Bitcoin scam; ಬಿಟ್ ಕಾಯಿನ್ ಹಗರಣದ ತನಿಖೆಗೆ ಎಸ್‌ಐಟಿ ರಚನೆ: ಗೃಹ ಸಚಿವ ಜಿ ಪರಮೇಶ್ವರ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಿಟ್‌ಕಾಯಿನ್ ಹಗರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಗೃಹ ಸಚಿವ ಜಿ ಪರಮೇಶ್ವರ
ಗೃಹ ಸಚಿವ ಜಿ ಪರಮೇಶ್ವರ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಿಟ್‌ಕಾಯಿನ್ ಹಗರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಬಿಜೆಪಿ ಸರ್ಕಾರದ ಬಿಟ್‌ಕಾಯಿನ್ ಹಗರಣದ ಬಗ್ಗೆ ನಾವು ಮಾತನಾಡಿದ್ದೆವು. ಈಗ ಪ್ರಕರಣದ ಮರು ತನಿಖೆಗೆ ಆದೇಶಿಸಿದ್ದೇವೆ. ಸಿಐಡಿ ಅಡಿಯಲ್ಲಿ ಎಸ್‌ಐಟಿಯನ್ನು ರಚನೆ ಮಾಡಿದ್ದೇವೆ. ಈ ತನಿಖೆಯಲ್ಲಿ ಅಂತಾರಾಜ್ಯ, ವಿದೇಶಿಗರು ಬರುವುದರಿಂದ ತನಿಖೆ ನಿಗದಿತ ಸಮಯದಲ್ಲಿ ಮುಗಿಯಲಿದೆಯೋ, ತನಿಖೆಗೆ ಎಷ್ಟು ದಿನ ಬೇಕಾಗುವುದು ಎಂಬುದನ್ನು ಹೇಳಲು ಆಗಲ್ಲ ಎಂದು ಅವರು ಹೇಳಿದರು.

2021 ರಲ್ಲಿ ಹಿಂದಿನ ಬಿಜೆಪಿ ಆಡಳಿತದಲ್ಲಿ ಬಿಟ್‌ಕಾಯಿನ್ ಹಗರಣವು ಬೆಳಕಿಗೆ ಬಂದಿತ್ತು ಮತ್ತು ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ದೊಡ್ಡ ಹೆಸರುಗಳನ್ನು ಒಳಗೊಂಡಿರುವ ಹಗರಣವನ್ನು ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು. ಪ್ರಮುಖ ಶಂಕಿತ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ, ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ 11.5 ಕೋಟಿ ರೂ. ವರ್ಗಾಯಿಸಿದ್ದ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಪ್ಟೋಕರೆನ್ಸಿ ಕಳ್ಳತನ, ಡ್ರಗ್ ಪೆಡ್ಲಿಂಗ್ ಮತ್ತು ಸೈಬರ್ ವಂಚನೆಯ ಆರೋಪಗಳೂ ಕೇಳಿ ಬಂದಿದ್ದವು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಶ್ ಖಾರ್ಬಿಕರ್ ಅವರು ಎಸ್‌ಐಟಿಯ ನೇತೃತ್ವ ವಹಿಸಲಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ. ಇದು ಸೈಬರ್ ಅಪರಾಧಕ್ಕೆ ಸಂಬಂಧಿಸಿರುವುದರಿಂದ ತಾಂತ್ರಿಕ ತಜ್ಞರ ಸಹಾಯವನ್ನು ಸಹ ಪಡೆಯಬಹುದು. ನಾವು ಅಪರಾಧ ತನಿಖಾ ಇಲಾಖೆ ಅಡಿಯಲ್ಲಿ ಎಸ್‌ಐಟಿ ರಚಿಸಿದ್ದೇವೆ, ಈ ಸಂಬಂಧ ಆದೇಶ ಹೊರಡಿಸಲಾಗಿದೆ.ಎಸ್‌ಐಟಿ ನ್ಯಾಯ ಒದಗಿಸಲಿದೆ ಎಂದು ನಾವು ಭಾವಿಸುತ್ತೇವೆ. ಅವರು ವಿವಿಧ ಮೂಲಗಳ ಸಹಾಯವನ್ನು ಸಹ ತೆಗೆದುಕೊಳ್ಳಬಹುದು ಎಂದು ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಕೇಂದ್ರ ಏಜೆನ್ಸಿಗಳ ಯಾವುದೇ ಸಂಭಾವ್ಯ ಸಹಾಯದ ಬಗ್ಗೆ, ಅಗತ್ಯವಿರುವವರ ಸಹಾಯವನ್ನು ತೆಗೆದುಕೊಳ್ಳುವಂತೆ ಎಸ್‌ಐಟಿಗೆ ಸೂಚಿಸಿದ್ದೇನೆ.ಅದಕ್ಕಾಗಿ ಪ್ರತ್ಯೇಕ ಆದೇಶದ ಅಗತ್ಯವಿದ್ದರೆ, ನಾವು ಖಂಡಿತವಾಗಿಯೂ ಹಾಗೆ ಮಾಡುತ್ತೇವೆ. ಅದು ಅವಲಂಬಿಸಿರುತ್ತದೆ.ಎಸ್‌ಐಟಿ ತನಿಖೆಯನ್ನು ಪ್ರಾರಂಭಿಸಿದಾಗ, ಅವರ ಅವಶ್ಯಕತೆಗಳ ಬಗ್ಗೆ ನಮಗೆ ತಿಳಿಯುತ್ತದೆ, ”ಎಂದು ಪರಮೇಶ್ವರ್ ಹೇಳಿದ್ದಾರೆ.

