ದಕ್ಷಿಣ ಕನ್ನಡದಲ್ಲಿ ಮಳೆಯ ಆರ್ಭಟ: ಹಲವು ಮನೆಗಳಿಗೆ ಹಾನಿ, ನಿರಾಶ್ರಿತ ಕೇಂದ್ರಗಳ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ, 4ನೇ ದಿನವೂ ಭಾರೀ ಮಳೆ ಮುಂದುವರೆಯಿತು. ರಾತ್ರಿ ವೇಳೆ ಗಾಳಿಯೊಂದಿಗೆ ಭಾರೀ ಮಳೆಯಾಗುತ್ತಿದ್ದು, ಹಲವು ಮನೆಗಳು ನಾಶಗೊಂಡಿವೆ. ನದಿ ತೀರದ ತಗ್ದು ಪ್ರದೇಶಗಳು ಜಲಾವೃತಗೊಂಡಿವೆ. ಮಳೆ ಹೀಗೆಯೇ ಮುಂದುವರೆದಿದ್ದೇ ಆದರೆ, ಪ್ರವಾಹ ಉಕ್ಕಿ ಅಪಾಯ ಉಂಟಾಗುವ ಭೀತಿ ಶುರುವಾಗಿದೆ.
ಜಲಾವೃತಗೊಂಡಿರುವ ಮೂಲ್ಕಿ ಬಪ್ಪನಾಡು ದೇವಸ್ಥಾನ.
ಜಲಾವೃತಗೊಂಡಿರುವ ಮೂಲ್ಕಿ ಬಪ್ಪನಾಡು ದೇವಸ್ಥಾನ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ, 4ನೇ ದಿನವೂ ಭಾರೀ ಮಳೆ ಮುಂದುವರೆಯಿತು. ರಾತ್ರಿ ವೇಳೆ ಗಾಳಿಯೊಂದಿಗೆ ಭಾರೀ ಮಳೆಯಾಗುತ್ತಿದ್ದು, ಹಲವು ಮನೆಗಳು ನಾಶಗೊಂಡಿವೆ. ನದಿ ತೀರದ ತಗ್ದು ಪ್ರದೇಶಗಳು ಜಲಾವೃತಗೊಂಡಿವೆ. ಮಳೆ ಹೀಗೆಯೇ ಮುಂದುವರೆದಿದ್ದೇ ಆದರೆ, ಪ್ರವಾಹ ಉಕ್ಕಿ ಅಪಾಯ ಉಂಟಾಗುವ ಭೀತಿ ಶುರುವಾಗಿದೆ.

ಮೂಲ್ಕಿ, ಕಿನ್ನಿಗೋಳಿ, ಕಟೀಲು, ಹಳೆಯಂಗಡಿ ಸೇರಿದಂತೆ ಮೂಲ್ಕಿ ತಾಲೂಕಿನ ಹೆಚ್ಚಿನ ಪ್ರದೇಶಗಳು ಜಲಾವೃತಗೊಂಡಿದ್ದು, ಶಾಂಭವಿ ಮತ್ತು ನಂದಿನಿ ನದಿಗಳ ತಟದಲ್ಲಿ ನೆರೆಯುಂಟಾಗಿದೆ. ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಮಳೆ ನೀರು ತುಂಬಿ, ದೇವಸ್ಥಾನ ಜಲಾವೃತಗೊಂಡಿದೆ.

ದೇವಲಾಯದ ಒಳಗೆ ಭಕ್ತರಿಗೆ ಪ್ರದರ್ಶಿಣ ಬರಲು ಅಸಾಧ್ಯವಾಗಿದೆ. ಸಂಜೆ ವೇಳೆ ಪಂಪ್ ಮೂಲಕ ನೀರನ್ನು ತೆರವು ಮಾಡುವ ಕೆಲಸ ಮಾಡಲಾಯಿತು.

ಕುಕ್ಕೆ ಸುಬ್ರಹ್ಮಣ್ಯದಲ್ಲೂ ನಿನ್ನೆ ಮುಂಜಾನೆಯಿಂದ ಮಳೆ ಬಿರುಸುಗೊಂಡಿತ್ತು. ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಎಡೆಬಿಡದೆ ಮಳೆ ಸುರಿಯಿತು.

