ಬೆಂಗಳೂರು: ಅಂಧ ಹೆಣ್ಣು ಚಿರತೆ ಮರಿಯೊಂದನ್ನು ರಕ್ಷಣೆ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ನೆಲಮಂಗಲ ವ್ಯಾಪ್ತಿಯ ಲಖನಹಳ್ಳಿ ಗ್ರಾಮದಲ್ಲಿ ಸುಮಾರು 6-7 ತಿಂಗಳ ವಯಸ್ಸಿನ ಮರಿ ಚಿರತೆಯನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಗುರುವಾರ ತಡರಾತ್ರಿ ಚಿರತೆ ಕಂಡ ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಹೋದಾಗ ಚಿರತೆ ಕಾಣಿಸಲಿಲ್ಲ. ಶುಕ್ರವಾರ ಬೆಳಿಗ್ಗೆ, ಸಿಬ್ಬಂದಿ ಗಸ್ತು ತಿರುಗಲು ಸ್ಥಳಕ್ಕೆ ಮರಳಿದ್ದರು. ಈ ವೇಳೆ ಪೊದೆಯೊಂದರಲ್ಲಿ ಚಿರತೆಯ ಬಾಲ ಆಡಿಸುತ್ತಿರುವುದು ಕಂಡು ಬಂದಿತ್ತು. ನಂತರ ಚಿರತೆಯನ್ನು ಶಾಂತಗೊಳಿಸಿ ಸೆರೆ ಹಿಡಿಯಲಾಯಿತು.
ಚಿರತೆ ಮರಿಯನ್ನ ಪರೀಕ್ಷೆ ಮಾಡಿದ ಪಶುವೈದ್ಯರಿಗೆ ಚಿರತೆಗೆ ಎರಡೂ ಕಣ್ಣುಗಳು ಇರದಿರುವುದು ಕಂಡು ಬಂದಿದೆ. ಹುಟ್ಟಿನಿಂದಲೇ ಚಿರತೆ ಕುರುಡಾಗಿದ್ದು, ಬಲಭಾಗದ ಹಿಂಗಾಲು ಮತ್ತು ಬಾಲ ಮುರಿತಗೊಂಡಿದೆ. ಇದೀಗ ಚಿರತೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. 6 ತಿಂಗಳ ಚಿರತೆ ಮರಿಯನ್ನು ಬೇಟೆಯಾಜಲು ಸಾಧ್ಯವಿಲ್ಲ.
ಚಿರತೆ ತಾಯಿಯಿಂದ ಹಾಲು ಕುಡಿದಂತೆ ತೋರುತ್ತಿದೆ. ಇದೀಗ ತಾಯಿ ಚಿರತೆಗಾಗಿ ಸೆರೆಹಿಡಿಯಲು ಬೋನ್ ಗಳನ್ನು ಇರಿಸಲಾಗಿದೆ. ಶನಿವಾರದವರೆಗೆ ಚಿರತೆಯ ಚಲನವಲನಗಳು ಕಂಡು ಬಂದಿಲ್ಲ. ಮರಿ ಚಿರತೆ ಕಂಡು ಬಂದ ಸ್ಥಳದಲ್ಲಿ 10 ದಿನಗಳ ಹಿಂದೆ ಮೇಕೆಯ ಶವವೊಂದು ಪತ್ತೆಯಾಗಿತ್ತು ಎಂದು ಅರಣ್ಯ ಸಿಬ್ಬಂದಿಗಳು ತಿಳಿಸಿದ್ದಾರೆ.
Advertisement