ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಾತಿ ತಾರತಮ್ಯ: ಮನೆ ನೀಡಲು ಮಾಲೀಕರ ನಿರಾಕರಣೆ, ಸಂಕಷ್ಟದಲ್ಲಿ ಕೊರಗ ಬುಡಕಟ್ಟು ಸಮುದಾಯದ ಪೌರಕಾರ್ಮಿಕರು!

ಜಾತಿ ನೋಡಿ ಮಾಲೀಕರು ಮನೆ ನೀಡಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣದ ಕೊರಗ ಬುಡಕಟ್ಟು ಸಮುದಾಯದ ಪೌರಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ.
Published on

ಉಡುಪಿ: ಜಾತಿ ನೋಡಿ ಮಾಲೀಕರು ಮನೆ ನೀಡಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣದ ಕೊರಗ ಬುಡಕಟ್ಟು ಸಮುದಾಯದ ಪೌರಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸುಮಾರು 25 ಪೌರಕಾರ್ಮಿಕರು ಕಳೆದ ಎರಡ್ಮೂರು ವಾರಗಳಿಂದ ಮನೆ ಬಾಡಿಗೆಗೆ ಸಿಗದೆ ಪರದಾಡುತ್ತಿದ್ದಾರೆ.

ಈ ಕಾರ್ಮಿಕರು ಇತ್ತೀಚೆಗಷ್ಟೇ ಉಡುಪಿ ಸಿಎಂಸಿಯಿಂದ ಬೈಂದೂರಿಗೆ ವರ್ಗಾವಣೆಗೊಂಡು ಡಿ.1ರಂದು ಕೆಲಸಕ್ಕೆ ಹಾಜರಾಗಿದ್ದರು. ಆರಂಭದಲ್ಲಿ ಕೆಲವರಿಗೆ ಬಾಡಿಗೆಗೆ ಮನೆ ದೊರೆತಿತ್ತು. ಆದರೆ, ಜಾತಿ ತಿಳಿದ ಬಳಿಕ ಮಾಲೀಕರು ಮನೆಯಿಂದ ಹೊರ ಹಾಕಿದ್ದಾರೆಂದು ತಿಳಿದುಬಂದಿದೆ.

ಪೌರಕಾರ್ಮಿಕರಲ್ಲಿ ಒಬ್ಬರಾದ ರಾಕೇಶ್ ಮಾತನಾಡಿ, ನಮಗೆ ಇಲ್ಲಿ ಮನೆಗಳು ಸಿಗದ ಕಾರಣ ಉಡುಪಿ ಮತ್ತು ಬೈಂದೂರು ನಡುವೆ ಪ್ರತಿದಿನ 100 ರೂ.ಗಳನ್ನು ವ್ಯಯಿಸಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದೇವೆ. ಕೆಲಸಕ್ಕೆ ಸರಿಯಾಗಿ ಹಾಜರಾಗಬೇಕಾದರೆ ನಾವು ಬೆಳಿಗ್ಗೆ 3 ಗಂಟೆಯಿಂದಲೇ ನಮ್ಮ ಪ್ರಯಾಣವನ್ನು ಆರಂಭಿಸಬೇಕಿದೆ. ಪಟ್ಟಣವನ್ನು ಸ್ವಚ್ಛವಾಗಿಡುತ್ತೇವೆ. ಆದರೆ, ನಮಗೆ ವಸತಿ ಸೌಕರ್ಯ ನಿರಾಕರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರಗ ಸಂಘಟನೆ ಬೈಂದೂರು ವಲಯ ಸಂಚಾಲಕ ಲಕ್ಷ್ಮಣ್ ಮಾತನಾಡಿ, ಕೊರಗ ಜನಾಂಗದವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ಈ ವಿಚಾರ ಸಂಬಂಧ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಅವರಿಗೆ ವಸತಿ ಸೌಕರ್ಯ ಕಲ್ಪಿಸಬೇಕು, ಬೈಂದೂರಿನಲ್ಲಿ ಪಿಡಬ್ಲ್ಯುಡಿ ಕ್ವಾರ್ಟರ್ಸ್‌ಗಳಿದ್ದು, ಅವುಗಳನ್ನು ನವೀಕರಿಸಿ ಪೌರಕಾರ್ಮಿಕರಿಗೆ ನೀಡಬಹುದು ಎಂದು ಹೇಳಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮಾತನಾಡಿ, ಪಿಡಬ್ಲ್ಯೂಡಿ ಕ್ವಾರ್ಟರ್ಸ್‌ಗಳ ಲಭ್ಯತೆಯನ್ನು ಪರಿಶೀಲಿಸಿ, ಪೌರಕಾರ್ಮಿಕರಿಗೆ ಶೀಘ್ರದಲ್ಲೇ ವಾಸ್ತವ್ಯಕ್ಕೆ ಸ್ಥಳ ಸಿಗುವಂತೆ ಮಾಡಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com