ಬಾಡಿಗೆದಾರರ ಮೇಲೆ ಮಾಲೀಕನ ಸಂಬಂಧಿ ಗೂಂಡಾಗಿರಿ: ಮನೆ ಖಾಲಿ ಮಾಡುವಂತೆ ವೃದ್ದ ತಾಯಿಗೆ ಥಳಿತ

ಮನೆ ಖಾಲಿ ಮಾಡುವಂತೆ ಒತ್ತಾಯಿಸಿ ಮನೆ ಮಾಲೀಕನೋರ್ವ ತನ್ನ ಸಂಬಂದಿಕನ ಮೂಲಕ ಗೂಂಡಾಗಿರಿ ತೋರಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ವರದಿಯಾಗಿದೆ.
ಮನೆಯ ಸಾಮಾನು ಹೊರ ಹಾಕಿರುವ ಚಿತ್ರ
ಮನೆಯ ಸಾಮಾನು ಹೊರ ಹಾಕಿರುವ ಚಿತ್ರ

ಬೆಂಗಳೂರು: ಮನೆ ಖಾಲಿ ಮಾಡುವಂತೆ ಒತ್ತಾಯಿಸಿ ಮನೆ ಮಾಲೀಕನೋರ್ವ ತನ್ನ ಸಂಬಂದಿಕನ ಮೂಲಕ ಗೂಂಡಾಗಿರಿ ತೋರಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ವರದಿಯಾಗಿದೆ.

ಬುಧವಾರ ಸಂಜೆ ಬಾಣಸವಾಡಿಯ ಕೃಷ್ಣಾರೆಡ್ಡಿ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಮನೆ ಖಾಲಿ ಮಾಡುವಂತೆ ಒತ್ತಾಯಿಸಿ ಮನೆ ಮಾಲಿಕನೋರ್ವ ತನ್ನ ಸಂಬಂಧಿಯ ಮೂಲಕ ಬಾಡಿಗೆದಾರರನ್ನು ಬೆದರಿಸಿದ್ದಾನೆ. ಅಲ್ಲದೆ ಮನೆಯ ಸಾಮಾನುಗಳನ್ನು ಹೊರ ಹಾಕಿದ್ದು ಮಾತ್ರವಲ್ಲದೇ ಬಾಡಿಗೆದಾರರ 85 ವರ್ಷದ ವೃದ್ದ ತಾಯಿಯನ್ನೂ ಥಳಿಸಿ ದುಂಡಾವರ್ತನೆ ತೋರಿದ್ದಾರೆ.

ಮೂಲಗಳ ಪ್ರಕಾರ ಪಿ ಕುಮಾರ್ ಎಂಬುವವರು ಕಳೆದ 12 ವರ್ಷಗಳಿಂದ ವಾಸವಿದ್ದ ಮನೆಯನ್ನು ತಕ್ಷಣವೇ ಖಾಲಿ ಮಾಡಬೇಕೆಂದು ಮನೆ ಮಾಲೀಕ ಹೇಳಿದ್ದ. ಆದರೆ ಮನೆ ಖಾಲಿ ಮಾಡಲು ತಾವು ನೀಡಿದ್ದ 2.5 ಲಕ್ಷ ರೂಪಾಯಿ ಮುಂಗಡ ಹಣವನ್ನು ವಾಪಸ್ ಮಾಡುವಂತೆ ಕುಮಾರ್ ಅವರು ಮಾಲೀಕರಿಗೆ ಹೇಳಿದ್ದರು. ಆದರೆ ಹಣ ನೀಡಲು ನಿರಾಕರಿಸಿದ್ದ ಮನೆ ಮಾಲೀಕ ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದ. ಆದರೆ ಮುಂಗಡ ಹಣ ಪಾವತಿಸದ ಹೊರತು ತಾವು ಮನೆ ಖಾಲಿ ಮಾಡುವುದಿಲ್ಲ ಎಂದು ಪಿ ಕುಮಾರ್ ಪಟ್ಟು ಹಿಡಿದ ಹಿನ್ನಲೆಯಲ್ಲಿ ಮನೆ ಮಾಲೀಕ ತನ್ನ ಸಂಬಂಧಿಯ ಮೂಲಕ ಮನೆ ಕುಮಾರ್ ಅವರ ಕುಟುಂಬದ ಮೇಲೆ ಹಲ್ಲೆ ಮಾಡಿಸಿದ್ದಾರೆ. ಅಲ್ಲದೆ ಮನೆ ಸಾಮಾನುಗಳನ್ನು ಬಲವಂತವಾಗಿ ಹೊರಹಾಕಿಸಿ ಅವರ 85 ವರ್ಷದ ವೃದ್ಧ ತಾಯಿಯನ್ನು ಥಳಿಸಿದ್ದಾರೆ.

