ಬೆಂಗಳೂರು: ಕಸವನಹಳ್ಳಿಯಲ್ಲಿರುವ ಸಮೃದ್ಧಿ ಅಪಾರ್ಟ್‌ಮೆಂಟ್ ಸಮುಚ್ಚಯದ ಎದುರು ಕಾರಿನ ಚಕ್ರ ಹರಿದು ಮೂರು ವರ್ಷದ ಹೆಣ್ಣು ಮಗುವೊಂದು ಮೃತಪಟ್ಟಿದ್ದು, ಈ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನೇಪಾಳ ಮೂಲದ ಜೋಗ್ ಜುತಾರ್ ಹಾಗೂ ಅನಿತಾ ದಂಪತಿಯ ಅರ್ಬಿನಾ (3) ಮೃತ ಮಗು. ಸಮೃದ್ಧಿ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವನ್ನು ಗಮನಿಸದ ಅದೇ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಕಾರು ಹರಿಸಿಕೊಂಡು ಹೋಗಿದ್ದರು.
ಕಾರು ಹರಿದಿರುವ ಬಗ್ಗೆ ಮಾಹಿತಿ ಇಲ್ಲದ ಪೋಷಕರು, ಅಪಾರ್ಟ್‌ಮೆಂಟ್ ಗೇಟಿಗೆ ಸಿಲುಕಿ ಹಾಕಿಕೊಂಡು ಮಗು ಬಿದ್ದಿರಬಹುದೆಂದು ಭಾವಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಭುಜದ ಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು.
ನಂತರ ಪೋಷಕರು ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಗುವನ್ನು ಪರಿಶೀಲಿಸಿದ ವೈದ್ಯರು ತಕ್ಷಣ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿತ್ತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಆಂತರಿಕ ರಕ್ತಸ್ರಾವದಿಂದ ಮಗುವಿನ ಮೃತಪಟ್ಟಿರುವುದು ತಿಳಿದು ಬಂದಿತ್ತು.
ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪೋಷಕರು, ಕಾರಣ ಪತ್ತೆಹಚ್ಚುವಂತೆ ಡಿಸೆಂಬರ್ 10 ರಂದು ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಪಾರ್ಟ್ಮೆಂಟ್ ಸಮೀಪದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದಾರೆ. ಈ ವೇಳೆ ಮಗುವಿನ ಮೇಲೆ ಕಾರು ಹರಿದಿರುವುದು ಬೆಳಕಿಗೆ ಬಂದಿದೆ.
ನಂತರ ನ್ಯಾಯಾಲಯದ ಆದೇಶವನ್ನು ಪಡೆದು ಮುಂದಿನ ತನಿಖೆಗಾಗಿ ಪ್ರಕರಣವನ್ನು ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಘಟನೆ ಸಂಬಂಧ ಈ ವರೆಗೂ ಯಾರೊಬ್ಬರನ್ನೂ ಬಂಧನಕ್ಕೊಳಪಡಿಸಲಾಗಿಲ್ಲ.
Advertisement