ಕರ್ನಾಟಕ ರಾಜ್ಯ ಬಜೆಟ್ 2023: ಬಜೆಟ್‌ನಲ್ಲಿ ಗಮನಹರಿಸಬೇಕಾದ ಪ್ರಮುಖ ಕ್ಷೇತ್ರಗಳು

ಕರ್ನಾಟಕದ 2023-24ನೇ ಸಾಲಿನ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯನವರ ಬಜೆಟ್‌ ಮೇಲೆ ಅಪಾರ ನಿರೀಕ್ಷೆಗಳು ವ್ಯಕ್ತವಾಗಿವೆ.
ಕರ್ನಾಟಕ ರಾಜ್ಯ ಬಜೆಟ್ 2023
ಕರ್ನಾಟಕ ರಾಜ್ಯ ಬಜೆಟ್ 2023
Updated on

ಬೆಂಗಳೂರು: ಕರ್ನಾಟಕದ 2023-24ನೇ ಸಾಲಿನ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯನವರ ಬಜೆಟ್‌ ಮೇಲೆ ಅಪಾರ ನಿರೀಕ್ಷೆಗಳು ವ್ಯಕ್ತವಾಗಿವೆ.

ಜುಲೈ 7 ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 14ನೇ ಬಜೆಟ್ (Karnataka Budget 2023) ಅನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದು, ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ (Congress) ಘೋಷಿಸಿದ 'ಗ್ಯಾರಂಟಿ'ಗಳ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. ಇದೆಲ್ಲದರ ಹೊರತಾಗಿ ಬೆಂಗಳೂರು ಮಹಾನಗರದ ಅಭಿವೃದ್ಧಿ ಸಿದ್ದರಾಮಯ್ಯ ಆದ್ಯತೆ ನೀಡುತ್ತಾರೆಂದು ಎಂದು ನಿರೀಕ್ಷೆ ಮಾಡಲಾಗಿದೆ. ಈ ಜನಪರ ಯೋಜನೆಗಳ ಹೊರತಾಗಿಯೂ ಸಿದ್ದರಾಮಯ್ಯ ಸರ್ಕಾರವು ಅಸ್ತಿತ್ವದಲ್ಲಿರುವ ಯೋಜನೆಗಳಿಗೂ ಆದ್ಯತೆ ನೀಡಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದು, 2024 ರ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಕಲ್ಯಾಣ ಕ್ರಮಗಳನ್ನು ಘೋಷಿಸಬಹುದು ಎಂದೂ ಹೇಳಲಾಗುತ್ತಿದೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈ ವರ್ಷದ ಫೆಬ್ರವರಿಯಲ್ಲಿ 3.09 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಬಜೆಟ್ ಮಂಡಿಸಿದ್ದರು. ಕಾಂಗ್ರೆಸ್‌ನ ಯೋಜನೆಗಳಿಗೆ ಹಣವನ್ನು ನೀಡಲು ಸಿದ್ದರಾಮಯ್ಯ ಅವರು ಇನ್ನಿತರ ಯೋಜನೆಗಳಿಗೆ ಹಣದ ಹಂಚಿಕೆಯನ್ನು ಕಡಿಮೆ ಮಾಡಬಹುದು. ಅಸ್ತಿತ್ವದಲ್ಲಿರುವ ಅಥವಾ ಹೊಸ ಯೋಜನೆಗಳೊಂದಿಗೆ ಕೆಲವು ಯೋಜನೆಗಳನ್ನು ವಿಲೀನಗೊಳಿಸಬಹುದು ಎಂದು ಹೇಳಲಾಗುತ್ತಿದೆ. ಹಿಂದಿನ ಸರ್ಕಾರಗಳಿಗಿಂತ ಭಿನ್ನವಾಗಿ, ಸಿದ್ದರಾಮಯ್ಯ ಅವರು ಇಲಾಖೆಗಳಿಗೆ ಅನುಗುಣವಾಗಿ ಹಣ ಮಂಜೂರು ಮಾಡುವ ಸಾಧ್ಯತೆಯಿದೆ.