ಬಿಟ್‌ಕಾಯಿನ್ ಹಗರಣದ ತನಿಖೆಗೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಗೃಹ ಸಚಿವರು ಹೇಳಿದ ಬೆನ್ನಲ್ಲೆ ಸಿಐಡಿಯಲ್ಲಿ ಎಡಿಜಿಪಿ ಮನೀಷ್ ಕರ್ಬಿಕರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.

ಗೃಹ ಇಲಾಖೆ ಆದೇಶ
ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಉಲ್ಲೇಖಿಸಿ, ಗೃಹ ಇಲಾಖೆಯು ಜೂನ್ 30 ರಂದು ತನ್ನ ಆದೇಶದಲ್ಲಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನೆಟ್‌ವರ್ಕ್‌ಗಳು ಭಾಗಿಯಾಗಿರುವ ಸಾಧ್ಯತೆಗಳಿರುವುದರಿಂದ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸುವ ಅಗತ್ಯವಿದೆ ಎಂದು ಹೇಳಿದೆ. ಪ್ರಕರಣ ಇದಲ್ಲದೆ, ಆರೋಪಿಗಳು ಸೈಬರ್ ವಿಷಯಗಳಲ್ಲಿ ಪರಿಣಿತರು ಮತ್ತು ಬಿಟ್‌ಕಾಯಿನ್‌ಗಳನ್ನು ವ್ಯಾಪಾರ ಮಾಡಿರುವುದರಿಂದ ಮತ್ತು ಡಾರ್ಕ್‌ನೆಟ್ ಮೂಲಕ ವಹಿವಾಟು ನಡೆಸಿರುವುದರಿಂದ ಈ ವಿಷಯವು ಹೆಚ್ಚು ಸಮಗ್ರ ಮತ್ತು ವಿವರವಾದ ತನಿಖೆಯ ಅಗತ್ಯವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಏತನ್ಮಧ್ಯೆ, ರಾಜ್ಯದಲ್ಲಿ ದಾಖಲಾದ ಇದೇ ರೀತಿಯ ಪ್ರಕರಣಗಳ ತನಿಖೆಯನ್ನು ಸಹ ಎಸ್‌ಐಟಿಗೆ ನಿರ್ದೇಶಿಸಲಾಗಿದೆ.

ಸಿಐಡಿಯ ಪೊಲೀಸ್ ಮಹಾನಿರ್ದೇಶಕರು ತನಿಖೆಯ ಮೇಲ್ವಿಚಾರಣೆ ನಡೆಸಲಿದ್ದು, ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಶ್ ಖಾರ್ಬಿಕರ್ ಅವರನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ಹೆಸರಿಸಲಾಗಿದೆ. ಸಿಐಡಿ ಡಿಐಜಿ ಡಾ ಕೆ ವಂಶಿಕೃಷ್ಣ, ಬೆಂಗಳೂರು ನಗರದ ಡಿಸಿಪಿ (ಆಡಳಿತ) ಅನೂಪ್ ಎ ಶೆಟ್ಟಿ ಮತ್ತು ಸಿಐಡಿ ಎಸ್ಪಿ ಶರತ್ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಬೆಂಗಳೂರು ನಗರದ ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ಪ್ರಕರಣದ ಕಡತಗಳನ್ನು ವರ್ಗಾಯಿಸುವಂತೆ ಎಸ್‌ಐಟಿ ಈಗಾಗಲೇ ಕೇಳಿಕೊಂಡಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com