ಕಿಡ್ನಿ ಮಾರಾಟ ಪ್ರಕರಣ: ಐವರು ಪೊಲೀಸರ ವಿರುದ್ಧ ತನಿಖೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಆದೇಶ

29 ವರ್ಷದ ಮಾನಸಿಕ ಅಸ್ವಸ್ಥನ ಮೂತ್ರಪಿಂಡ ಮಾರಾಟ ಮತ್ತು ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕರ್ನಾಟಕ ಮಾನವ ಹಕ್ಕುಗಳ ಆಯೋಗವು ಇಲಾಖಾ ತನಿಖೆಗೆ ಆದೇಶಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 29 ವರ್ಷದ ಮಾನಸಿಕ ಅಸ್ವಸ್ಥನ ಮೂತ್ರಪಿಂಡ ಮಾರಾಟ ಮತ್ತು ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕರ್ನಾಟಕ ಮಾನವ ಹಕ್ಕುಗಳ ಆಯೋಗವು ಇಲಾಖಾ ತನಿಖೆಗೆ ಆದೇಶಿಸಿದೆ.

ಪ್ರಕರಣದ ಹೆಚ್ಚಿನ ತನಿಖೆಯನ್ನು ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ (ಸಿಐಡಿ) ಗೆ ವಹಿಸುವಂತೆ ಆಯೋಗ ಶಿಫಾರಸು ಮಾಡಿದೆ. ಅಲ್ಲದೆ, ಸಂತ್ರಸ್ತನ ತಾಯಿಗೆ ಒಂದು ತಿಂಗಳ ಅವಧಿಯಲ್ಲಿ 14 ಲಕ್ಷ ಪರಿಹಾರ ನೀಡುವಂತೆ ಮತ್ತು ಪರಿಹಾರದ ಮೊತ್ತವನ್ನು ಆರೋಪಿ ಪೊಲೀಸ್ ಅಧಿಕಾರಿಗಳ ಸಂಬಳದಿಂದ ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಪೊಲೀಸರು ಆರು ತಿಂಗಳು ವಿಳಂಬ ಮಾಡಿರುವುದು ಸಾಬೀತಾಗಿದೆ. ಪೊಲೀಸರ ಕರ್ತವ್ಯಲೋಪ ಮತ್ತು ಅಸಮರ್ಪಕ ತನಿಖೆಯೂ ಆಯೋಗದ ತನಿಖೆಯಿಂದ ತಿಳಿದುಬಂದಿದೆ ಎಂದು ಆಯೋಗದ ಸದಸ್ಯ ಕೆ.ಬಿ. ಚಂಗಪ್ಪ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ನಡೆಸುವಂತೆ ಮಹಾನಿರ್ದೇಶಕರು ಮತ್ತು ಐಜಿಪಿ ಪ್ರವೀಣ್ ಸೂದ್ ಅವರಿಗೆ ಆಯೋಗ ಶಿಫಾರಸು ಮಾಡಿದೆ.

ಅಂದಿನ ಸಿದ್ದಾಪುರ ಠಾಣೆ ಇನ್ಸ್‌ಪೆಕ್ಟರ್‌ಗಳಾದ ಎಂ.ಎಲ್. ಕೃಷ್ಣಮೂರ್ತಿ, ಬಿ. ಶಂಕರಾಚಾರ್, ಪಿಎಸ್‌ಐಗಳಾದ ವಿ. ಸಂತೋಷ್, ಜೆ.ಎಂ. ಅಬ್ರಹಾಂ, ಹೆಡ್‌ಕಾನ್‌ಸ್ಟೇಬಲ್ ಕೆ.ಎಸ್. ಗೋಪಾಲ್ ವಿರುದ್ಧ ತನಿಖೆಗೆ ಶಿಫಾರಸ್ಸು ಮಾಡಲಾಗಿದೆ.

ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಅವರ ವೇತನದಿಂದ 3 ಲಕ್ಷ, ಇನ್ಸ್‌ಪೆಕ್ಟರ್ ಶಂಕರಾಚಾರ್ ಅವರಿಂದ 7 ಲಕ್ಷ, ಪಿಎಸ್‌ಐ ಸಂತೋಷ್ ಮತ್ತು ಅಬ್ರಹಾಂ ಅವರಿಂದ ತಲಾ 1.50 ಲಕ್ಷ ರೂ. ಹಾಗೂ ಹೆಡ್‌ಕಾನ್‌ಸ್ಟೇಬಲ್ ಗೋಪಾಲ್ ಅವರಿಂದ 1 ಲಕ್ಷ ರೂ. ವಸೂಲಿ ಮಾಡಬೇಕು ಎಂದು ಆಯೋಗ ಹೇಳಿತ್ತು.

