ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿವಮೊಗ್ಗ: 108 ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥ, ಯೋಗಥಾನ್ ಕಾರ್ಯಕ್ರಮದಲ್ಲಿ ನೀಡಿದ ತಿಂಡಿಯ ಮೇಲೆ ಅನುಮಾನ, ಪ್ರತಿಭಟನೆ

ನಗರ ಹಾಗೂ ಹೊರವಲಯದಲ್ಲಿರುವ ಸರಕಾರಿ ವಸತಿ ಶಾಲೆ ಹಾಗೂ ಬಾಲಕಿಯರ ವಸತಿ ನಿಲಯಗಳ 108 ವಿದ್ಯಾರ್ಥಿಗಳಲ್ಲಿ ವಾಂತಿಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸೋಮವಾರ ಸಂಜೆ ಹಾಗೂ ಮಂಗಳವಾರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
Published on

ಶಿವಮೊಗ್ಗ: ನಗರ ಹಾಗೂ ಹೊರವಲಯದಲ್ಲಿರುವ ಸರಕಾರಿ ವಸತಿ ಶಾಲೆ ಹಾಗೂ ಬಾಲಕಿಯರ ವಸತಿ ನಿಲಯಗಳ 108 ವಿದ್ಯಾರ್ಥಿಗಳಲ್ಲಿ ವಾಂತಿಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸೋಮವಾರ ಸಂಜೆ ಹಾಗೂ ಮಂಗಳವಾರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಗೆ ವಿಷಪೂರಿತ ಆಹಾರ ಕಾರಣವೆಂದು ಹೇಳಲಾಗುತ್ತಿದ್ದು, ಭಾನುವಾರ ನಡೆದ ಯೋಗಥಾನ್ ಕಾರ್ಯಕ್ರಮದಲ್ಲಿ ನೀಡಲಾದ ಕಳಪೆ ಗುಣಮಟ್ಟದ ಆಹಾರವೇ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ರಾಷ್ಟ್ರೀಯ ಯವ ದಿನದ ಅಂಗವಾಗಿ ರಾಜ್ಯಾದ್ಯಂತ ಯೋಗಥಾನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಏಕಕಾಲಕ್ಕೆ 4.05 ಲಕ್ಷ ಜನರು ಯೋಗ ಮಾಡಿದ್ದು, ಗಿನ್ನಿಸ್ ದಾಖಲೆಯಾಗಿದೆ. ಇದರಂತೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿಯುೂ ಯೋಗಥಾನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದ ಮಕ್ಕಳಲ್ಲಿ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಯೋಗ ಕಾರ್ಯಕ್ರಮದಲ್ಲಿ ವಿಷಪೂರಿತ ಆಹಾರ ಪೂರೈಕೆ ಮಾಡಿರುವುದರಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ. ಹೀಗಾಗ ಮಕ್ಕಳ ಆರೋಗ್ಯ ಕುರಿತು ಸರ್ಕಾರವೇ ನಿಗಾವಹಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ ಅವರು, ಆಹಾರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು.

ಯೋಗಥಾನ್‌ನಲ್ಲಿ ನೀಡಲಾದ ಆಹಾರವೇ ಇದೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಕ್ರಮದಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. ಊಟದ ಜತೆಗೆ ಮಜ್ಜಿಗೆಯನ್ನೂ ನೀಡಲಾಗಿತ್ತು. ಊಟದ ಬಳಿಕ ಕುಡಿಯಲು ಕೆಲ ವಿದ್ಯಾರ್ಥಿಗಳು ಕವರ್ ಗಳಲ್ಲಿ ಮಜ್ಜಿಗೆ ಕುಡಿಯಲು ತೆಗೆದುಕೊಂಡಿರಬಹುದು. ಮರುದಿನ ಮಜ್ಜಿಗೆ ಸೇವಿಸಿ ಅಸ್ವಸ್ಥರಾಗಿರಬಹುದು. ಈ ಆಯಾಮದಲ್ಲಿಯೂ ಪರಿಶೀಲನೆ ನಡೆಸುತ್ತಿದ್ದೇವೆಂದು ತಿಳಿಸಿದ್ದಾರೆ.

ಮೆಲಿನಾ ಹನಸವಾಡಿಯ ಮೌಲಾನಾ ಆಜಾದ್ ವಸತಿ ಶಾಲೆಯ 92 ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಸೇವಿಸಿದ ನಂತರ ವಾಂತಿ ಮತ್ತು ಹೊಟ್ಟೆ ನೋವಿನ ದೂರುಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ, ಇನ್ನೂ ಎರಡು ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ಇದೇ ರೀತಿಯ ದೂರುಗಳಿಂದ ಅಸ್ವಸ್ಥಗೊಂಡಿದ್ದು ವರದಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com