ಪ್ರವಾಸಿಗರ ಸೆಳೆಯಲು ಗೋಲ್ಡನ್‌ ಚಾರಿಯೆಟ್‌ ಐಷಾರಾಮಿ ರೈಲಿನ ಶುಲ್ಕ ಇಳಿಸಿ: ಕೇಂದ್ರಕ್ಕೆ ಸಿಎಂ ಬೊಮ್ಮಾಯಿ ಪತ್ರ

ಪ್ರವಾಸಿಗರ ಸೆಳೆಯಲು ರಾಜ್ಯದ ಐಷಾರಾಮಿ ಎಕ್ಸ್‌ಪ್ರೆಸ್ ಗೋಲ್ಡನ್ ಚಾರಿಯಟ್‌ ರೈಲಿನ ಶುಲ್ಕವನ್ನು ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮನವಿ ಮಾಡಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಿಕ್ಕಬಳ್ಳಾಪುರ: ಪ್ರವಾಸಿಗರ ಸೆಳೆಯಲು ರಾಜ್ಯದ ಐಷಾರಾಮಿ ಎಕ್ಸ್‌ಪ್ರೆಸ್ ಗೋಲ್ಡನ್ ಚಾರಿಯಟ್‌ ರೈಲಿನ ಶುಲ್ಕವನ್ನು ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಕೇಂದ್ರ ರೈಲ್ವೇ ಸಚಿವಾಲಯಕ್ಕೆ ಪತ್ರ ಬರೆದಿರುವ ಅವರು, ಪ್ರಯಾಣದ ಶುಲ್ಕವನ್ನು ಇಳಿಕೆ ಮಾಡಿದರೆ, ರೈಲಿನಲ್ಲಿ ಹೆಚ್ಚೆಚ್ಚು ಪ್ರವಾಸಿಗರು ಪ್ರಯಾಣ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಹಿಂದಿನ ನಿಮಯ ಹಾಗೂ ಷರತ್ತುಗಳನ್ನೇ ಅನುಸರಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ.

ನವೆಂಬರ್ 2022 ರಲ್ಲಿ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಆರಂಭಿಸುವುದಕ್ಕೂ ಮುನ್ನ ಕೂಡ  ಅಂದರೆ 5 ತಿಂಗಳ ಹಿಂದೆ ಮುಖ್ಯಮಂತ್ರಿ, ಪ್ರವಾಸೋದ್ಯಮ ಇಲಾಖೆ ಮತ್ತು ಐಆರ್'ಸಿ'ಟಿಸಿ ರೈಲ್ವೇ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿತ್ತು.

2018 ರಲ್ಲಿ ಪರಿಷ್ಕೃತ ಒಪ್ಪಂದದ ಪ್ರಕಾರ, ರೈಲ್ವೆ ಮತ್ತು ರಾಜ್ಯವು 50:50 ಆದಾಯ-ಹಂಚಿಕೆ ಮಾದರಿ ಮತ್ತು ಸಾಗಣೆ ಶುಲ್ಕಗಳನ್ನು ರೂಪಿಸಬೇಕಿತ್ತು. ಆದರೆ, ಇದೀಗ ರೈಲನ್ನು ಭಾರತ್ ಗೌರವ್ ವಿಭಾಗದಲ್ಲಿ ಪಟ್ಟಿ ಮಾಡಲಾಗಿರುವುದರಿಂದ ರೈಲ್ವೇ ಸಚಿವಾಲಯ ಸಾಗಣೆ ಶುಲ್ಕವನ್ನು ಹೆಚ್ಚಿಸಿದೆ.

ಕೆಎಸ್‌ಟಿಡಿಸಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ರೈಲ್ವೇಯು ಸಾಗಣೆ ಶುಲ್ಕದ ನಿಯಮಗಳನ್ನು ಬದಲಾಯಿಸಿರುವುದು ಇದು ಎರಡನೇ ಬಾರಿಯಾಗಿದೆ. 2018 ರಲ್ಲಿ ರೈಲು ಸೇವೆ ಆರಂಭವಾದಾಗಲೂ ನಿಯಮ ಬದಲಾಯಿಸಿತ್ತು ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸೇರಿದ ರೈಲುಗಳ ನಿರ್ವಹಣೆ ಮಾಡುತ್ತಿರುವ ಐಆರ್‌ಸಿಟಿಸಿ ಅಧಿಕಾರಿಗಳು ಮಾತನಾಡಿ, “ಹೊಸ ಸಾಗಣೆ ಶುಲ್ಕದ ನಿಯಮಗಳ ಪ್ರಕಾರ, ನಾವು ವರ್ಷಕ್ಕೆ ಸುಮಾರು 2 ಕೋಟಿ ರೂ.ಗಳನ್ನು ನಿಗದಿತ ಸಾಗಣೆ ಶುಲ್ಕವಾಗಿ ಪಾವತಿಸಬೇಕಾಗುತ್ತದೆ, ಜೊತೆಗೆ ಪ್ರತಿ ಕೋಚ್‌ಗೆ ಪ್ರತಿ ಕಿಲೋಮೀಟರ್‌ಗೆ ಸುಮಾರು 900 ರೂ ಪಾವತಿಸಬೇಕಾಗಿದೆ. ಈ ಹಿಂದಿದ್ದ 50:50 ಹಂಚಿಕೆಯ ಒಪ್ಪಂದವನ್ನು ಮುಂದುವರಿಸಿದ್ದರೆ, ನಾವು ಸುಮಾರು ರೂ.56 ಲಕ್ಷ ಪಾವತಿಸುತ್ತಿದ್ದೆವು. ಇದು ಪ್ರಯಾಣದ ಶುಲ್ಕವನ್ನೂ ಕಡಿಮೆ ಮಾಡುತ್ತಿತ್ತು ಎಂದು ತಿಳಿಸಿದ್ದಾರೆ.

ಐಷಾರಾಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕನಿಷ್ಠ 14 ಕೋಚ್‌ಗಳನ್ನು ಇರಬೇಕಿದೆ. ಪ್ರಸ್ತುತದ ಗೋಲ್ಡನ್‌ ಚಾರಿಯೆಟ್‌ ರೈಲಿನಲ್ಲಿ ಒಟ್ಟು 18 ಕೋಚ್‌ಗಳಿದ್ದು, ಅದರಲ್ಲಿ 11 ಅತಿಥಿಗಳಿಗಾಗಿಯೇ ಇದೆ. ಇದರ ಜೊತೆಗೆ ಎರಡು ರೆಸ್ಟೋರೆಂಟ್‌ಗಳು, ಒಂದು ಬಾರ್, ಎರಡು ಪವರ್ ಕಾರ್‌ಗಳು ಮತ್ತು ಒಂದು ಆರೋಗ್ಯ ಕೋಚ್ ಇದೆ ಎಂದು ತಿಳಿದುಬಂದಿದೆ.

“ಸಾಂಕ್ರಾಮಿಕ ರೋಗ ಎದುರಾಗದೇ ಹೋಗಿದ್ದರೆ, ಹಳೆಯ ಸಾಗಣೆ ಮಾದರಿಗಳು ಮುಂದುವರೆಯುತ್ತಿದ್ದವು. ಸಮೀಕ್ಷೆಗಳ ಪ್ರಕಾರ ವಿದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತೀಯರು ಅತೀ ಹೆಚ್ಚು ಪ್ರಯಾಣ ಮಾಡುತ್ತಿದ್ದು, ಹೋಟೆಲ್ ಹಾಗೂ ರೆಸಾರ್ಟ್ ಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆಂದು ತಿಳಿದುಬಂದಿದೆ. ಗೋಲ್ಡನ್ ಚಾರಿಯಟ್ ರೈಲು ಚಲಿಸುವ ಹೋಟೆಲ್'ನ್ನು ಹೊಂದಿದೆ ಎಂದು ಕೆಎಸ್‌ಟಿಡಿಸಿ ಅಧಿಕಾರಿ ತಿಳಿಸಿದ್ದಾರೆ.

ಈ ನಡುವೆ ಬೆಂಗಳೂರಿನಲ್ಲಿ ನಡೆದ ಜಿ20 ಶೃಂಗಸಭೆ ಹೆಚ್ಚಿನ ಪ್ರವಾಸಿಗರರು ಕರ್ನಾಟಕದತ್ತ ಮುಖ ಮಾಡುವಂತೆ ಮಾಡಿದೆ. ಗೋಲ್ಡನ್ ಟ್ರಯಾಂಗಲ್ ಮತ್ತು ತಾಜ್ ಮಹಲ್‌ನಿಂದಾಗಿ ಮಹಾರಾಜ ಎಕ್ಸ್‌ಪ್ರೆಸ್ ಅತ್ಯಂತ ಜನಪ್ರಿಯವಾಗಿದೆ, ಹಂಪಿಯತ್ತ ಜನರು ಹೆಚ್ಚು ಆಕರ್ಷಿತರಾಗುವಂತೆ ಮಾಡಬೇಕಿದೆ ಎಂದು ಐಆರ್'ಸಿಟಿಸಿ ಜಂಟಿ ಜನರಲ್ ಮ್ಯಾನೇಜರ್ ಅನುಪ್ ಕುಮಾರ್ ಅವರು ಹೇಳಿದ್ದಾರೆ.

ಗೋಲ್ಡನ್ ಚಾರಿಯಟ್ ರೈಲನ್ನು ನವೀಕರಿಸಲಾಗಿದ್ದು, ಈ ರೈಲು 2023ರ ಜನವರಿ ಅಂತ್ಯದಲ್ಲಿ ಮೊದಲ ಪ್ರಯಾಣವನ್ನು ಆರಂಭಿಸಲಿದೆ ಎಂದು ತಿಳಿಸಿದ್ದಾರೆ.

ಮದುವೆಗಳು, ಆರತಕ್ಷತೆಗಳು ಮತ್ತು ಕಚೇರಿ ಪ್ರವಾಸಗಳಿಗೆ ರೈಲು ನೀಡುವ ಹಳೆಯ ಯೋಜನೆಯನ್ನು ಮರಳಿ ತರಲು ಇಲಾಖೆ ಚಿಂತನೆ ನಡೆಸಿದ್ದು, ಬೇಡಿಕೆಗೆ ಅನುಗುಣವಾಗಿ ಕಸ್ಟಮೈಸ್ ಟ್ರಿಪ್‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com