ಕರ್ತವ್ಯದ ವೇಳೆ ಬಿಎಂಟಿಸಿ ನಿರ್ವಾಹಕ ಧರಿಸಿದ್ದ ಧರ್ಮದ ಟೋಪಿ ತೆಗೆಸಿದ ಮಹಿಳೆ: ವಿಡಿಯೋ ವೈರಲ್

ಬಿಎಂಟಿಸಿ ಬಸ್ಸಿನಲ್ಲಿ ಕರ್ತವ್ಯದ ವೇಳೆ ನಿರ್ವಾಹಕ ಧರಿಸಿದ್ದ ಧರ್ಮದ ಟೋಪಿಯನ್ನು ಮಹಿಳಾ ಪ್ರಯಾಣಿಕರೊಬ್ಬರು ತೆಗೆಸಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಟೋಪಿ ತೆಗೆದ ಬಸ್ ನಿರ್ವಾಹಕ
ಟೋಪಿ ತೆಗೆದ ಬಸ್ ನಿರ್ವಾಹಕ

ಬೆಂಗಳೂರು: ಬಿಎಂಟಿಸಿ ಬಸ್ಸಿನಲ್ಲಿ ಕರ್ತವ್ಯದ ವೇಳೆ ನಿರ್ವಾಹಕ ಧರಿಸಿದ್ದ ಧರ್ಮದ ಟೋಪಿಯನ್ನು ಮಹಿಳಾ ಪ್ರಯಾಣಿಕರೊಬ್ಬರು ತೆಗೆಸಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

1 ನಿಮಿಷ 37 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಹಿಳೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಕಂಡಕ್ಟರ್​ಗೆ ಹೇಳುತ್ತಿರುವುದು ಕಂಡು ಬರುತ್ತದೆ.

ಏಕರೂಪದ ನಿಯಮಗಳ ಬಗ್ಗೆ ನಿಮಗೆ ತಿಳಿದಿದೆಯೇ? ಧರ್ಮದ ಟೋಪಿ ಧರಿಸಲು ನಿಮಗೆ ಅನುಮತಿ ಇದೆಯೇ ಎಂದು ಮಹಿಳೆ ನಿರ್ವಾಹಕರಿಗೆ ಪ್ರಶ್ನಿಸಿದ್ದಾರೆ.

ಇದಕ್ಕೆ ಅನುಮತಿಸಲಾಗಿದೆ ಎಂದು ಭಾವಿಸುತ್ತೇನೆಂದು ನಿರ್ವಾಹಕ ನಗುತ್ತಲೇ ಉತ್ತರಿಸುತ್ತಾನೆ. ನಂತರ ಮಹಿಳೆ ನೀವು ನಿಮ್ಮ ಧರ್ಮವನ್ನು ಅನುಸರಿಸಬಹುದು. ಅದು ಮನೆ ಮತ್ತು ಮಸೀದಿಗಳಲ್ಲಿ. ಅಲ್ಲಿ ಯಾರೂ ವಿರೋಧಿಸುವುದಿಲ್ಲ. ಆದರೆ, ಸರ್ಕಾರಿ ನೌಕರನಾಗಿರುವ ಹಿನ್ನೆಲೆಯಲ್ಲಿ ಕರ್ತವ್ಯದ ವೇಳೆ ಧರ್ಮದ ಟೋಪಿ ಧರಿಸುವಂತಿಲ್ಲ ಎಂದು ಹೇಳಿದ್ದಾರೆ.

ಈ ವೇಳೆ ನಿರ್ವಾಹಕ ನಾನು ಹಲವು ವರ್ಷಗಳಿಂದ ಟೋಪಿ ಧರಿಸುತ್ತೇನೆ. ಈ ಹಿಂದೆ ಯಾರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದಿದ್ದಾರೆ. ಕಾನೂನಿನ ಪ್ರಕಾರ ಕರ್ತವ್ಯದ ವೇಳೆ ಧರ್ಮದ ಟೋಪಿ ಧರಿಸುವಂತಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ನಿರ್ವಾಹಕ ಹೇಳಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ನಿಯಮ ಎಲ್ಲರಿಗೂ ಅನ್ವಯಿಸುತ್ತದೆ. ಕಾನೂನಿನ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ಕೂಡಲೇ ಟೋಪಿ ತೆಗೆಯಿರಿ ಎಂದು ಮಹಿಳೆ ಹೇಳಿದ್ದಾರೆ. ನಂತರ ನಿರ್ವಾಹಕ ಟೋಪಿ ತೆಗೆದು ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಕುರಿತು ಪರ ಹಾಗೂ ವಿರೋಧದ ಚರ್ಚಗಳು ಆರಂಭವಾಗಿವೆ. ಕೆಲವರು ಮಹಿಳೆಯನ್ನು ಕೋಮುವಾದಿ ಎಂದು ಕರೆದಿದ್ದರೆ, ಮತ್ತೆ ಕೆಲವರು ನಿರ್ವಾಹಕನ ತಾಳ್ಮೆ ಹಾಗೂ ಶಾಂತವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕಾನೂನು ಅನುಸರಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ವಿಡಿಯೋ ಸಂಬಂಧ ಸಾರಿಗೆ ನಿಗಮ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಾರಿಗೆ ನಿಗಮದ ಸಮವಸ್ತ್ರ ನಿಯಮದ ಪ್ರಕಾರ, ಕರ್ತವ್ಯದ ಸಮಯದಲ್ಲಿ ನೌಕರರು ಧಾರ್ಮಿಕ ಟೋಪಿ ಅಥವಾ ಕೇಸರಿ ಶಾಲುಗಳನ್ನು ಧರಿಸಲು ಅನುಮತಿ ಇಲ್ಲ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಈ ನಡುವೆ ವಿಡಿಯೋವನ್ನು ಗಮನಿಸಿದ ಬೆಂಗಳೂರು ಪೊಲೀಸರು ಹೆಚ್ಚಿನ ವಿವರ ಹಂಚಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com