ಈ ಬಗ್ಗೆ ಮಾತನಾಡಿರುವ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಮತ್ತು ಎನ್‌ಎಂಐಟಿ ವಕ್ತಾರರಾದ ಡಾ.ಶಿಲ್ಪಾ ಅಜಯ್ ಅವರು, 'ಮೂಲಸೌಕರ್ಯ ಅಭಿವೃದ್ಧಿ ಈ ಬಜೆಟ್‌ನ ಪ್ರಮುಖ ನಿರೀಕ್ಷೆಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯ ಡಿಜಿಟಲೀಕರಣದ ಜೊತೆಗೆ ಅದಕ್ಕೆ ಸೂಕ್ತ ಕಾರ್ಯವಿಧಾನದ ಕುರಿತು ಸರ್ಕಾರ ಗಮನಹರಿಸಬೇಕು. ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನಾ ನಿಧಿಯನ್ನು ಹೆಚ್ಚಿಸುವ ವಿಸ್ತರಣಾ ಯೋಜನೆಗಳಿಗೆ ಆದ್ಯತೆ ನೀಡುವ ಅಗತ್ಯವಿದೆ. ರಾಜ್ಯದಲ್ಲಿನ ಕಲಿಕಾ ಸಮುದಾಯಕ್ಕೆ ವೃತ್ತಿಪರ ತರಬೇತಿ, ಮತ್ತು ಶಿಷ್ಯವೃತ್ತಿ / ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡುವ ಉನ್ನತ ತರಬೇತಿ ಮತ್ತು ಕೌಶಲ ಚಟುವಟಿಕೆ ಕ್ಷೇತ್ರಕ್ಕೆ ಗಣನೀಯ ಪ್ರಮಾಣದ ಬಜೆಟ್ ಹಂಚಿಕೆಯನ್ನು ನಾವು ನಿರೀಕ್ಷಿಸುತ್ತೇವೆ. ಉನ್ನತ ಶಿಕ್ಷಣ ವ್ಯವಸ್ಥೆ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಯ ನಡುವಿನ ಸಂಬಂಧವನ್ನು ಬಲಪಡಿಸಲು ಸರ್ಕಾರವು ನ್ಯಾಯೋಚಿತ ಅನುದಾನ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.

ಅಂತೆಯೇ ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಗುಣಮಟ್ಟದ ಶಿಕ್ಷಣ ಖಾತ್ರಿಪಡಿಸುವ ದೃಢವಾದ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ ಎಂದಿರುವ ಅವರು, ರಾಜ್ಯದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಅನುದಾನದೊಂದಿಗೆ ಸಂಶೋಧನಾ ವಿಭಾಗವನ್ನು ಬಲಪಡಿಸಬೇಕಾಗಿದೆ. ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಪದವೀಧರರ ಉದ್ಯೋಗದತ್ತ ಸರ್ಕಾರ ಗಮನಹರಿಸಬೇಕಾಗಿದೆ. ಡಿಜಿಟಲ್‌ಯುಗದ ಭವಿಷ್ಯಕ್ಕಾಗಿ ತಂತ್ರಜ್ಞಾನ ಪರಿಣತ ಶಿಕ್ಷಕರನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಇದು ಕಲಿಕೆಯ ಗುಣಮಟ್ಟ ಹೆಚ್ಚಿಸುವ ಹೊಸ-ಯುಗದ ಶಿಕ್ಷಣವನ್ನು ಹುಡುಕುವವರ ಏರಿಕೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಇದಲ್ಲದೆ ವಸತಿ, ಸಾರಿಗೆ, ನೈರ್ಮಲ್ಯ ಮತ್ತು ರಾಜ್ಯದ ಇತರ ಮೂಲಸೌಕರ್ಯಗಳನ್ನು ಒಳಗೊಂಡಂತೆ ನಗರ ವಲಯಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಗಮನಹರಿಸಬೇಕು. ಉದ್ಯಮಶೀಲತೆ ಮತ್ತು ಸ್ಟಾರ್ಟಪ್‌ ಬೆಳವಣಿಗೆಯನ್ನು ಉತ್ತೇಜಿಸುವ ನೀತಿಗಳು ಮತ್ತು ಕ್ರಮಗಳು ಮತ್ತು ರಾಜ್ಯದ ಉದ್ಯಮಿಗಳಿಗೆ ಉದ್ಯಮ ಪ್ರಾರಂಭದ ವೇಗವರ್ಧನೆ ಸೌಲಭ್ಯಗಳು, ಮಾರ್ಗದರ್ಶನ ಮತ್ತು ನೆಟ್‌ವರ್ಕಿಂಗ್ ಅವಕಾಶಗಳನ್ನು ಕೇಂದ್ರೀಕರಿಸುವ ಮೂಲಕ ನಾವೀನ್ಯತೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಈ ಬಜೆಟ್‌ನಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮದ ಮೇಲೆ ಗಮನವನ್ನು ಕೇಂದ್ರೀಕರಿಸುವ ನಿರೀಕ್ಷೆಯಿದೆ, ಜೊತೆಗೆ ಸ್ಟಾರ್ಟ್‌ಅಪ್‌ಗಳಿಗೆ ಸೂಕ್ತವಾದ ಮತ್ತು ದೃಢವಾದ ಅನುದಾನ ನಿರೀಕ್ಷಿಸಲಾಗಿದೆ.  ಹೆಚ್ಚಿದ ಸರ್ಕಾರಿ ನಿಧಿ ಮತ್ತು ವೆಂಚರ್‌ ಕ್ಯಾಪಿಟಲ್‌ ಬೆಂಬಲ ವ್ಯವಸ್ಥೆಯು ಸ್ಟಾರ್ಟಪ್‌ಗಳಿಗೆ ಹೆಚ್ಚು ಸ್ಥಿರತೆಯನ್ನು ಒದಗಿಸುತ್ತದೆ.