ಈ ವೇಳೆ ಮನೆಯಲ್ಲಿದ್ದ ಕೆಲ ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿದೆ ಎಂದು ಸಂತ್ರಸ್ಥ ಕುಟುಂಬಸ್ಥರು ಆರೋಪಿಸಿದ್ದಾರೆ. ಮೂಲಗಳ ಪ್ರಕಾರ ಮನೆ ಮಾಲೀಕರು ಅಮೆರಿಕದಲ್ಲಿ ನೆಲೆಸಿದ್ದು, ಅವರ ಪರವಾಗಿ ಅವರ ಸಹೋದರಿ ಎಲ್ ಶಾಂತಮ್ಮ ಅವರು ಬಾಡಿಗೆಗೆ ಸಂಬಂಧಿಸಿದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಆಕೆಯ ಪತಿ ರವಿ ಮತ್ತು ಆರು ಮಂದಿ ಗೂಂಡಾಗಳು ಬಾಡಿಗೆದಾರರ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯ ಸಾಮಾನುಗಳನ್ನು ಹೊರ ಹಾಕಿ ಮನೆ ಬಾಗಿಲಿಗೆ ಹೊಸ ಬೀಗ ಹಾಕಿದ್ದಾರೆ. ಈ ಗಲಾಟೆ ಬೆನ್ನಲ್ಲೇ ಕುಮಾರ್ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದು ಹೊಯ್ಸಳ ವಾಹನದಲ್ಲಿ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ತಮ್ಮ ಮೇಲಾದ ದೌರ್ಜನ್ಯದ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಸಂತ್ರಸ್ಥ ಕುಮಾರ್ ಅವರು, ಈ ಕಟ್ಟಡದ 2ನೇ ಮಹಡಿಯಲ್ಲಿರುವ 3BHK ಮನೆಗೆ ನಾನು ಪ್ರತಿ ತಿಂಗಳು 18,500 ರೂ.ಗಳನ್ನು ಪಾವತಿಸುತ್ತಿದ್ದೇನೆ. ಮನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಾಂತಮ್ಮ ಅವರಿಗೆ ಮುಂಗಡವಾಗಿ 2.5 ಲಕ್ಷ ರೂ ಪಾವಕಿಸಿದ್ದೇನೆ. ಪ್ರಸ್ತುತ ಬಾಡಿಗೆ ಒಪ್ಪಂದವು ನವೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ. ನಾನು ಖಾಲಿ ಮಾಡುತ್ತೇನೆ ಎಂದು ಆಗಸ್ಟ್‌ನಿಂದ ಹೇಳುತ್ತಿದ್ದೇನೆ. ಮುಂಗಡ ಹಣ ವಾಪಸ್ ಮಾಡಿ ಬೇರೆ ಮನೆಗೆ ಮುಂಗಡ ನೀಡಬೇಕು ಎಂದು ಕೇಳುತ್ತಿದ್ದೇನೆ. ಆದರೆ ಶಾಂತಮ್ಮ ಅವರು ಹಣ ನೀಡದೇ ಸತಾಯಿಸುತ್ತಿದ್ದರು. ತಾನು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಮುಂದೆ ಹಣ ನೀಡುತ್ತೇನೆ. ಇದು ಹತ್ತು ವರ್ಷವಾದರೂ ಆಗಬಹುದು ಎಂದು ಹೇಳುತ್ತಿದ್ದಾರೆ. ಆದರೆ ನಾನು ನನ್ನ ಮುಂಗಡ ಹಣ ನೀಡದೇ ಮನೆ ಖಾಲಿ ಮಾಡುವುದಿಲ್ಲ ಎಂದು ಹೇಳಿದ್ದೆ. 

