ಬೆಳಗಾವಿ: ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದರಿಂದ ಯಾವುದೇ ವ್ಯಕ್ತಿ, ಗುಂಪು, ಸಮೂಹ ಅಥವಾ ರಾಜಕೀಯ ಪಕ್ಷಗಳು ಆಕೆಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯವರ ಲಿಖಿತ ಅನುಮತಿ ಪಡೆಯದೇ ಭೇಟಿಯಾಗುವಂತಿಲ್ಲ ಎಂದು ಹೈಕೋರ್ಟ್ ಶನಿವಾರ ಮಹತ್ವದ ಆದೇಶ ನೀಡಿದೆ.
ಸಂತ್ರಸ್ತ ಮಹಿಳೆಯ ಪುತ್ರ ಅದೇ ಗ್ರಾಮದ ಯುವತಿಯನ್ನು ಪ್ರೇಮಿಸಿ ಅಕೆಯೊಂದಿಗೆ ಪರಾರಿಯಾಗಿದ್ದ ಎನ್ನುವ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಯುವತಿಯ ಕಡೆಯವರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.
ಇಂದು ವಿದ್ಯುನ್ಮಾನ ಮಾಧ್ಯಮವೊಂದರಲ್ಲಿ ಬೆಳಗಾವಿ ವಿವಸ್ತ್ರ ಪ್ರಕರಣದ ಸಂತ್ರಸ್ತೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷದ ನಿಯೋಗ ಸದಸ್ಯರು ಭೇಟಿ ಮಾಡಲಿದ್ದಾರೆ ಎಂಬ ಸುದ್ದಿಯನ್ನು ಮುಖ್ಯ ನ್ಯಾಯಮೂರ್ತಿ ಅವರು ವೀಕ್ಷಿಸಿದ್ದು, ಪ್ರಕರಣದ ಗಂಭೀರತೆ ಅರಿತು ಪೀಠವು ಶನಿವಾರ ವಿಶೇಷ ವಿಚಾರಣೆ ನಡೆಸಿತು.
“ಇಂಥ ಸಂದರ್ಭದಲ್ಲಿ ಸಂತ್ರಸ್ತೆಯನ್ನು ನೋಡಲು ಜನರು ಭೇಟಿ ನೀಡುವುದು ಅಸಹಜವೇನಲ್ಲ. ಜನರು ಸ್ವತಂತ್ರವಾಗಿ ಓಡಾಡುವುದನ್ನು ನ್ಯಾಯಾಲಯವು ಸಾಮಾನ್ಯವಾಗಿ ನಿರ್ಬಂಧಿಸುವುದಿಲ್ಲ; ಘಟನೆಯಿಂದ ಸಂತ್ರಸ್ತೆಯು ಸಹಿಸಲಾಗದಂತಹ ಯಾತನೆಗೆ ತುತ್ತಾಗಿದ್ದು, ಅವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರು ನಿರಂತರವಾಗಿ ಸಂತ್ರಸ್ತೆಯನ್ನು ನೋಡಲು ಹೋಗುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಇದು ಅವರಿಗೆ ನೀಡಲಾಗುತ್ತಿರುವ ವೈದ್ಯಕೀಯ ಚಿಕಿತ್ಸೆಯ ಮೇಲೂ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ. ಸಂತ್ರಸ್ತೆಯ ಹಿತಾಸಕ್ತಿ ಮತ್ತು ವೈದ್ಯಕೀಯ ಚಿಕಿತ್ಸೆಗೆ ಯಾವುದೇ ಅಡ್ಡಿ ಉಂಟಾಗದಿರಲಿ ಎಂದು ಸಂದರ್ಶಕರ ಭೇಟಿಯನ್ನು ನಿರ್ಬಂಧಿಸಲಾಗುತ್ತಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಈ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿ, ಸಮೂಹ, ಗುಂಪು, ರಾಜಕೀಯ ಪಕ್ಷಗಳು ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಅಥವಾ ವೈದ್ಯರಿಂದ ಲಿಖಿತ ಅನುಮತಿ ಪಡೆಯದೇ ಸಂತ್ರಸ್ತೆಯನ್ನು ಭೇಟಿ ಮಾಡುವಂತಿಲ್ಲ. ಈ ಆದೇಶವು ಕುಟುಂಬ ಸದಸ್ಯರು, ಶಾಸನಬದ್ಧ ಸಂಸ್ಥೆಗಳು/ಆಯೋಗದ ಅಧಿಕೃತ ಪ್ರತಿನಿಧಿಗಳ ಭೇಟಿ ಅಥವಾ ತನಿಖಾಧಿಕಾರಿಗೆ ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರ ತಕ್ಷಣದ ಪ್ರತಿಕ್ರಿಯೆಗೆ ನ್ಯಾಯಾಲಯವು ಮೆಚ್ಚುಗೆ ದಾಖಿಸಿದೆ.
Advertisement