ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ: ಜಿ.ಪರಮೇಶ್ವರ್

ರಾಜ್ಯದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಗಳ ಭರ್ತಿ ಮಾಡಲು ಅಗತ್ಯ ಕ್ರಮಗಳ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಶನಿವಾರ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಗಳ ಭರ್ತಿ ಮಾಡಲು ಅಗತ್ಯ ಕ್ರಮಗಳ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಶನಿವಾರ ಹೇಳಿದರು.

ಮೈಸೂರು ಅರಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ‘ರಾಜ್ಯ ವಿಧಾನಸಭಾ ಚುನಾವಣೆ ವೇಳೆ ನಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪ್ರಸ್ತುತ ರಾಜ್ಯದ ವಿವಿಧ ಇಲಾಖೆಗಳಲ್ಲಿ 2.50 ಹುದ್ದೆಗಳು ಖಾಲಿ ಇವೆ. ಈಗಾಗಲೇ ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕರ ನೇಮಕಾತಿ ಮಾಡಲಾಗುವುದು. ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆಗಳು ಖಾಲಿ ಇದ್ದು, ಮೊದಲನೇ  ಹಂತದಲ್ಲಿ 3-4 ಸಾವಿರ ಪೊಲೀಸ್ ಪೇದೆಗಳ ನೇಮಕ ಮಾಡಲಾಗುವುದು. 400 ಸಬ್ ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುತ್ತೇವೆ. 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಹಗರಣ ಕೋರ್ಟ್‍ನಲ್ಲಿದೆ, ಈ ಬಗ್ಗೆ ನಮ್ಮ ಅಭಿಪ್ರಾಯವನ್ನು ತಿಳಿಸಲಿದ್ದೇವೆ. ಕೋರ್ಟ್ ನೀಡುವ ಆದೇಶದಂತೆ ನಾವು ಮುಂದುವರೆಯುತ್ತೇವೆ. ನಾವು ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲವೆಂದು ಹೇಳಿದರು.

ಸೈಬರ್ ಕ್ರೈಮ್ ಹಾಗೂ ಫೇಕ್ ನ್ಯೂಸ್ ತಡೆಗಟ್ಟಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಸೈಬರ್ ಕ್ರೈಮ್ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲೂ ಸೈಬರ್ ಕ್ರೈಮ್ ಸಂಖ್ಯೆ ಹೆಚ್ಚಳವಾಗಿದೆ. ಸೈಬರ್ ಕ್ರೈಮ್ ತಡೆಯಲು ಕಾಯಕಲ್ಪ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸೈಬರ್ ವಿಭಾಗವನ್ನು ಹೆಚ್ಚು ಕ್ರಿಯಾಶೀಲಗೊಳಿಸುತ್ತೇವೆ. ಜೊತೆಗೆ ಫೇಕ್ ನ್ಯೂಸ್ ಬೇರೆ ಬೇರೆ ರೀತಿಯಲ್ಲಿ ಹಾಕುತ್ತಿದ್ದಾರೆ. ರಾಜಕೀಯವಾಗಿ, ಸಮಾಜದ ಶಾಂತಿ ಕದಡಲು ಫೇಕ್ ನ್ಯೂಸ್ ಹಾಕುತ್ತಿದ್ಧಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.‌ ಫೇಕ್ ನ್ಯೂಸ್ ತಡೆಗೆ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮೈಸೂರು-ಬೆಂಗಳೂರು ರಸ್ತೆಯಲ್ಲಿನ ಮಂಡ್ಯ ಸಮೀಪ ನಡೆದಿರುವ ದರೋಡೆ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ಅಡಿಯಲ್ಲಿ ಟೋಲ್ ಸಂಗ್ರಹ ಬರುವುದಿಲ್ಲ. ಕೇಂದ್ರ ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ. ನಾವು ಸಹ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು ಟೋಲ್ ಸಂಗ್ರಹ ದರದಲ್ಲಿ ಕಡಿತ ಗೊಳಿಸಬೇಕೆಂದು ಬೇಡಿಕೆ ಇಟ್ಟಿದ್ದೇವೆ ಎಂದು ಹೇಳಿದರು.

ಬಿಪಿಎಲ್ ಕಾರ್ಡ್ದಾರರಿಗೆ ಜುಲೈ 10ರಿಂದ ಅಕ್ಕಿ ಬದಲು ಹಣ ಕೊಡುವ ಪ್ರಕ್ರಿಯೆ ಶುರುವಾಗುತ್ತದೆ. ಜುಲೈನಲ್ಲಿ ಅಕ್ಕಿ ಬದಲು ಹಣ ಕೊಡುತ್ತೇವೆ ಅಂತಾ ಹೇಳಿದ್ದೆವು. ಆದರೆ ಜುಲೈ 1ರಂದೇ ಹಣ ಕೊಡುತ್ತೇವೆ ಹೇಳಿಲ್ಲ. ಈ ತಿಂಗಳಿನಿಂದಲೇ ಗೃಹಜ್ಯೋತಿ ಯೋಜನೆ ಜಾರಿ ಮಾಡಿದ್ದೇವೆ. ಗೃಹಜ್ಯೋತಿ ಯೋಜನೆಯಲ್ಲಿ ಆಗಸ್ಟ್ ತಿಂಗಳ ಬಿಲ್ ಉಚಿತ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com