ಸಚಿವ ಎಂಟಿಬಿ ನಾಗರಾಜ್ ಸೇರಿದಂತೆ ಇತರರಿಂದ ನೀರಿನ ಬಿಲ್ ಬಾಕಿ; ಒಟ್ಟು 19 ಕೋಟಿ ರೂ. ವಸೂಲಿ!

ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ನೋಟಿಸ್ ಜಾರಿ ಮಾಡಿದ ನಂತರ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಿದ ಬಳಿಕ ಕಳೆದ ಐದು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಸುಸ್ತಿದಾರರಿಂದ 19.35 ಕೋಟಿ ರೂ. ನೀರಿನ ಬಿಲ್‌ಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ವಸೂಲಿ ಮಾಡಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ನೋಟಿಸ್ ಜಾರಿ ಮಾಡಿದ ನಂತರ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಿದ ಬಳಿಕ ಕಳೆದ ಐದು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಸುಸ್ತಿದಾರರಿಂದ 19.35 ಕೋಟಿ ರೂ. ನೀರಿನ ಬಿಲ್‌ಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ವಸೂಲಿ ಮಾಡಿದೆ. ಬಿಲ್ ಪಾವತಿಸಿದವರಲ್ಲಿ ಸಣ್ಣ ಕೈಗಾರಿಕೆ ಮತ್ತು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮತ್ತು ಅವರ ಕುಟುಂಬ ಸದಸ್ಯರು ಸೇರಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಬೆಂಗಳೂರು ಮಹಾನಗರ ಕಾರ್ಯಪಡೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಕೆ ರಾಮಚಂದ್ರ ರಾವ್ ಟಿಎನ್ಐಇ ಜೊತೆಗೆ ಮಾತನಾಡಿ, ಬಿಎಂಟಿಎಫ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, 2018 ರಿಂದ 2022 ರವರೆಗೆ ಐದು ವರ್ಷಗಳಲ್ಲಿ ಬಾಕಿ ಉಳಿಸಿಕೊಂಡಿದ್ದ ಒಟ್ಟು 19,34,28,118 ರೂ. ಗಳನ್ನು  ಸುಸ್ತಿದಾರರು ಜಲಮಂಡಳಿಗೆ ಪಾವತಿಸಿದ್ದಾರೆ ಎಂದು ತಿಳಿಸಿದರು.

ಬಿಡಬ್ಲ್ಯುಎಸ್‌ಎಸ್‌ಬಿ ನೀಡಿದ ಸುಸ್ತಿದಾರರ ಪಟ್ಟಿಯಲ್ಲಿ, ಕಾರ್ಯಪಡೆಯು 347 (ನಾನ್ ಕಾಗ್ನಿಸಬಲ್ (ಗಂಭೀರ ಸ್ವರೂಪವಲ್ಲದ ಅಪರಾಧ) ವರದಿಗಳನ್ನು ಸಲ್ಲಿಸಿದೆ ಮತ್ತು ಮನೆಗಳಿಗೆ ವೈಯಕ್ತಿಕ ನೋಟಿಸ್‌ಗಳನ್ನು ನೀಡಿತು. ಇದರಿಂದ ಬಾಕಿ ಉಳಿಸಿ ಕೊಂಡಿದ್ದ ಜನರಿಂದ 14,04,85,187 ರೂ. ವಸೂಲಿಯಾಯಿತು. ಜತೆಗೆ 204 ಕುಟುಂಬಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಅವರಿಂದ 5,29,52,931 ರೂ.ಗಳನ್ನು ಸಂಗ್ರಹಿಸಿತು. ಸಾರ್ವಜನಿಕರಿಂದ ಸಂಗ್ರಹಿಸಲಾದ ದಂಡಗಳಲ್ಲಿ ಎರಡು ರೀತಿಯ ದೂರುಗಳು ಸೇರಿವೆ. ಒಂದು ಅನಧಿಕೃತ ನೀರಿನ ಸಂಪರ್ಕಗಳು ಮತ್ತು ಬಿಲ್‌ಗಳ ಪಾವತಿಯಲ್ಲಿ ವಿಳಂಬ ಎಂದರು.

