ಕಲಬುರಗಿ: ಕೊಳೆ ರೋಗದಿಂದಾಗಿ 1.98 ಲಕ್ಷ ಹೆಕ್ಟೇರ್‌ ತೊಗರಿ ಬೆಳೆ ನಾಶ; ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಕೆ

ಕಲಬುರಗಿ ಜಿಲ್ಲೆಯ 4.78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ ಬೆಳೆಯ ಪೈಕಿ 1.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತೊಗರಿ ಬೆಳೆಯು ಕೊಳೆ ರೋಗದಿಂದಾಗಿ ಹಾನಿಯಾಗಿರುವ ಕುರಿತು ಕಲಬುರಗಿ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಿದೆ.
ಕೊಳೆ ರೋಗದಿಂದ ಹಾನಿಗೀಡಾದ 1.98 ಲಕ್ಷ ಹೆಕ್ಟೇರ್‌ನಲ್ಲಿನ ತೊಗರಿ ಬೆಳೆ
ಕೊಳೆ ರೋಗದಿಂದ ಹಾನಿಗೀಡಾದ 1.98 ಲಕ್ಷ ಹೆಕ್ಟೇರ್‌ನಲ್ಲಿನ ತೊಗರಿ ಬೆಳೆ
Updated on

ಕಲಬುರಗಿ: ಕಲಬುರಗಿ ಜಿಲ್ಲೆಯ 4.78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ ಬೆಳೆಯ ಪೈಕಿ 1.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತೊಗರಿ ಬೆಳೆಯು ಕೊಳೆ ರೋಗದಿಂದಾಗಿ ಹಾನಿಯಾಗಿರುವ ಕುರಿತು ಕಲಬುರಗಿ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಿದೆ.

ಡಿಸೆಂಬರ್ 1ನೇ ವಾರದವರೆಗೆ ನಡೆಸಿದ ಪ್ರಾಥಮಿಕ ವರದಿಯಲ್ಲಿ 69,747 ಹೆಕ್ಟೇರ್ ಭೂಮಿಯಲ್ಲಿ ಸಂಕೀರ್ಣವಾದ ಕೊಳೆ ರೋಗದಿಂದಾಗಿ ಉಂಟಾಗಿರುವ ನಷ್ಟವನ್ನು ಜಿಲ್ಲಾಡಳಿತ ತೋರಿಸಿದೆ ಎಂದು ಅಧಿಕೃತ ಮೂಲಗಳು ಟಿಎನ್ಐಇಗೆ ತಿಳಿಸಿವೆ. ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್, ಜನತಾ ದಳ ಸೇರಿದಂತೆ ಹಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ, ಸಮಗ್ರ ಸಮೀಕ್ಷೆ ನಡೆಸಿ ಜಿಲ್ಲೆಯ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದವು.

ತೊಗರಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಡಿ. 7ರಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಬೆಳಗಾವಿ ವಿಧಾನಸೌಧದ ಎದುರು ಜೆಡಿಎಸ್ ಧರಣಿ ನಡೆಸಿತ್ತು. ಜ.16ರಂದು ಚಿಂಚೋಳಿಯಲ್ಲಿ ಹಲವು ಸಂಘಟನೆಗಳು ಬಂದ್ ಆಚರಿಸಿದರೆ, ಎಡಪಕ್ಷಗಳು ಜ.17ರಂದು ಕಲಬುರಗಿ ಬಂದ್‌ಗೆ ಕರೆ ನೀಡಿದ್ದವು.

ಜ.7ರಂದು ಕೆಡಿಪಿ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು, ಕಾಂಪ್ಲೆಕ್ಸ್ ವಿಲ್ಟ್ ಕಾಯಿಲೆಯಿಂದ ಆಗಿರುವ ನಷ್ಟದ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ 5 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಕೃಷಿ ಇಲಾಖೆಗೆ ನಿರ್ದೇಶನ ನೀಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಕೃಷಿ ಇಲಾಖೆಯು ಜ.10ರಂದು ಸಮಗ್ರ ಸಮೀಕ್ಷೆ ಆರಂಭಿಸಿ ಜನವರಿ 13ರಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ವರದಿಯನ್ನು ಜಿಲ್ಲಾಧಿಕಾರಿ ಸರ್ಕಾರಕ್ಕೆ ರವಾನಿಸಿದ್ದಾರೆ. ಜಿಲ್ಲೆಯಲ್ಲಿ 4,78,702 ಹೆಕ್ಟೇರ್‌ನಲ್ಲಿ ತೊಗರಿ ಬೆಳೆಯಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಡಿಸೆಂಬರ್ 1ನೇ ವಾರದಲ್ಲಿ ನಡೆಸಿದ ಪ್ರಾಥಮಿಕ ಸಮೀಕ್ಷೆಯಲ್ಲಿ 69,747 ಹೆಕ್ಟೇರ್‌ನಲ್ಲಿ ಹಾನಿಯಾಗಿರುವುದು ಗಮನಕ್ಕೆ ಬಂದಿದೆ. ಜನವರಿ ಎರಡನೇ ವಾರದಲ್ಲಿ ನಡೆಸಲಾದ ಎರಡನೇ ಸಮೀಕ್ಷೆಯಲ್ಲಿ 1,28,741 ಹೆಕ್ಟೇರ್ ಭೂಮಿಯಲ್ಲಿ ಬೆಳೆದ ಬೆಳೆ ಕೊಳೆ ರೋಗದಿಂದಾಗಿ ಹಾನಿಗೊಳಗಾಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಒಟ್ಟು 1,98,488 ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ ಬೆಳೆ ಹಾನಿಗೊಳಗಾಗಿದೆ ಎಂದು ವರದಿ ತಿಳಿಸಿದೆ.

ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಸಚಿವ ಸಂಪುಟ ಸಭೆಯ ನಂತರ ಸರ್ಕಾರ ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com