ಸ್ಕಿಟ್ ನಲ್ಲಿ ಅಂಬೇಡ್ಕರ್, ದಲಿತರ ಬಗ್ಗೆ ಅಪಹಾಸ್ಯ: ಜೈನ್ ವಿವಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಬೆಂಗಳೂರು: ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಪ್ರದಶಿಸಿದ ಸ್ಕಿಟ್‌ವೊಂದರಲ್ಲಿ ಡಾ.ಬಿಆರ್ ಅಂಬೇಡ್ಕರ್, ದಲಿತರ ಬಗ್ಗೆ ಅಪಹಾಸ್ಯ ಮಾಡಲಾಗಿದ್ದು, ಈ ಸ್ಟಿಟ್'ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಜೈನ್ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕೇಂದ್ರದ ಕಾಲೇಜು ತಂಡ ಜಾತಿವಾದವನ್ನು ಎತ್ತಿ ತೋರಿಸುವ ಮತ್ತು ಕೆಲವು ಸಂವೇದನಾಶೀಲವಲ್ಲದ ಭಾಷೆಗಳನ್ನು ಬಳಸಿ ಸ್ಕಿಟ್ ಮಾಡಿರುವುದು ಕಂಡು ಬಂದಿದೆ.
ಜೈನ್ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕೇಂದ್ರದ ಥಿಯೇಟರ್ ಗ್ರೂಪ್, ‘ದಿ ಡೆಲ್ರಾಯ್ಸ್ ಬಾಯ್ಸ್’, ‘ಮ್ಯಾಡ್-ಆಡ್ಸ್’ ನ ಭಾಗವಾಗಿ, ಫೆಸ್ಟ್‌ನಲ್ಲಿ ಹಾಸ್ಯ ಜೊತೆಗೆ ದಲಿತರನ್ನು ಗೇಲಿ ಮಾಡುತ್ತ ಸ್ಕಿಟ್‌ನ್ನು ಪ್ರದರ್ಶಿಸಿದ್ದಾರೆ.
ಸ್ಕಿಟ್'ನಲ್ಲಿ ಕೆಳ ಜಾತಿಯ ಹಿನ್ನೆಲೆಯ ವ್ಯಕ್ತಿಯೊಬ್ಬ ಮೇಲ್ಜಾತಿ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಪ್ರದರ್ಶಿಸಿದ್ದು, ಈ ವೇಳೆ ಆತ ತಾನು ದಲಿತ ಎಂದು ಹೇಳಿಕೊಂಡಾಗ ‘ಡೋಂಟ್ ಟಚ್ ಮಿ, ಟಚ್ ಮಿ’ ಎಂಬು ಹಾಡನ್ನು ಪ್ಲೇ ಮಾಡಿರುವುದು ಕಂಡು ಬಂದಿದೆ. ಇದಲ್ಲದೆ, ಬಿಆರ್ ಅಂಬೇಡ್ಕರ್ ಅವರನ್ನು ‘ಬೀಯರ್ ಅಂಬೇಡ್ಕರ್’ ಎಂದು ಹೇಳಿರುವುದು, ಕೆಲ ವಿವಾದಾತ್ಮಕ ನುಡಿಗಟ್ಟುಗಳನ್ನು ಬಳಸಿರುವುದು ಕಂಡು ಬಂದಿದೆ.
ಸ್ಕಿಟ್'ಗೆ ಸಾಮಾಜಿಕ ಜಾಲತಾಣಗಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಸ್ಕಿಟ್ ಪ್ರದರ್ಶನ ಮಾಡಿದ ‘ದಿ ಡೆಲ್ರಾಯ್ಸ್ ಬಾಯ್ಸ್’ ಕ್ಷಮೆಯಾಚಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ದಿ ಡೆಲ್ರಾಯ್ಸ್ ಬಾಯ್ಸ್, ಒಂದು ತಂಡವಾಗಿ ನಾವು ಕೆಟ್ಟದಾಗಿ ಮಾತನಾಡಿರುವುದಕ್ಕೆ ಪ್ರತಿಯೊಬ್ಬರಲ್ಲೂ ಕ್ಷಮೆ ಕೇಳಲು ಬಯಸುತ್ತೇವೆ, ನಮ್ಮ ತಪ್ಪಿಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಸಾಮಾಜಿಕ ಸಂದೇಶವನ್ನು ತರುವುದು ನಮ್ಮ ಉದ್ದೇಶವಾಗಿತ್ತು. ಆದರೆ, ನಮ್ಮಿಂದ ತಪ್ಪಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ನಡುವೆ ಸ್ಕಿಟ್ ಪ್ರದರ್ಶಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗಳು ಸಾರ್ವಜನಿಕ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