ಘಟ್ಟ ಭಾಗಗಳಾದ ಬಿಸಿಲೆ, ಸೋಮವಾರಪೇಟೆ ಹಾಗೂ ಮಲ್ಲಹಳ್ಳಿ ಫಾಲ್ಸ್ ಮತ್ತು ಕುಮಾರ ಪರ್ವತ ಭಾಗದಲ್ಲಿ ಕೂಡ ಭಾರೀ ಮಳೆ ಸುರಿದ ಪರಿಣಾಮ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ನೀರುವ ಹರಿವು ಹೆಚ್ಚಳದಿಂದ ನದಿಯ ಕಿಂಡಿ ಅಣಕಟ್ಟು ಮುಳುಗುವ ಸಾಧ್ಯತೆ ಹೆಚ್ಚಾಗಿದೆ. ಸ್ನಾನಘಟ್ಟ ಕೂಡ ಭಾಗಶಃ ಮುಳುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ನಾನಘಟ್ಟದ ಬಳಿ ತೆರಳದಂತೆ ಭಕ್ತರಿಗೆ ಮನವಿ ಮಾಡಲಾಗಿದೆ. ಅಲ್ಲದೆ, ಹವಾಮಾನ ಇಲಾಕೆ ಕೂಡ ಶುಕ್ರವಾರ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಕುಮಾರಧಾನ ನದಿಯಲ್ಲಿ ನೀರಿನ ಮಟ್ಟ ಏರಿಳಿತವಾಗುತ್ತಿದೆ. ನಿರಂತರ ಮಳೆ ಸುರಿದರೆ ಕಿಂಡಿ ಅಣೆಕಟ್ಟು ಹಾಗೂ ಕುಮಾರಧಾನ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆಗಳಿವೆ. ಕುಮಾರಧಾನ ನದಿಯ ಉಪನದಿ ದರ್ಪಣ ತೀರ್ಥ ಕೂಡ ತುಂಬಿ ಹರಿಯುತ್ತಿದೆ.

ಈ ನಡುವೆ ಜಿಲ್ಲಾ ಆಡಳಿತ ಮಂಡಳಿ ಮಂಗಳೂರಿನ ಹೊಸಬೆಟ್ಟು ಶಾಲೆ, ಬಂಟ್ವಾಳ ಐಬಿ ಹಾಗೂ ಮನಪಾಡಿಯ ಸರಕಾರಿ ಶಾಲೆ ಹಾಗೂ ಮೂಲ್ಕಿಯ ಕಿನ್ನಿಗೋಳಿ ಸಿಎಂಸಿ ಸಭಾಭವನದಲ್ಲಿ ನಾಲ್ಕು ನಿರಾಶ್ರಿತ ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಈ ಕೇಂದ್ರಗಳಲ್ಲಿ 44 ಮಂದಿ ಆಶ್ರಯ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಕಳೆದ 24 ಗಂಟೆಗಳಲ್ಲಿ ಎರಡು ಮನೆಗಳಿಗೆ ಹಾನಿಯಾಗಿದ್ದು, ಏಳು ಮನೆಗಳಿಗೆ ತೀವ್ರ ಹಾನಿಯಾಗಿದೆ. ಕಳೆದ 24 ಗಂಟೆಗಳಲ್ಲಿ 201 ವಿದ್ಯುತ್ ಕಂಬಗಳು ಮತ್ತು 6 ಟ್ರಾನ್ಸ್‌ಫಾರ್ಮರ್‌ಗಳು ಧರೆಗುರುಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದು ಹಾಗೂ ರೆಡ್ ಅಲರ್ಟ್ ಘೋಷಣಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇಂದು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪದವಿ ಕಾಲೇಜುಗಳು ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದೆ.

ಈ ನಡುವೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಹೊನ್ನೇಡಿ ಎಂಬಲ್ಲಿ ಗುರುವಾರ ಸುರಿದ ಭಾರೀ ಮಳೆಗೆ ವ್ಯಕ್ತಿಯೊಬ್ಬರು ಹೊಳೆಗೆ ಕೊಚ್ಚಿ ಹೋಗಿದ್ದಾರೆಂದು ತಿಳಿದುಬಂದಿದೆ.

ಹೊಳೆಯಲ್ಲಿ ಕೊಚ್ಚಿಹೋಗಿರುವ ವ್ಯಕ್ತಿಯನ್ನು ನಾರಾಯಣ್ (45) ಎಂದು ಗುರ್ತಿಸಲಾಗಿದೆ. ಕೂಲಿ ಕಾರ್ಮಿಕರಾಗಿರುವ ಇವರು ಮನೆಗೆ ಮರಳುತ್ತಿದ್ದಾಗ, ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆಂದು ತಿಳಿದುಬಂದಿದೆ. ಇದರೊಂದಿಗೆ ಮಳೆ ಆರ್ಭಟಕ್ಕೆ ಜಿಲ್ಲೆಯಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com