ಮಹಿಳಾ ನೌಕರರು, ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ: ಏಪ್ರಿಲ್ 1 ರಿಂದ ಉಚಿತ ಬಸ್ ಪಾಸ್ ವಿತರಿಸಲು ಸರ್ಕಾರ ನಿರ್ಧಾರ
ಬೆಂಗಳೂರು: ಮಹಿಳಾ ನೌಕರರು ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಏಪ್ರಿಲ್ 1 ರಿಂದಲೇ ಉಚಿತ ಬಸ್ ಪಾಸ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದೆ.
ಮಂಗಳವಾರ ವಿಧಾನಸೌಧ ಎದುರು ಕೆಎಸ್ಆರ್ಟಿಸಿ ಅಂಬಾರಿ ಉತ್ಸವ ಬಸ್ ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿಗಳು, ದುಡಿಯುವ ಹೆಣ್ಣು ಮಕ್ಕಳಿಗೆ, ಶಾಲಾ ವಿದ್ಯಾರ್ಥಿನಿಯರಿಗೆ ಏಪ್ರಿಲ್ 1 ರಿಂದ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಚಿಸಿದರು.
ಉದ್ಯೋಗಸ್ಥ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು, ಗೌರವಯುತವಾಗಿ ಜೀವನ ಸಾಗಿಸಲು ಉಚಿತ ಬಸ್‌ಪಾಸ್ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಶಾಲಾ ಅವಧಿಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ಐದು ಬಸ್‌ಗಳನ್ನು ಓಡಿಸಲಾಗುವುದು.ಈ ಸಂಬಂಧ ಅಧಿಕಾರಿಗಳು ಅಗತ್ಯ ಕ್ರಮಗಳ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೆಎಸ್‌ಆರ್‌ಟಿಸಿಯ ಪ್ರೀಮಿಯಂ ಸ್ಲೀಪರ್ ಬಸ್ ಕುರಿತು ಮಾತನಾಡಿ, ಈ ಬಸ್‌ಗಳ ಯಶಸ್ವಿ ಸಂಚಾರದ ಆಧಾರದ ಮೇಲೆ ಮತ್ತಷ್ಟು ಬಸ್ ಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಇತರ ಖಾಸಗಿ ಸಾರಿಗೆ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸುವ ಮೂಲಕ ಕೆಎಸ್‌ಆರ್‌ಟಿಸಿ ಆದಾಯ ಸಂಗ್ರಹವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಭಟನೆಗೆ ಸಜ್ಜಾಗಿರುವ ಕಾರ್ಮಿಕ ಸಂಘಟನೆಗಳ ಜತೆ ಮಾತನಾಡುತ್ತೇನೆ...
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ತೀವ್ರ ಪ್ರತಿಭಟನೆಗೆ ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಮಿಕ ಸಂಘಟನೆಗಳ ಜೊತೆಗೆ ಮಾತನಾಡುತ್ತೇನೆಂದು ಹೇಳಿದರು.
ಸಾರಿಗೆ ಸಂಸ್ಥೆಗಳ ಜತೆ ಮಾತುಕತೆ ನಡೆಸಿ ರಾಜ್ಯದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಆಧರಿಸಿ ವೇತನ ಹೆಚ್ಚಳ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಸಾರಿಗೆ ನೌಕರರ ವೇತನ ಹೆಚ್ಚಳದ ಬೇಡಿಕೆಯನ್ನು ಶೀಘ್ರ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