ರಾಜ್ಯದಲ್ಲಿ ಮಹಿಳಾ ಉದ್ಯಮಶೀಲತೆಯ ಸಬಲೀಕರಣದ ಕುರಿತು ಕೆಲವು ಮಹತ್ವದ ಘೋಷಣೆಗಳು ಬೇಕಿವೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬೆಂಬಲ ವ್ಯವಸ್ಥೆಯನ್ನು ಹೆಚ್ಚಿಸುವುದು ಈ ಬಜೆಟ್‌ನ ಪ್ರಮುಖ ನಿರೀಕ್ಷೆಗಳಲ್ಲಿ ಒಂದಾಗಿದೆ. ಈ ವಲಯಗಳಲ್ಲಿನ ಸ್ಟಾರ್ಟ್‌ಅಪ್‌ಗಳನ್ನು ಪರಿಗಣಿಸಬೇಕು. ಏಕೆಂದರೆ ಅವು ರಾಜ್ಯದಲ್ಲಿ ಆರೋಗ್ಯ ರಕ್ಷಣೆಯ ಗುಣಮಟ್ಟ ಮತ್ತು ಪ್ರವೇಶವನ್ನು ಸುಧಾರಿಸಲು ಸಹಾಯ ಮಾಡುತ್ತವೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಈ ಬಜೆಟ್ ಮಂಡಿಸಿದ ನಂತರ ರಾಜ್ಯದ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 13 ಬಜೆಟ್ ಮಂಡಿಸಿದ್ದರು. ಈ ಬಜೆಟ್ ಸಿದ್ದರಾಮಯ್ಯ ಅವರಿಗೆ ಸವಾಲಿನದ್ದಾಗಿದೆ. ಕಾರಣ, ಕಾಂಗ್ರೆಸ್‌ ಘೋಷಿಸಿದ ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಹಲವು ಜನಪರ ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸುವ ಅವಶ್ಯಕತೆ ಇದೆ. ಐದು ಯೋಜನೆಗಳಿಗೆ ಸುಮಾರು 59,000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಪ್ರಸ್ತುತ ಬಜೆಟ್‌ನ ವೆಚ್ಚ 3.39 ಲಕ್ಷ ಕೋಟಿ ರೂಪಾಯಿ ಎಂದು ಸಿಎಂ ಹೇಳಿದ್ದಾರೆ.

ಶಿಕ್ಷಣ ಹಕ್ಕು (ಆರ್‌ಟಿಇ) ಕಾಯಿದೆಯ ಪರಿಣಾಮಕಾರಿ ಅನುಷ್ಠಾನ ಇಂದಿನ ಅಗತ್ಯವಾಗಿದೆ. ಮತ್ತೊಂದು ಪ್ರಮುಖ ವಿಷಯವೆಂದರೆ ಸಾಂಕ್ರಾಮಿಕ ರೋಗದಿಂದಾಗಿ ಕಲಿಕೆಯ ನಷ್ಟವನ್ನು ಸರಿಯಾಗಿ ಪರಿಹರಿಸಲಾಗಿಲ್ಲ. ಎಲ್ಲಾ ಜಿಲ್ಲೆಗಳನ್ನು ಒಳಗೊಂಡ ಕೇಂದ್ರೀಯ ಯೋಜನೆಯನ್ನು ಮಾಡುವ ಬದಲು, ಪ್ರತಿ ಜಿಲ್ಲೆಗಳು ಕಲಿಕೆಯ ಮಟ್ಟವನ್ನು ನಿರ್ಣಯಿಸಬೇಕು ಮತ್ತು ಅದನ್ನು ಹೇಗೆ ಪರಿಣಾಮಕಾರಿಯಾಗಿ ಪರಿಹರಿಸಬೇಕು ಎಂಬುದರ ಕುರಿತು ಯೋಜನೆಯನ್ನು ಹಾಕಬೇಕು ಇದರಿಂದ ರಾಜ್ಯವು ಈ ನಿಟ್ಟಿನಲ್ಲಿ ಸರಿಯಾದ ಬಜೆಟ್ ಅನ್ನು ನಿಗದಿಪಡಿಸುತ್ತದೆ.
- ಡಾ ವಿ ಪಿ ನಿರಂಜನಾರಾಧ್ಯ, ಅಭಿವೃದ್ಧಿ ಶಿಕ್ಷಣ ತಜ್ಞ

ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಶಿಕ್ಷಣದ ಅಡಿಪಾಯದ ಹಂತವನ್ನು ಬಲಪಡಿಸಲು ಹಣವನ್ನು ವಿನಿಯೋಗಿಸಬೇಕು. ಅಡಿಪಾಯದ ಹಂತವನ್ನು ಪೂರೈಸುವ ಅಂಗನವಾಡಿಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಬೇಕು. ಒಟ್ಟಾರೆ ಟ್ರೆಂಡ್ ಉನ್ನತ ಶಿಕ್ಷಣಕ್ಕೆ ಹಣ ಮೀಸಲಿಡುವುದು, ಆದರೆ ಶಾಲಾ ಶಿಕ್ಷಣವು ಸಾಮಾನ್ಯವಾಗಿ ಬಜೆಟ್‌ನಲ್ಲಿ ಕಾಣುವುದಿಲ್ಲ. ಇದು ಬದಲಾಗಬೇಕು.
-ಡಾ ಗಣೇಶ ಭಟ್, ಶಿಕ್ಷಣ ತಜ್ಞ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com