ತೂಕ ಇಳಿಕೆ: ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲ, ಟೆಕ್ಕಿಗೆ ಪರಿಹಾರ ನೀಡುವಂತೆ ವೆಲ್ನೆಸ್ ಸೆಂಟರ್ ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ
ಬೆಂಗಳೂರು: ಟೆಕ್ಕಿಯೊಬ್ಬರಿಗೆ ತೂಕ ಇಳಿಸುವ ಭರವಸೆ ನೀಡಿ ಈಡೇರಿಸುವಲ್ಲಿ ವಿಫಲವಾದ ಫಿಟ್ನೆಸ್ ಸಂಸ್ಥೆಯೊಂದಕ್ಕೆ ಪರಿಹಾರ ನೀಡುವಂತೆ ನಗರದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
ಅಧ್ಯಕ್ಷ ಕೆ.ಶಿವರಾಮ ಮತ್ತು ಸದಸ್ಯರಾದ ಕೆ.ಎಸ್.ರಾಜು ಮತ್ತು ರೇಖಾ ಸಾಯಣ್ಣವರ್ ಅವರನ್ನೊಳಗೊಂಡ ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ನಮೋ ವೆಲ್‌ನೆಸ್‌ಗೆ ಸೂಚಿಸಿದೆ.
ಅಮೆಜಾನ್ ಸಿಬ್ಬಂದಿಯಾಗಿರುವ ನಗರದ 26 ವರ್ಷದ ಮಹಿಳೆಗೆ ತೂಕ ಕಡಿಮೆ ಮಾಡುವುದಾಗಿ ನಮೋ ವೆಲ್ನೆಸ್ ಸಂಸ್ಥೆ ಭರವಸೆ ನೀಡಿದೆ. ಇದರಂತೆ ಮಹಿಳೆ 3 ಸೆಷನ್ ಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಚಿಕಿತ್ಸೆಯ ಬಳಿಕವು ನವೆಂಬರ್ 22, 2020 ರಂತೆ 101.5 ಕೆಜಿ ಇದ್ದ ಅವರ ತೂಕವು ಜನವರಿ 19, 2021 ಕ್ಕೆ 101.8 ಕೆಜಿಗೆ ಏರಿಕೆಯಾಗಿದೆ. ಕೊಟ್ಟ ಭರವಸೆ ಈಡೇರಿಸುವಲ್ಲಿ ಫಿಟ್ನೆಸ್ ಕೇಂದ್ರ ವಿಫಲವಾದ ಹಿನ್ನೆಲೆಯಲ್ಲಿ ಮಹಿಳೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದಾರೆ.
ದೂರು ಪರಿಶೀಲನೆ ನಡೆಸಿದ ಗ್ರಾಹಕರ ವೇದಿಕೆಯು, ದೂರುದಾರರಿಗೆ ರೂ.15,000 ಪರಿಹಾರ ಹಾಗೂ ವ್ಯಾಜ್ಯ ವೆಚ್ಚ ರೂ.10,000 ಸೇರಿ ಒಟ್ಟು ರೂ.25,000 ಪಾವತಿಸುವುದು ಜೊತೆಗೆ ಕೇಂದ್ರಕ್ಕೆ ಅವರು ಪಾವತಿಸಿದ ರೂ.50,000ಗೆ ಶೇ.9ರಷ್ಟು ಬಡ್ಡಿಯೊಂದಿಗೆ 20,000ಗಳನ್ನು ಹಿಂತಿರುಗಿಸುವಂತೆ ನಮೋ ವೆಲ್ನೆಸ್'ಗೆ ಆದೇಶಿಸಿದೆ.
ಯುವ ಉದ್ಯೋಗಿಯಾಗಿರುವ ದೂರುದಾರರು ತಮ್ಮ ಭವಿಷ್ಯದ ಕನಸುಗಳು ಮತ್ತು ಆಕಾಂಕ್ಷೆಗಳಿಗೆ ಸಂಬಂಧಿಸಿದಂತೆ ಹಲವು ನಿರೀಕ್ಷೆಗಳೊಂದಿಗೆ ತೂಕ ಇಳಿಸಿಕೊಳ್ಳುವ ಆಯ್ಕೆ ಮಾಡಿಕೊಂಡಿದ್ದರು. ಕೇಂದ್ರದಲ್ಲಿ ಸೇವೆಯ ಕೊರತೆಯಿಂದಾಗಿ ಮಹಿಳೆ ಭಾವನಾತ್ಮಕ ಮತ್ತು ಮಾನಸಿಕ ಸಂಕಟವನ್ನು ಅನುಭವಿಸಿದ್ದಾರೆ ಎಂದು ಆಯೋಗವು ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