ಕರ್ನಾಟಕದಲ್ಲಿ ನೀರಿನ ಬಿಕ್ಕಟ್ಟು; ತಳಮಟ್ಟಕ್ಕೆ ಕುಸಿದ ನೀರಿನ ಮಟ್ಟ; ತಮಿಳುನಾಡಿನೊಂದಿಗೆ ಮತ್ತೆ ಸಂಘರ್ಷ ಸಾಧ್ಯತೆ

ರಾಜ್ಯದಲ್ಲಿ ಮಳೆ ಕೊರತೆಯಿಂದ ನೀರಿನ ಕೊರತೆ ಉಂಟಾಗಿದ್ದು, ರಾಜ್ಯದ ಡ್ಯಾಂಗಳಲ್ಲಿ ನೀರಿನ ಮಟ್ಟ ತಳಮಟ್ಟಕ್ಕೆ ಕುಸಿದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ನೀರಿನ ಕೊರತೆ ಉಂಟಾಗಿದ್ದು, ರಾಜ್ಯದ ಡ್ಯಾಂಗಳಲ್ಲಿ ನೀರಿನ ಮಟ್ಟ ತಳಮಟ್ಟಕ್ಕೆ ಕುಸಿದಿದೆ.

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿನ ನೀರಿನ ತಳಕ್ಕೆ ಕುಸಿದಿದ್ದು ಮತ್ತು ರಾಜ್ಯದಲ್ಲಿ ಮುಂಗಾರು ಕೆಲವು ವಾರಗಳ ಕಾಲ ವಿಳಂಬವಾಗಿರುವುದರಿಂದ ಮಳೆ ಕೊರತೆಯುಂಟಾಗಿ ನೀರಿನ ಅಭಾವ ಸೃಷ್ಟಿಯಾಗಿದೆ. ಪರಿಣಾಮ ಕಾವೇರಿ ನೀರು ಹಂಚಿಕೆ ವಿವಾದ ಮತ್ತೆ ಕೇಂದ್ರ ಸರ್ಕಾರದ ಹಂತಕ್ಕೆ ಬರಬಹುದು ಎಂದು ಹೇಳಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಯಥೇಚ್ಛವಾಗಿ ಮಳೆಯಾದ ಕಾವೇರಿ ಜಲಾನಯನ ಪ್ರದೇಶವು ಕಬಿನಿ, ಹಾರಂಗಿ, ಹೇಮಾವತಿ ಮತ್ತು ಕೆಆರ್‌ಎಸ್ ಜಲಾಶಯಗಳ ಒಟ್ಟು ಸಂಗ್ರಹಣೆಯೊಂದಿಗೆ 114 ಟಿಎಂಸಿ ಅಡಿ ಸಾಮರ್ಥ್ಯಕ್ಕೆ ವಿರುದ್ಧವಾಗಿ ಕೇವಲ 30.5 ಟಿಎಂಸಿ ಅಡಿಯಷ್ಟು ಘೋರ ಪರಿಸ್ಥಿತಿಗೆ ಕುಸಿದಿದೆ.

