ರಾಜ್ಯದಲ್ಲಿ ತಗ್ಗಿದ ಕೊರೋನಾತಂಕ: 3ನೇ ಸೆಟ್ ಜೀನೋಮಿಕ್ ಅನುಕ್ರಮ ಪರೀಕ್ಷೆಯಲ್ಲಿ ಪತ್ತೆಯಾಗದ ಹೊಸ ರೂಪಾಂತರಿ ವೈರಸ್!

ಸೋಂಕು ಇಳಿಕೆಯಾಗುತ್ತಿರುವ ನಡುವಲ್ಲೇ ರಾಜ್ಯದಲ್ಲಿ ದಿನ ಕಳೆಯುತ್ತಿದ್ದಂತೆಯೇ ಕೋವಿಡ್ ಕುರಿತಂತೆಯೂ ಆತಂಕ ಇಳಿಕೆಯಾಗುತ್ತಿದೆ. ಈ ನಡುವೆ ಇದಕ್ಕೆ ಉತ್ತಮ ಬೆಳವಣಿಗೆ ಎಂಬಂತೆ 3ನೇ ಸೆಟ್ ಜೀನೋಮಿಕ್ ಅನುಕ್ರಮ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಹೊಸ ರೂಪಾಂತರಿ ವೈರಸ್ ಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸೋಂಕು ಇಳಿಕೆಯಾಗುತ್ತಿರುವ ನಡುವಲ್ಲೇ ರಾಜ್ಯದಲ್ಲಿ ದಿನ ಕಳೆಯುತ್ತಿದ್ದಂತೆಯೇ ಕೋವಿಡ್ ಕುರಿತಂತೆಯೂ ಆತಂಕ ಇಳಿಕೆಯಾಗುತ್ತಿದೆ. ಈ ನಡುವೆ ಇದಕ್ಕೆ ಉತ್ತಮ ಬೆಳವಣಿಗೆ ಎಂಬಂತೆ 3ನೇ ಸೆಟ್ ಜೀನೋಮಿಕ್ ಅನುಕ್ರಮ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಹೊಸ ರೂಪಾಂತರಿ ವೈರಸ್ ಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (BMCRI) ಮೂಲಗಳು ಮಾಹಿತಿ ನೀಡಿದ್ದು, ಈ ವಾರ ಬಿಡುಗಡೆಯಾದ 3ನೇ ಸೆಟ್ ಜೀನೋಮಿಕ್ ಅನುಕ್ರಮ ಪರೀಕ್ಷೆಯಲ್ಲಿ ಯಾವುದೇ ವ್ಯಕ್ತಿಯಲ್ಲೂ ಹೊಸ ರೂಪಾಂತರಿ ವೈರಸ್ ಗಳು ಪತ್ತೆಯಾಗಿಲ್ಲ ಎಂದು ತಿಳಿಸಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (BMCRI) ಮೂಲಗಳು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಜೀನೋಮಿಕ್ ಪರೀಕ್ಷೆಯನ್ನು ನಡೆಸುತ್ತಿದೆ. 3ನೇ ಸೆಟ್ ಪರೀಕ್ಷೆಯಲ್ಲಿ ಎಲ್ಲಾ ಮಾದರಿಗಳಲ್ಲಿಯ ಹಳೆಯ ರೂಪಾಂತರಿಗಳಾದ XBB, BQ, BQ.1 ಮತ್ತು BQ1.5 ನಂತಹ ವೈರಸ್ ಗಳು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ.

ಮೂರನೇ ಸೆಟ್ ನಲ್ಲಿ ಒಟ್ಟು 56 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಸಕ್ರಿಯ ಪ್ರಕರಣಗ ಸಂಖ್ಯೆ ಕಡಿಮೆ ಇರುವುದರಿಂದ ಕೋವಿಡ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಎನ್‌ವಿಬಿಡಿಸಿಪಿ ಉಪ ನಿರ್ದೇಶಕ ಡಾ.ಶರೀಫ್ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲಾಗುತ್ತಿದ್ದು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಜೀನೋಮಿಕ್ ಪರೀಕ್ಷೆಯನ್ನು ನಡೆಸಲು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಕಳೆದ ವಾರ ಉಪಕರಣಗಳ ಕೊರತೆಯನ್ನು ಎದುರಿಸಿದ್ದು, ಮೈಕ್ರೋಬಯಾಲಜಿ ವಿಭಾಗದಲ್ಲಿ ಹೆಚ್ಚಿನ ಸಿಬ್ಬಂದಿಗಳಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.
 
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ಮೂಲಗಳು, ಉಪಕರಣಗಳ ಖರೀದಿ ಪ್ರಕ್ರಿಯೆ ಮುಗಿದಿದ್ದು, ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಮಸ್ಯೆಗೆ ಸರ್ಕಾರದ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದೆ.

ಇಲ್ಲಿಯವರೆಗೆ, ಬಿಎಂಸಿಆರ್ಐನಲ್ಲಿ 173 ಪಾಸಿಟಿವ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು. ಅವುಗಳಲ್ಲಿ ನಾಲ್ಕು ಮಾದರಿಗಳಲ್ಲಿ ಮಾತ್ರ ಹೊಸ ರೂಪಾಂತರಗಳಾದ XBB 1.5 ಮತ್ತು BF.7 ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕಳೆದ ಎರಡು ತಿಂಗಳಿನಿಂದ ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ (ಟಿಪಿಆರ್) ಶೇಕಡಾ 0.5 ಕ್ಕಿಂತ ಕಡಿಮೆ ಇರುವುದು ಕಂಡು ಬಂದಿದೆ. ಹೀಗಾಗಿ ರಾಜ್ಯದಲ್ಲಿ ಹೊಸ ರೂಪಾಂತರಗಳು ಕಂಡುಬಂದರೂ, ಸೋಂಕಿತರ ಪ್ರಮಾಣ ಕಡಿಮೆ ಇರುವುದರಿಂದ ಇದು ಆತಂಕಕ್ಕೆ ಕಾರಣವಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com