ಮಹದಾಯಿ ಯೋಜನೆಗೆ ನೀಡಿರುವ ಒಪ್ಪಿಗೆ ಹಿಂಪಡೆಯಿರಿ: ಕೇಂದ್ರದ ಮೇಲೆ ಹಲವು ಸಂಘಟನೆಗಳಿಂದ ಒತ್ತಡ

ಕಳಸಾ-ಬಂಡೂರಿ ಡಿಪಿಆರ್‌ಗೆ ನೀಡಲಾಗಿರುವ ಅನುಮೋದನೆಯನ್ನು ಹಿಂಪಡೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರದ ಮೇಲೆ ಗೋವಾ ಸರ್ಕಾರವಷ್ಟೇ ಅಲ್ಲದೆ, ಹಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಒತ್ತಡ ಹೇರುತ್ತಿವೆ.
ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿರುವುದು.
ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿರುವುದು.

ಬೆಳಗಾವಿ: ಕಳಸಾ-ಬಂಡೂರಿ ಡಿಪಿಆರ್‌ಗೆ ನೀಡಲಾಗಿರುವ ಅನುಮೋದನೆಯನ್ನು ಹಿಂಪಡೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರದ ಮೇಲೆ ಗೋವಾ ಸರ್ಕಾರವಷ್ಟೇ ಅಲ್ಲದೆ, ಹಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಒತ್ತಡ ಹೇರುತ್ತಿವೆ.

ಮಹದಾಯಿ ಉಳಿಸಿ, ಗೋವಾ ಉಳಿಸಿ ನಿಯೋಗವು ಬುಧವಾರ ಗೋವಾದಲ್ಲಿ ಗೋವಾ ರಾಜ್ಯಪಾಲ ಪಿ ಎಸ್ ಶ್ರೀಧರನ್ ಪಿಳ್ಳೈ ಅವರನ್ನು ಭೇಟಿ ಮಾಡಿತು, ಮಹದಾಯಿ ವಿವಾದದಲ್ಲಿ ತುರ್ತು ಮಧ್ಯಪ್ರವೇಶಿಸುವಂತೆ ಮನವಿ ಮಾಡಿಕೊಂಡಿತು.

ಮಹದಾಯಿ ನೀರು ಹಂಚಿಕೆ ಸಮಸ್ಯೆಗೆ ಪರಿಹಾರ ನೀಡುವಂತೆ ಹಾಗೂ ಗೋವಾ ರಾಜ್ಯದ ಪರವಾಗಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವಂತೆ ಗೋವಾ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

“ಜನವರಿ 16 ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ನಾವು ಕೆಲವು ನಿರ್ಣಯಗಳನ್ನು ಅಂಗೀಕರಿಸಿದ್ದೇವೆ. ಈ ನಿರ್ಣಯಗಳ ಪ್ರತಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ ಮತ್ತು ಅದನ್ನು ರಾಷ್ಟ್ರಪತಿಗಳ ಮುಂದಿಡುವಂತೆ ಮನವಿಯನ್ನೂ ಮಾಡಿಕೊಂಡಿದ್ದೇವೆ. ಮಹಾದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಏನು ಮಾಡಬಹುದು, ಕೇಂದ್ರ ಸರ್ಕಾರ ಮಧ್ಯಪ್ರವೇಶ ಬಾಗೂ ಇತರೆ ವಿಚಾರಗಳ ಬಗ್ಗೆ ನಮ್ಮ ಸದಸ್ಯರು ವಿವರವಾದ ಮಾತುಕತೆ ನಡೆಸಿದ್ದಾರೆಂದು ಮಹದಾಯಿ ಉಳಿಸಿ, ಗೋವಾ ಉಳಿಸಿ ನಿಯೋಗ ಸದಸ್ಯರಾಗಿರುವ ಪ್ರಶಾಂತ್ ನಾಯಕ್ ಅವರು ಹೇಳಿದ್ದಾರೆ.

ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಡಿಪಿಆರ್ ಅನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿ ಸಾವಿರಾರು ಜನರು ಸಹಿ ಮಾಡಿದ ಪತ್ರವನ್ನೂ ರಾಜ್ಯಪಾಲರಿಗೆ ನೀಡಲಾಗಿದೆ ಎಂದು ತಿಳಿಸಿದರು.

ಈ ಮನವಿ ಪತ್ರವನ್ನು ಸ್ವೀಕರಿಸಿದ ಗೋವಾ ರಾಜ್ಯದ ರಾಜ್ಯಪಾಲರು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಹಾಗೂ ಗೋವಾದವರ ಭಾವನೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಮತ್ತೊಬ್ಬ ಸದಸ್ಯ ಪ್ರಜಾಲ್ ಸಖರ್ದಂಡೆ ಮಾತನಾಡಿ, ಗೋವಾದಾದ್ಯಂತ ಎಲ್ಲಾ ಗ್ರಾಮಗಳಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟದಲ್ಲಿ ಜನರು ಪಾಲ್ಗೊಳ್ಳುವಂತೆ ಮಾಡಲು ಹಲವು ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮಹದಾಯಿ ಬಚಾವೋ ಅಭಿಯಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾದ ಪ್ರಕರಣ ಪ್ರಬಲವಾಗಿದ್ದು, ಇದೀಗ ಮಹಾದಾಯಿಯಿಂದ ಗೋವಾಕ್ಕೆ ನೀರು ಹರಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯದಲ್ಲಿ ಜನಾಂದೋಲನವನ್ನು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಡಿಪಿಆರ್‌ಗೆ ಕೇಂದ್ರ ಸರ್ಕಾರ ನೀಡಿರುವ ಅನುಮೋದನೆಗಳಲ್ಲಿ ಹಲವಾರು ವಿಷಯಗಳನ್ನು ಪರಿಶೀಲಿಸಬೇಕಿದೆ ಎಂದು ವಕೀಲ ಹೃದಯನಾಥ್ ಶಿರೋಡ್ಕರ್ ಹೇಳಿದ್ದಾರೆ.

ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಕುಡಿಯುವ ನೀರಿನ ಯೋಜನೆ ಎಂದು ತಪ್ಪಾಗಿ ಹೇಳಿಕೊಂಡಿದೆ ಆದರೆ ವಾಸ್ತವವಾಗಿ ಇದು ನೀರಾವರಿ ಯೋಜನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com