ನೀರಿನ ಬಿಲ್ ಪಾವತಿ ಬಾಕಿ ಉಳಿಸಿಕೊಂಡವರಲ್ಲಿ ಸಚಿವ ನಾಗರಾಜ್ ಮತ್ತು ಅವರ ಕುಟುಂಬ ಸದಸ್ಯರು ಸೇರಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೆಲವು ವರ್ಷಗಳಿಂದ ನೀರಿನ ಬಿಲ್ ಪಾವತಿಸದ ಮೊತ್ತ ಲಕ್ಷ ರೂಪಾಯಿಗಳಾಗಿದ್ದರಿಂದ ನಾಗರಾಜ್, ಅವರ ಸಹೋದರ ಎನ್ ಪಿಳ್ಳಪ್ಪ ಮತ್ತು ಕೆಲವು ಸಂಬಂಧಿಕರಿಗೆ ಇತ್ತೀಚೆಗೆ ನೋಟಿಸ್ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಟಿಎನ್ಐಇ ಜೊತೆ ಮಾತನಾಡಿದ ಎಂಟಿಬಿ ನಾಗರಾಜ್, 'ನಾನು ವಾರ್ಷಿಕವಾಗಿ ಹಲವು ಕೋಟಿಗಳಷ್ಟು ತೆರಿಗೆಯನ್ನು ಪಾವತಿಸುತ್ತೇನೆ. ಎಲ್ಲಾ ಬಾಕಿ ಇರುವ ನೀರಿನ ಬಿಲ್‌ಗಳನ್ನು ನಾನು ಪಾವತಿಸಿದ್ದೇನೆ ಎಂದರು.

ಅವರ ಲೆಕ್ಕಪರಿಶೋಧಕ ವಿದ್ಯಾಪ್ರಕಾಶ್ ಮಾತನಾಡಿ, 'ಗರುಡಾಚಾರ್‌ಪಾಳ್ಯದಲ್ಲಿರುವ ಸಚಿವರ ಕಟ್ಟಡದ ನಿವಾಸಿಗಳು ನೀರಿನ ಬಿಲ್ ಪಾವತಿಸಿಲ್ಲ. ಇದನ್ನು ಈಗ ಬಾಡಿಗೆದಾರರು ಪಿಜಿ  ಸೌಕರ್ಯವಾಗಿ ನಿರ್ವಹಿಸುತ್ತಿದ್ದಾರೆ. ಅವರು ಬೋರ್‌ವೆಲ್‌ನಿಂದ ನೀರು ಪಡೆಯುತ್ತಿದ್ದರು ಮತ್ತು ಅಂತಿಮವಾಗಿ 2019 ರಲ್ಲಿ BWSSB ನಿಂದ ನೀರಿನ ಸಂಪರ್ಕ ಪಡೆದರು. ಅಂದಿನಿಂದ ಅವರು ಬಿಲ್‌ಗಳನ್ನು ಪಾವತಿಸಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ಸರಿಸುಮಾರು 1,30,000 ರೂ. ಆಗಿದೆ ಎಂದು ಹೇಳಿದರು.

ಸಚಿವರಿಗೆ ಸೇರಿದ ಮತ್ತೊಂದು ಆಸ್ತಿ ಮಹದೇವಪುರದ ಫೀನಿಕ್ಸ್ ಮಾರ್ಕೆಟ್‌ಸಿಟಿ ಬಳಿ ಇರುವ ಆಸ್ಪತ್ರೆ. 'ಸಚಿವರ ಅಳಿಯ ಅಲ್ಲಿ ಮೂಳೆಚಿಕಿತ್ಸೆಯ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. ಇದನ್ನು 2020 ರಲ್ಲಿ ನಿರ್ಮಿಸಲಾಯಿತು. ಅಲ್ಲಿಯೂ ನೀರಿನ ಬಿಲ್‌ಗಳು ಬಾಕಿ ಉಳಿದಿವೆ ಮತ್ತು ಇದೀಗ ಎಲ್ಲವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಕಾಶ್ ಹೇಳಿದರು.

ಸಚಿವರನ್ನು ಒಳಗೊಂಡಂತೆ ನೀರಿನ ಬಿಲ್ ಬಾಕಿ ಇರುವ ಬಗ್ಗೆ ಪ್ರಶ್ನಿಸಿದಾಗ ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ನುಣುಚಿಕೊಂಡರು. ಈ ವರದಿಗಾರರ ಪುನರಾವರ್ತಿತ ಪ್ರಶ್ನೆಗಳ ಬಳಿಕವೂ ಅಧ್ಯಕ್ಷ ಎನ್. ಜಯರಾಮ್ ಪ್ರತಿಕ್ರಿಯಿಸಲಿಲ್ಲ. ಮುಖ್ಯ ಎಂಜಿನಿಯರ್ ಎನ್.ಸುರೇಶ್ ಅವರಿಂದ ಹಿಡಿದು ಮಹದೇವಪುರದ ಸ್ಥಳೀಯ ಎಂಜಿನಿಯರ್‌ಗಳು ಸೇರಿದಂತೆ ಇತರ ಅಧಿಕಾರಿಗಳು ಸಹ ಮೌನವಾಗಿಯೇ ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com