ಸಂತ್ರಸ್ತ ಯಾದಗಿರಿಯ ಮಾನಸಿಕ ಅಸ್ವಸ್ಥರಾಗಿದ್ದ ಶಂಕರಪ್ಪ ಅವರನ್ನು 2018ರ ಅಕ್ಟೋಬರ್‌ನಲ್ಲಿ ಏಕತಾ ಚಾರಿಟೇಬಲ್ ಟ್ರಸ್ಟ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಶಂಕರಪ್ಪ ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬಕ್ಕೆ ಟ್ರಸ್ಟ್‌ನಿಂದ ಕರೆ ಬಂದಿತ್ತು. ಟ್ರಸ್ಟ್‌ಗೆ ಸೇರಿದ ಶ್ರೀಧರ್ ವಾಸುದೇವ್ ಎಂಬುವವರು ಸಂತ್ರಸ್ತನ ಕುಟುಂಬಕ್ಕೆ ಈ ಬಗ್ಗೆ ನಕಲಿ ದಾಖಲೆಗಳನ್ನು ನೀಡಿದ್ದರು. ತಿಂಗಳು ಕಳೆದರೂ ಸಂತ್ರಸ್ತ ಪತ್ತೆಯಾಗದಿದ್ದಾಗ, ಶ್ರೀಧರ್ ವಾಸುದೇವ್ ಹಾಗೂ ಇತರರ ವಿರುದ್ಧ ಬೆಂಗಳೂರಿನ ಸಿದ್ದಾಪುರ ಠಾಣೆಗೆ ದೂರು ನೀಡಲಾಗಿತ್ತು.

ಆರೋಪಿಯ ಎರಡೂ ಕಿಡ್ನಿಗಳನ್ನು ತೆಗೆಯಲಾಗಿದೆ ಮತ್ತು ಆಪರೇಷನ್ ಥಿಯೇಟರ್‌ನಲ್ಲಿಯೇ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತೀವ್ರ ರಕ್ತಸ್ರಾವದಿಂದಾಗಿ ಸಾವಿಗೀಡಾಗಿದ್ದಾರೆ ಎಂಬುದು ಆಯೋಗದ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.

ಈ ಬಗ್ಗೆ 2019ರ ಸೆಪ್ಟೆಂಬರ್‌ನಲ್ಲಿ ದೂರು ನೀಡಿದ್ದರೂ, ದಾಖಲಿಸಿಕೊಂಡಿಲ್ಲ. ಹಲವು ತಿಂಗಳ ನಂತರ ಸಂತ್ರಸ್ತನ ಕಿಡ್ನಿಯನ್ನು 10 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಂತರ ಪೊಲೀಸರು ಈ ಸಂಬಂಧ 2020ರ ಮಾರ್ಚ್ 7ರಂದು ದೂರು ದಾಖಲಿಸಿದ್ದರು. ಪೊಲೀಸರ ಕರ್ತವ್ಯಲೋಪವನ್ನು ಉಲ್ಲೇಖಿಸಿ ಸಂತ್ರಸ್ತರ ಸಂಬಂಧಿ ಶಿವಾನಂದ್ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.

ಬಂಧಿತ ಆರೋಪಿ ಶ್ರೀಧರ್ ವಾಸುದೇವ್ ತನ್ನ ಮೊದಲ ಹೇಳಿಕೆಯಲ್ಲಿ ಸಂತ್ರಸ್ತನ ಮೂತ್ರಪಿಂಡಗಳನ್ನು ಮಾರಾಟ ಮಾಡಿರುವುದಾಗಿ ಪೊಲೀಸರೊಂದಿಗೆ ಒಪ್ಪಿಕೊಂಡಿದ್ದಾನೆ. ಆದರೆ, ಪೊಲೀಸರು ಉದ್ದೇಶಪೂರ್ವಕವಾಗಿಯೇ ಈ ಹೇಳಿಕೆಯನ್ನು ಕೈಬಿಟ್ಟು ತಪ್ಪು ದಿಕ್ಕಿನಲ್ಲಿ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ ಎಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ.

ಸೂಕ್ತ ತನಿಖೆ ನಡೆಸದೆ, ಪ್ರಭಾವಕ್ಕೆ ಒಳಗಾಗಿ ತರಾತುರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಆಯೋಗ ಹೇಳಿದೆ.

ಶಂಕರಪ್ಪ ಬದುಕಿದ್ದಾನೋ ಅಥವಾ ಸತ್ತಿದ್ದಾನೋ ಎಂಬ ಬಗ್ಗೆ ಕುಟುಂಬಕ್ಕೆ ಇನ್ನೂ ಯಾವುದೇ ದೃಢೀಕರಣವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com