ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ: ನಡೆದಾಡುವ ದೇವರ ನೆನೆದು ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಸೇರಿ ಗಣ್ಯರ ಸಂತಾಪ

ನಿಸ್ವಾರ್ಥ ಸೇವೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದಿಂದ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದ ವಿಜಯಪುರ ಜ್ಞಾನಯೋಗಾಶ್ರಮದ  ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೋಮವಾರ ಲಿಂಗೈಕ್ಯರಾಗಿದ್ದು, ನಡೆದಾಡುವ ದೇವರ ನೆನೆದು ಪ್ರಧಾನಮಂತ್ರಿ ನರೇಂದ್ರ ಮೋದಿ...
ಸಾಮಾಜಿಕ ಜಾಲತಾಣದಲ್ಲಿ ಸಿದ್ಧೇಶ್ವರ ಶ್ರೀಗಳ ಜೊತೆಗಿರುವ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ.
ಸಾಮಾಜಿಕ ಜಾಲತಾಣದಲ್ಲಿ ಸಿದ್ಧೇಶ್ವರ ಶ್ರೀಗಳ ಜೊತೆಗಿರುವ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ.

ಬೆಂಗಳೂರು: ನಿಸ್ವಾರ್ಥ ಸೇವೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದಿಂದ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದ ವಿಜಯಪುರ ಜ್ಞಾನಯೋಗಾಶ್ರಮದ  ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೋಮವಾರ ಲಿಂಗೈಕ್ಯರಾಗಿದ್ದು, ನಡೆದಾಡುವ ದೇವರ ನೆನೆದು ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಶ್ರೀಗಳ ಫೋಟೋ ಹಂಚಿಕೊಂಡು ಭಾವುಕರಾಗಿರುವ ಪ್ರಧಾನಿ ಮೋದಿಯವರು, , ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು ಮತ್ತು ಅವರ ಜ್ಞಾನೋತ್ಸಾಹಕ್ಕಾಗಿ ಅವರು ಗೌರವಗಳಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ. ಓಂ. ಶಾಂತಿ ಎಂದು ಹೇಳಿದ್ದಾರೆ.

ಸಿಎಂ ಬೊಮ್ಮಾಯಿಯವರು ಟ್ವೀಟ್ ಮಾಡಿ, ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು. ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ನಾಡಿನಾದ್ಯಂತ ಇರುವ ಶ್ರೀಗಳ ಭಕ್ತ ಸಮೂಹಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ಜೋಶಿ ಅವರು ಸಂತಾಪ ಸೂಚಿಸಿ, ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ಮಹಾಚೇತನವನ್ನು ಮೊನ್ನೆಯಷ್ಟೇ ಕಂಡು, ಅವರ ಆರೋಗ್ಯ ವಿಚಾರಿಸಿ ಬಂದಿದ್ದೆವು. ಭಗವಂತ ಅವರಿಗೆ ಇನ್ನಷ್ಟು ಆಯುಷ್ಯ ನೀಡಲಿ ಎಂದು ಪ್ರಾರ್ಥಿಸಿದ್ದೆ‌. ಆದರೆ, ಭಗವಂತನ ಇಚ್ಛೆ ನಮ್ಮೆಲ್ಲರನ್ನೂ ಮೀರಿದ್ದಾಗಿದೆ ಎಂದು ದು:ಖ ವ್ಯಕ್ತಪಡಿಸಿದರು.

ಶ್ರೀಗಳ ಸರಳ ನಡೆ-ನುಡಿ, ಕೋಟ್ಯಂತರ ಹೃದಯತಟ್ಟಿದ ಅವರ ದಿವ್ಯವಾಣಿ,‌ ಜನರಲ್ಲಿ ಆಧ್ಯಾತ್ಮದ ಚಿರಂತನ ಬೆಳಕನ್ನು ತುಂಬಿ‌ ಅವರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುನ್ನತ ಗೌರವ. ಅವರ ಅಗಲಿಕೆಯ ದುಃಖವನ್ನು ತಡೆಯುವ ಶಕ್ತಿ ಪರಮಾತ್ಮ ಭಕ್ತರೆಲ್ಲರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶ ಕಂಡ ಶ್ರೇಷ್ಠ ಸಂತರು, ಆಧ್ಯಾತ್ಮಿಕ ಪ್ರವಚನಕಾರರಾದ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖ ಉಂಟು ಮಾಡಿದೆ ಎಂದು ದೇವೇಗೌಡರು ಕಂಬನಿ ಮಿಡಿದಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿಗಳ ಲಿಂಗೈಕ್ಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ​ನಾರಾಯಣ ಕಣ್ಣೀರು ಹಾಕಿದ್ದಾರೆ. ಸ್ವಾಮೀಜಿಯವರು ತಮ್ಮ ನಿಷ್ಕಾಮ ಕರ್ಮದಿಂದಾಗಿ 'ನಡೆದಾಡುವ ದೇವರು' ಎಂದೇ ಜನಮಾನಸದಲ್ಲಿ ಹೆಸರಾಗಿದ್ದರು. ತಾವು ಪಡೆದದ್ದೆಲ್ಲವನ್ನೂ ಸಮಾಜಕ್ಕೆ ಸಲ್ಲಿಸಬೇಕೆಂಬುದೇ ಅವರ ಬದುಕಿನ ಪರಮ ಧ್ಯೇಯವಾಗಿತ್ತು. ಪ್ರತಿಯೊಂದು ವಸ್ತುವಿನಲ್ಲೂ ಭಗವಂತನ ಚೈತನ್ಯವನ್ನು ಅನುಭವಿಸಿ, ಅದನ್ನು ಬೇರೆಯವರಿಗೂ ಮನ ಮುಟ್ಟುವಂತೆ ವಿವರಿಸುತ್ತಿದ್ದರು ಎಂದು ಅವರು ಸ್ಮರಿಸಿದ್ದಾರೆ.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ನಡೆದಾಡುವ ದೇವರು, ವಿಜಯಪುರದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಅವರ ಅಗಲುವಿಕೆಯಿಂದ ಅತೀವ ದುಃಖವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಮಾತನಾಡಿ,  ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ನಡೆದಾಡುವ ವಿಶ್ವಕೋಶ. ಅವರ ಜ್ಞಾನ ಬೋಧನೆಯ ಲಾಭ ಪಡೆದು ಸನ್ಮಾರ್ಗದಲ್ಲಿ ನಡೆಯಬೇಕು. ಇವರ ಜ್ಞಾನ ಖ್ಯಾತಿ ದೇಶ-ವಿದೇಶಗಳಲ್ಲಿ ಪಸರಿಸಿದೆ. ಇಂತಹ ಮಹಾನ್‌ ಜ್ಞಾನಿಯ ಜ್ಞಾನ ಸುಧೆಯ ಬೆಳಕಿನಲ್ಲಿ ಎಲ್ಲರೂ ಮುನ್ನಡೆಯುವ ಅಗತ್ಯವಿದ್ದು, ಇದುವೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದ್ದಾರೆ.

ಇದರಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು ಶಾಸಕರು ಹಾಗೂ ಕಾಂಗ್ರೆಸ್​​ನ ಹಿರಿಯ ನಾಯಕರು ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com