ಪುತ್ರಿಗೆ ನೋಟಿಸ್: ಗಂಭೀರ ವಿಷಯಗಳ ಕಡೆ ಗಮನಹರಿಸುವಂತೆ ಸಲಹೆ ನೀಡಿ ಸಿಬಿಐಗೆ ಪತ್ರ ಬರೆಯುತ್ತೇನೆ- ಡಿಕೆ ಶಿವಕುಮಾರ್

ಅಕ್ರಮ ಆಸ್ತಿ ಹೊಂದಿರುವ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇದೀಗ ನನ್ನ ಕುಟುಂಬದವರನ್ನು ಟಾರ್ಗೆಟ್ ಮಾಡುತ್ತಿದ್ದು, ಮಂಗಳವಾರ ನನ್ನ ಪುತ್ರಿಗೆ ನೋಟಿಸ್ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಶಿವಮೊಗ್ಗ: ಅಕ್ರಮ ಆಸ್ತಿ ಹೊಂದಿರುವ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇದೀಗ ನನ್ನ ಕುಟುಂಬದವರನ್ನು ಟಾರ್ಗೆಟ್ ಮಾಡುತ್ತಿದ್ದು, ಮಂಗಳವಾರ ನನ್ನ ಪುತ್ರಿಗೆ ನೋಟಿಸ್ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನನ್ನ ಮಗಳ ಶಿಕ್ಷಣದ ಶುಲ್ಕ ಮತ್ತು ವಿವರಗಳನ್ನು ಕೋರಿ ನೋಟಿಸ್ ಕಳುಹಿಸಿದ್ದಾರೆ. ಇದಕ್ಕಿಂತ ಸಿಬಿಐಗೆ ದೊಡ್ಡ ದೊಡ್ಡ ಕೆಲಸಗಳಿವೆ. ಅವರಿಗೆ ನನ್ನ ಮಗಳ ಶಿಕ್ಷಣ ಶುಲ್ಕದ ಬಗ್ಗೆ ಮಾಹಿತಿ ಬೇಕಾಗಿದೆ. ಇದನ್ನು ಮಾಡುವ ಬದಲು ಇತರೆ ಗಂಭೀರ ವಿಷಯಗಳನ್ನು ಪರಿಶೀಲಿಸುವಂತೆ ಸಿಬಿಐಗೆ ಶಿಫಾರಸು ಮಾಡಿ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ನಮ್ಮನ್ನು ಎಷ್ಟು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನು ನೀವೆ ಊಹಿಸಿ. ಜಾರಿ ನಿರ್ದೇಶನಾಲಯದಿಂದ (ಇ.ಡಿ) ತನಗೆ ನೋಟಿಸ್ ಕೂಡ ಬಂದಿದೆ. ಫೆಬ್ರುವರಿ 22 ರಂದು ತನಿಖೆಗೆ ಹಾಜರಾಗುವಂತೆ ಅವರು ನನ್ನನ್ನು ಕೇಳಿದ್ದಾರೆ ಎಂದು ಅವರು ಹೇಳಿದರು.

ಮದ್ಯ ಖರೀದಿಯ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸುವ ಯೋಜನೆಗಳ ಬಗ್ಗೆ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಧಾರ್ಮಿಕ ಶ್ರೀಗಳಿಂದ ವಿರೋಧ ವ್ಯಕ್ತವಾದ ನಂತರ ಈ ನಿರ್ಧಾರವನ್ನು ಕೈಬಿಡಲಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯ ಮನಸ್ಥಿತಿಯನ್ನು ಇದರಿಂದ ತಿಳಿಯಬಹುದು ಎಂದು ಅವರು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ (ವಿಐಎಸ್ ಎಲ್ ) ಗಣಿಗಾರಿಕೆಗೆ ಪರವಾನಗಿ ನೀಡಿದರೆ ಮಾತ್ರ ಅದಕ್ಕೆ ಉಳಿಗಾಲವಿದೆ. ಕೇಂದ್ರದಲ್ಲಿ ಬಿಜೆಪಿ ಏಳು ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಗಣಿಗಾರಿಕೆಗೆ ಏಕೆ ಅನುಮತಿ ನೀಡಿಲ್ಲ? ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.

ಟೆಂಡರ್ ಬಿಲ್‌ಗೆ ಸಂಬಂಧಿಸಿದಂತೆ 22 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಆರೋಪ ಮಾಡಿದ್ದನ್ನು ಅವರು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಇನ್ನೊಂದು ತಿಂಗಳಲ್ಲಿ ನೀತಿ ಸಂಹಿತೆ ಜಾರಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಟೆಂಡರ್‌ಗೆ ಆತುರಪಡುತ್ತಿದೆ ಎಂದು ಆರೋಪಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಹೆಸರಿಡಲು ಕಾಂಗ್ರೆಸ್‌‌ಗೆ ಅಭ್ಯಂತರವಿಲ್ಲ. ಆದರೆ, ಜಮೀನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com