ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ 2ನೇ ಹಂತದಲ್ಲಿ ನಡೆದಿದೆ.

ಎನ್‌ಜಿಇಎಫ್ ನಿವೃತ್ತ ಉದ್ಯೋಗಿ ಕೆ.ಬಿ.ಪುಟ್ಟಸುಬ್ಬಯ್ಯ (82) ಆತ್ಮಹತ್ಯೆಗೆ ಶರಣಾದ ವೃದ್ಧ ವ್ಯಕ್ತಿಯಾಗಿದ್ದಾರೆ. ಪುಟ್ಟಸುಬ್ಬಯ್ಯ ಅವರಿಗೆ ಐವರು ಹೆಣ್ಣು ಮಕ್ಕಳಿದ್ದು, ಕುಮಾರಸ್ವಾಮಿ ಲೇಔಟ್ 2ನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ತಮ್ಮ ಪುತ್ರಿಯೊಬ್ಬರ ಮನೆಯಲ್ಲಿ ನೆಲೆಸಿದ್ದರು.

ನಾಗರಭಾವಿ, ಕೊತ್ತನೂರು ಮತ್ತು ಸಾರಕ್ಕಿ ಲೇಔಟ್‌ನಲ್ಲಿ ಪುಟ್ಟಸುಬ್ಬಯ್ಯ ಅವರು ಆಸ್ತಿ ಹೊಂದಿದ್ದು, ತಮ್ಮನ್ನು ನೋಡಿಕೊಳ್ಳುವಂತೆ ಅಂಗಲಾಚಿದರೂ ಯಾವುದೇ ಮಕ್ಕಳು ಜವಾಬ್ದಾರಿ ತೆಗೆದುಕೊಂಡಿರಲಿಲ್ಲ. ಆದರೆ, ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದರು. ಪತ್ನಿ ಮಾಳಮ್ಮ (65), ಹಿರಿಯ ಪುತ್ರಿ ವಿಮಲಾ, ಈಕೆಯ ಪತಿ ಶೇಖರ್, ಪುತ್ರ ಶೇಖರ್ ಪುಟ್ಟಸುಬ್ಬಯ್ಯ ಕಿರುಕುಳ ನೀಡಿದ್ದರು ಎಂದು ಪುಟ್ಟಸುಬ್ಬಯ್ಯ ಅವರು ಆರೋಪಿಸಿದ್ದಾರೆ. ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ವಂಚನೆಯಿಂದ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆಂದು ಡೆತ್ ನೋಟ್ ನಲ್ಲಿ ಹೇಳಿದ್ದಾರೆ.

ಪುಟ್ಟಸುಬ್ಬಯ್ಯ ಅವರ ಅಂತ್ಯ ಸಂಸ್ಕಾರದಲ್ಲಿ ಕುಟುಂಬಸ್ಥರು ಪಾಲ್ಗೊಳ್ಳಬೇಕಿರುವುದರಿಂದ ಇನ್ನೂ ಯಾರನ್ನೂ ಬಂಧನಕ್ಕೊಳಪಡಿಸಲಾಗಿಲ್ಲ. ವ್ಯಕ್ತಿ ನೇಣು ಹಾಕಿಕೊಳ್ಳಲು ಬೆಡ್‌ಸ್ಪ್ರೆಡ್ ಬಳಕೆ ಮಾಡಿದ್ದಾರೆ. ಘಟನೆ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಕೊಠಡಿಗೆ ಬೀಗ ಹಾಕಲಾಗಿದೆ. ಆರೋಪದಂತೆ ನಾಲ್ವರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿಯಲ್ಲಿ (ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com