ಕೆಜಿ ಲೇಔಟ್ ಕಾಮಗಾರಿ ತ್ವರಿತಗೊಳಿಸಲು ಅಧಿಕಾರಿಗಳಿಗೆ ಬಿಡಿಎ ಆಯುಕ್ತರಿಂದ ಗಡುವು
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಲೇಔಟ್ (ಎನ್‌ಪಿಕೆಎಲ್) ರಚನೆಗೆ ಸಂಬಂಧಿಸಿದ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ ಕುಮಾರ್ ನಾಯಕ್ ಮಂಗಳವಾರ ಅಧಿಕಾರಿಗಳಿಗೆ ಆದೇಶಿಸಿದ್ದು, ಈ ಸಂಬಂಧ ಎರಡು ಗಡುವುಗಳನ್ನು ನಿಗದಿಪಡಿಸಿದ್ದಾರೆ.
ಪ್ರಾಧಿಕಾರದ ಎರಡು ಪ್ರಮುಖ ಯೋಜನೆಗಳಾದ ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಕೊಮ್ಮಘಟ್ಟ ವಸತಿ ಯೋಜನೆಗೆ ದಿಢೀರ್ ಭೇಟಿ ನೀಡಿದ ಕುಮಾರ್ ನಾಯಕ್ ಅವರು, ಈ ವೇಳೆ ಕಾಮಗಾರಿ ಕಾರ್ಯಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯ ಲಭ್ಯ ರಸ್ತೆ (ಎಂಎಆರ್ ) ಪೂರ್ಣಗೊಳಿಸಲು ಮಾರ್ಚ್ 2023, ಲೇಔಟ್-ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸಲು ಡಿಸೆಂಬರ್ 2023ರವರೆಗೆ ಗಡುವು ನೀಡಿದರು.
ಬಡಾವಣೆಯ ಮೊದಲ ಹಂತದಲ್ಲಿ 2,252 ಎಕರೆಯಲ್ಲಿ 26,500 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 10.57 ಕಿ.ಮೀ ಸಾಗುವ ಎಂಎಆರ್, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯನ್ನು ಸಂಪರ್ಕಿಸಲಿದ್ದು, ಈ ರಸ್ತೆ ಲೇಔಟ್ ಮಧ್ಯದಲ್ಲಿ ಹಾದು ಹೋಗಲಿದೆ. ಭೂಸ್ವಾಧೀನ ಪ್ರಕ್ರಿಯೆ ಇತ್ತೀಚೆಗೆ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ.
ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರ ಮಾತನಾಡಿ, ''ಕಮಿಷನರ್ ಬಿಡಿಎ ಇಂಜಿನಿಯರ್‌ಗಳಿಗೆ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಮತ್ತು ಮಾರ್ಚ್ 31 ರೊಳಗೆ ಎಂಎಆರ್ ಅನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಡಿಸೆಂಬರ್ ಒಳಗೆ ನೀರು ಮತ್ತು ಒಳಚರಂಡಿಗೆ ಮೂಲಸೌಕರ್ಯದೊಂದಿಗೆ ಲೇಔಟ್ ರಚನೆಯಾಗಬೇಕೆಂದು ಸೂಚಿಸಿದ್ದಾರೆಂದು ತಿಳಿಸಿದ್ದಾರೆ.
ಬಡಾವಣೆಯಲ್ಲಿ ಸಿದ್ಧವಾಗುತ್ತಿರುವ 10 ಒಳಚರಂಡಿ ಸಂಸ್ಕರಣಾ ಘಟಕಗಳ ಪೈಕಿ ಮೂರಕ್ಕೆ ಆಯುಕ್ತರು ಭೇಟಿ ನೀಡಿದರು. ಬಳಿಕ ಬಿಡಿಎಯ ಕೊಮ್ಮಘಟ್ಟ ವಸತಿ ಯೋಜನೆಯನ್ನು ಆಯುಕ್ತರು ಪರಿಶೀಲನೆ ನಡೆಸಿದರು ಎಂದು ತಿಳಿದುಬಂದಿದೆ.