ಏತನ್ಮಧ್ಯೆ ಶಾಂತಮ್ಮ ಅವರು ನನ್ನ ಅನುಪಸ್ಥಿತಿಯಲ್ಲಿ ಪದೇ ಪದೇ ನನ್ನ ಪತ್ನಿಯನ್ನು ಸಂಪರ್ಕಿಸಿ ಎಲ್ಲ ಕಡೆ ಹೆಚ್ಚಿನ ಬಾಡಿಗೆ ನೀಡುತ್ತಿದ್ದಾರೆ. ನೀವು ಕೂಡ ಹೆಚ್ಚಿನ ಬಾಡಿಗೆ ಹಣ ನೀಡಬೇಕು ಎಂದು ಹೇಳಿ ನನ್ನ ಪತ್ನಿಯಿಂದ ಸುಮಾರು ಒಂದು ಲಕ್ಷ ರೂಪಾಯಿ ವರೆಗೂ ಹಣ ಸಂಗ್ರಹಿಸಿದ್ದಾರೆ. ಇದೇ ರೀತಿಯ ಗಲಾಟೆ ಈ ಹಿಂದೆಯೂ ಆಗಿತ್ತು. ಆಗ ನಾನು ಡಿಸೆಂಬರ್ ಮಧ್ಯಭಾಗದಲ್ಲಿ ರಾಮಮೂರ್ತಿನಗರ ಠಾಣೆಗೆ ದೂರು ನೀಡಲು ಬಂದಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ರಂಗಸ್ವಾಮಿ ಅವರು ಮನೆಯ ಉಸ್ತುವಾರಿ ಶಾಂತಮ್ಮ ಅವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದರು. 

ಇದಾದ ಬಳಿಕ ಶಾಂತಮ್ಮ ತಮ್ಮ ಮೇಲೆ ಮತ್ತಷ್ಟು ಕೋಪಗೊಂಡು ತಿಂಗಳುಗಟ್ಟಲೆ ಬಾಡಿಗೆಯನ್ನು ಪಾವತಿಸಲಿಲ್ಲ ಎಂದು ಆರೋಪಿಸಿದರು. ನಾನು ಮೂರು ವಾರಗಳ ನಂತರ ಎಲ್ಲಾ ಪಾವತಿಗಳ ಪುರಾವೆಗಳನ್ನು ನೀಡಿದ್ದೇನೆ. ಪೊಲೀಸರು ನನ್ನ ದೂರನ್ನು ತೆಗೆದುಕೊಳ್ಳದ ಕಾರಣ, ನಾನು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಪ್ರಕರಣ ದಾಖಲಿಸಿದೆ" ಎಂದು ಕುಮಾರ್ ಅವರು ಹೇಳಿದರು.

ಇದೀಗ ಪೊಲೀಸ್ ಮಧ್ಯ ಪ್ರವೇಶದಲ್ಲಿ ಮನೆಗೆ ಹಾಕಿದ್ದ ಬೀಗ ತೆರೆದು ಕುಮಾರ್ ಅವರು ಹೊಸ ಬೀಗ ಹಾಕಿದ್ದಾರೆ. ಅಲ್ಲದೆ ಅದೇ ಮನೆಯಲ್ಲಿ ಕುಮಾರ್ ಅವರ ಕುಟುಂಬ ವಾಸಿಸುತ್ತಿದೆ. ಮತ್ತೆ ತೊಂದರೆಯಾದರೆ ಕುಟುಂಬಕ್ಕೆ ಸಹಾಯ ಮಾಡಲು ಪೊಲೀಸರನ್ನು ಕಳುಹಿಸುವುದಾಗಿ ಸರ್ಕಲ್ ಇನ್ಸ್ ಪೆಕ್ಟರ್ ರಂಗಸ್ವಾಮಿ ಸುದ್ದಿಗಾರರಿಗೆ ಭರವಸೆ ನೀಡಿದರು ಎಂದು ಕುಮಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com