ಕಲಬುರಗಿ: ಚೂರಿ ಹಿಡಿದು ಸಾರ್ವಜನಿಕರ ಹೆದರಿಸುತ್ತಿದ್ದ ವ್ಯಕ್ತಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು
ಕಲಬುರಗಿ: ಸೂಪರ್ ಮಾರ್ಕೆಟ್‌ನಲ್ಲಿ ಚೂರಿ ಹಿಡಿದು ಜನರನ್ನು ಬೆದರಿಸುತ್ತಿದ್ದ ಕಿಡಿಗೇಡಿಯೊಬ್ಬನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಕಲಬುರಗಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಅಬ್ದುಲ್ ಜಾಫರ್ ಸಾಬ್ ಬಂಧಿತ ವ್ಯಕ್ತಿಯಾಗಿದ್ದಾನೆ. ಈತ ಸುಮಾರು ಒಂದು ಗಂಟೆ ಕಾಲ ಕೈಯಲ್ಲಿ ಚೂರಿ ಹಿಡಿದು ರಸ್ತೆಯಲ್ಲಿ ತಿರುಗಾಡಿ ಜನರಲ್ಲಿ ಭೀತಿ ಸೃಷ್ಟಿಸುತ್ತಿದ್ದ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು, ಶರಣಾಗುವಂತೆ ಸೂಚಿಸಿದ್ದರು. ಆದರೆ, ಆರೋಪಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ.
ಹೀಗಾಗಿ, ಪಿಎಸ್‌ಐ ವಾಹಿದ್ ಕೊತ್ವಾಲ್ ಆರೋಪಿಯತ್ತ ಮೂರು ಸುತ್ತು ಗುಂಡು ಹಾರಿಸಿದರು. ಕೊನೆಯ ಗುಂಡು ಆತನ ಕಾಲಿಗೆ ಬಡಿದಿದ್ದರಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆರೋಪಿಯನ್ನು ಸುತ್ತುವರೆದ ಪೊಲೀಸರು ಆತನನ್ನು ಬಂಧನಕ್ಕೊಳಪಡಿಸಿದ್ದಾರೆ.
ಇದೀಗ ಆರೋಪಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಬ್ದುಲ್ ಜಾಫರ್ ಸಾಬ್ ಯಾರ ಮೇಲೂ ಹಲ್ಲೆ ಮಾಡಿಲ್ಲ. ಆದರೆ ಆತನ ಬೆದರಿಕೆ ಮತ್ತು ಚಾಕುವಿನಿಂದಾಗಿ ಜನರು ಆತಂಕ್ಕೊಳಗಾಗಿದ್ದು, ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