ಮುಂದಿನ ಒಂದೆರಡು ವಾರಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಮಾನ್ಯ ಮಳೆಯಾಗದಿದ್ದರೆ ಪರಿಸ್ಥಿತಿಯು ಆತಂಕಕಾರಿಯಾಗಬಹುದು ಮತ್ತು ಹೊಸ ಸರ್ಕಾರದ ಚಿಂತೆಯನ್ನು ಹೆಚ್ಚಿಸಬಹುದು. ಇದು ಬೆಂಗಳೂರು, ಮೈಸೂರು ಮತ್ತು ಇತರ ಪಟ್ಟಣಗಳಿಗೆ ಕುಡಿಯುವ ನೀರಿನ ಸರಬರಾಜಿನ ಮೇಲೆ ಅಡ್ಡ ಪರಿಣಾಮ ಬೀರಬಹುದು. ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಕೊಡಗಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.50% ಕ್ಕಿಂತ ಕಡಿಮೆ ಮಳೆಯಾಗಿದೆ ಮತ್ತು 2021 ಕ್ಕೆ ಹೋಲಿಸಿದರೆ 75% ಕೊರತೆ ಕರ್ನಾಟಕ ಮತ್ತು ತಮಿಳುನಾಡು ಎರಡಕ್ಕೂ ಒಳ್ಳೆಯದಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಜಲಾಶಯಗಳ ಮಟ್ಟ ವೇಗವಾಗಿ ಕುಸಿಯುತ್ತಿದ್ದು, ನದಿಗಳು ಬತ್ತಿ ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಮಹತ್ವಾಕಾಂಕ್ಷೆಯ ಕೆರೆ ತುಂಬಿಸುವ ಯೋಜನೆಯು ನೀರಿನ ಕೊರತೆಯಿಂದ ಪಂಪಿಂಗ್ ಸ್ಟೇಷನ್ ಸ್ಥಗಿತಗೊಳ್ಳುವುದರೊಂದಿಗೆ ಹಿನ್ನಡೆಯಾಗಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಂಜನಗೂಡಿನ ಆಲಂಬಾಡಿ, ಉತ್ತೇಣ ಗುಂಡ್ಲುಪೇಟೆ, ಸುತ್ತೂರು ಹಂತ-1ರಲ್ಲಿನ ಏತ ನೀರಾವರಿ ಪಂಪ್‌ ಹೌಸ್‌ಗಳಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.

ಗುಂಡ್ಲುಪೇಟೆ ಮತ್ತು ಚಾಮರಾಜನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ 700-800 ಅಡಿ ಇದ್ದ ಅಂತರ್ಜಲ ಮಟ್ಟವು ಕೆರೆಗಳ ತುಂಬುವ ಯೋಜನೆಯ ನಂತರ 200-250 ಅಡಿಗಳಿಗೆ ಏರಿದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ಕಬಿನಿ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗೆ ನೀರಾವರಿ ಇಲಾಖೆ ಇನ್ನೆರಡು ಬಾರಿಯಾದರೂ ನೀರು ಬಿಡಬೇಕು ಎಂದು ರೈತರು ಆಗ್ರಹಿಸುತ್ತಿದ್ದರೂ ಅಧಿಕಾರಿಗಳು ಅದನ್ನು ತಿರಸ್ಕರಿಸಿದ್ದಾರೆ.

ಅಣೆಕಟ್ಟುಗಳಲ್ಲಿ ಶೇ.17% ಮಾತ್ರ ನೀರಿನ ಸಂಗ್ರಹ
ಕರ್ನಾಟಕದ ಜಲಾಶಯಗಳು ಕೇವಲ ಶೇ.17 ರಷ್ಟು ಮಾತ್ರ ಭರ್ತಿಯಾಗಿದ್ದು, ಭೀಕರ ಪರಿಸ್ಥಿತಿಯು ರಾಜ್ಯದಾದ್ಯಂತ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಬಹುದು, ಅದನ್ನು ತಕ್ಷಣವೇ ಪರಿಹರಿಸಬೇಕು. ಕಳೆದ ವರ್ಷ 293.75 ಟಿಎಂಸಿ ಅಡಿಯಷ್ಟಿದ್ದ ಜುಲೈ 1ಕ್ಕೆ ಪ್ರಸ್ತುತ 148.22 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹವಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ. ಒಟ್ಟು ಸಂಗ್ರಹ ಸಾಮರ್ಥ್ಯ 865.20 ಟಿಎಂಸಿ ಅಡಿ ಇದ್ದು, ಜುಲೈ ತಿಂಗಳಿನಲ್ಲಿ ವಿಶೇಷವಾಗಿ ಜುಲೈ 3-7 ರವರೆಗೆ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮತ್ತು ಕೆಎಸ್‌ಡಿಎಂಸಿ ಅಧಿಕಾರಿಗಳು ಕುಡಿಯುವ ನೀರಿನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪರಿಹರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com