ಭಟ್ಕಳದಲ್ಲಿ ನಾಲ್ವರ ಬರ್ಬರ ಹತ್ಯೆ ಪ್ರಕರಣ: ಇಬ್ಬರನ್ನು ಬಂಧಿಸಿದ ಪೊಲೀಸರು
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಭಟ್ಕಳ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ಗುರುವಾರ ಎಪ್ಪತ್ತು ವರ್ಷದ ಶಂಭು ಭಟ್, ಅವರ ಪತ್ನಿ ಮಾದೇವಿ (60), ಮಗ ರಾಜೀವ್ (40) ಮತ್ತು ಸೊಸೆ ಕುಸುಮಾ (35) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ನಂತರ ತಲೆ ಮರೆಸಿಕೊಂಡಿದ್ದ ಶ್ರೀಧರ್ ಭಟ್ ಹಾಗೂ ವಿನಯ್ ಭಟ್ ಎಂಬುವರನ್ನು ಶಿವಮೊಗ್ಗದಲ್ಲಿ ವಶಕ್ಕೆ ಪಡೆದಿದ್ದಾರೆ.
ಕೊಲೆಯ ಹಿಂದೆ ಹಿರಿಯ ಸೊಸೆಯ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದು ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಭಟ್ಕಳ ಡಿವೈಎಸ್ಪಿ ಮತ್ತು ಸಿಪಿಐ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿತ್ತು.
ಪೊಲೀಸರ ಪ್ರಕಾರ, ಶಂಭು ಭಟ್ ಅವರ ಹಿರಿಯ ಮಗ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದರು. ಅವರ ಪತ್ನಿ ವಿದ್ಯಾ ತಮಗೆ ಪರಿಹಾರ ಮತ್ತು ಆಸ್ತಿ ಹಂಚಿಕೆಗೆ ಒತ್ತಾಯಿಸಿದ್ದರು. ಅದರಂತೆ ಶಂಭು ಭಟ್ ಅವರು ವಿದ್ಯಾ ಭಟ್ ಅವರಿಗೆ 1.9 ಎಕರೆ ಜಮೀನು ನೀಡಿದ್ದರು. ಇದಕ್ಕೆ ತೃಪ್ತಿ ಪಡದ ವಿದ್ಯಾ ಮೂರು ಎಕರೆಯನ್ನು ತಮಗೆ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಂತರ ವಿಷಯ ವಿವಾದಕ್ಕೆ ತಿರುಗಿತ್ತು.
ಹೀಗಾಗಿ ಶ್ರೀಧರ್ ಭಟ್ ಹಾಗೂ ಅವರ ಮಗ ವಿನಯ್ ಭಟ್ ಮನೆಯಿಂದ ಮಾರಕಾಸ್ತ್ರ ತಂದು ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣ ಭಟ್ಕಳ ಜನತೆಯನ್ನು ಬೆಚ್ಚಿಬೀಳಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