ಅಮರನಾಥ ಯಾತ್ರೆ: ಸಂಕಷ್ಟಕ್ಕೆ ಸಿಲುಕಿದ್ದ 300 ಕನ್ನಡಿಗರು ಸುರಕ್ಷಿತ, ಶೀಘ್ರದಲ್ಲೇ ತವರಿಗೆ ವಾಪಸ್

ಅಮರನಾಥ ಯಾತ್ರೆಗೆ ತೆರಳಿ ಭಾರೀ ಮಳೆ, ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ 300 ಮಂದಿ ಕನ್ನಡಿಗರು ಸುರಕ್ಷಿತರಾಗಿದ್ದು, ಶೀಘ್ರದಲ್ಲೇ ತವರಿಗೆ ವಾಪಸ್ಸಾಗಲಿದ್ದಾರೆಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಮರನಾಥ ಯಾತ್ರೆಗೆ ತೆರಳಿ ಭಾರೀ ಮಳೆ, ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ 300 ಮಂದಿ ಕನ್ನಡಿಗರು ಸುರಕ್ಷಿತರಾಗಿದ್ದು, ಶೀಘ್ರದಲ್ಲೇ ತವರಿಗೆ ವಾಪಸ್ಸಾಗಲಿದ್ದಾರೆಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರದಲ್ಲಿ ಸುರಿದಿರುವ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತಗೊಂಡು, ರಸ್ತೆಗಳು ಹಾಳಾಗಿವೆ. ಹೀಗಾಗಿ ಯಾತ್ರೆಗೆ ತೆರಳುತ್ತಿದ್ದವರು, ವಾಪಸ್ ಬರುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಪೈಕಿ 300 ಮಂದಿ ಕನ್ನಡಿಗರೂ ಇದ್ದರೂ ಎಂದು ಹೇಳಲಾಗುತ್ತಿತ್ತು.

ಇದರಂತೆ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ, ಕ್ರಮ ಕೈಗೊಂಡಿದ್ದು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರನ್ನು ನೋಡೆಲ್ ಅಧಿಕಾರಿಯನ್ನಾಗಿ ನಿಯೋಜನೆಗೊಳಿಸಿದೆ.

ರಾಜ್ಯದ ಅಧಿಕಾರಿಗಳು, ಜಮ್ಮು-ಕಾಶ್ಮೀರದ ಪ್ರದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಪೊಲೀಸರು ಮತ್ತು ಸೇನೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಇದರಂತೆ ಇಂದು ಬೆಳಿಗ್ಗೆ ಹವಾಮಾನ ತಿಳಿಗೊಂಡಿದ್ದು, ಮಳೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಒಂದಷ್ಟು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಮಳೆ ಕಡಿಮೆಯಾದ ಬಳಿಕ ಹೆಲಿಕಾಫ್ಟರ್, ವಿಮಾನ ಸೇರಿದಂತೆ ಎಲ್ಲಾ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಂಡು ಕನ್ನಡಿಗರನ್ನು ಮರಳಿ ಕರೆತರುವ ಪ್ರಯತ್ನ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಮೂಲಗಳ ಪ್ರಕಾರ ಸುಮಾರು 300 ಜನ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರು ಎಂದು ತಿಳಿದುಬಂದಿದೆ. ಯಾತ್ರೆಗೆ ತೆರಳಿರುವ ಇನ್ನಷ್ಟು ಕನ್ನಡಿಗರ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವರು ಜಮ್ಮು-ಕಾಶ್ಮೀರದಿಂದ ದೂರವಿರುವುದರಿಂದ ಸುರಕ್ಷಿತವಾಗಿದ್ದಾರೆಂದು ಹೇಳಲಾಗುತ್ತಿದ್ದು. ಗದಗದಿಂದ 3 ಕುಟುಂಬಗಳ ಸುಮಾರು 23 ಜನ ಯಾತ್ರೆಗೆ ತೆರಳಿದ್ದು, ಇವರೆಲ್ಲೂ ಸುರಕ್ಷಿತರಾಗಿದ್ದಾರೆಂದು ವರದಿಗಳು ತಿಳಿಸಿವೆ.

ಈ ನಡುವೆ ನಿನ್ನೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಗದಗದ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಈ ವೇಳೆ ಯಾತ್ರೆಯಲ್ಲಿ ಸಿಲುಕಿರುವ ಕುಟುಂಬದ ಸದಸ್ಯರ ಜೊತೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿ, ಸರ್ಕಾರ ನಿಮ್ಮೊಂದಿಗಿದೆ, ಧೈರ್ಯವಾಗಿರಿ ಎಂದು ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮರನಾಥ ಯಾತ್ರೆಯ ಪಂಚತರಣಿ ಕ್ಯಾಂಪ್‍ನಲ್ಲಿ ಕನ್ನಡಿಗರಿಗೆ ಸುರಕ್ಷಿತ ನೆಲೆ ಕಲ್ಪಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸೇನೆಯ ಅಧಿಕಾರಿಗಳು ಹೊದಿಕೆ, ಊಟ-ವಸತಿ, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿದ್ದಾರೆಂದು ಹೇಳಿದರು.

ಮಳೆ ಕಡಿಮೆಯಾಗುತ್ತಿದ್ದಂತೆ ಯಾತ್ರಾರ್ಥಿಗಳನ್ನು ಅಲ್ಲಿಂದ ವಾಪಸ್ ಕರೆತರಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಜನರಲ್‍ರೊಟ್ಟಿಗೆ ಸಮಾಲೋಚನೆ ನಡೆಸಲಾಗಿದೆ. ಬಿಜೆಪಿ-ಕಾಂಗ್ರೆಸ್ ಎಂಬ ಭೇದವಿಲ್ಲದೆ ಯಾತ್ರೆಗೆ ತೆರಳಿದ ಜನರನ್ನು ವಾಪಸ್ ಕರೆತರುವ ಕೆಲಸ ಮಾಡಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com