ಬೆಲೆ ಏರಿಕೆ ಮಧ್ಯೆ ಹೋಟೆಲ್‌ ತಿಂಡಿ ತಿನಿಸು ಬೆಲೆ ಮತ್ತಷ್ಟು ದುಬಾರಿ..!

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಗಳ ಮಾಲೀಕರು ಆಹಾರ ತಿನಿಸುಗಳ ಬೆಲೆಯಲ್ಲಿ ಶೇ.15-25ರಷ್ಟು ಹೆಚ್ಚಳ ಮಾಡಲು ಚಿಂತನೆ ನಡೆಸುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಗಳ ಮಾಲೀಕರು ಆಹಾರ ತಿನಿಸುಗಳ ಬೆಲೆಯಲ್ಲಿ ಶೇ.15-25ರಷ್ಟು ಹೆಚ್ಚಳ ಮಾಡಲು ಚಿಂತನೆ ನಡೆಸುತ್ತಿದ್ದಾರೆ.

ಬೇಳೆಕಾಳುಗಳು, ತರಕಾರಿಗಳು, ಸಾಂಬಾರು ಪದಾರ್ಥಗಳು ಮತ್ತು ಇತರ ಸರಕುಗಳ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿಯೂ ಏರಿಕೆ ಮಾಡಲು ಚಿಂತನೆ ನಡೆಸಲು ಮುಂದಾಗಿದ್ದಾರೆ.

ಬೇಳೆಕಾಳು, ತರಕಾರಿ ಬೆಲೆ ಏರಿಕೆ ಮಾತ್ರವಲ್ಲ, ಹಾಲಿನ ದರ 5 ರೂಗಳಷ್ಟು ಹೆಚ್ಚಳ ಮಾಡಲು ಸರ್ಕಾರ ಚಿಂತನೆ ನಡೆಸಿರುವುದು ಹಾಗೂ ವಿದ್ಯುತ್, ನೀರಿನ ದರಗಳ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರನ್ನು ತಮ್ಮ ದರ ಪಟ್ಟಿಯನ್ನು ಮರುಪರಿಶೀಲಿಸಲು ಮುಂದಾಗಿದ್ದಾರೆನ್ನಲಾಗಿದೆ.

ಆಹಾರ ಧಾನ್ಯಗಳು, ಪದಾರ್ಥಗಳು, ತರಕಾರಿಗಳ ಸೇರಿದಂತೆ ಇನ್ನಿತರೆ ಬೆಲೆಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಹಲವು ಹೋಟೆಲ್ ಮಾಲೀಕರು ಈಗಾಗಲೇ ಹಲವೆಡೆ ತಿಂಡಿ, ತಿನಿಸುಗಳ ಬೆಲೆಯಲ್ಲಿ ಶೇ.5-10ರಷ್ಟು ಏರಿಕೆ ಮಾಡಿದ್ದಾರೆಂದು ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಅವರು ಹೇಳಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ ಬೇಳೆ, ಜೀರಿಗೆ, ಮೆಣಸು ಮತ್ತು ಕೆಂಪು ಮೆಣಸಿನಕಾಯಿಯಂತಹ ಪ್ರಮುಖ ಪದಾರ್ಥಗಳ ಬೆಲೆಗಳು ಭಾರಿ ಏರಿಕೆ ಕಂಡಿವೆ. ಈ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡುವುದು ಹೋಟೆಲ್ ಮಾಲೀಕರಿಗೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ವಸಂತನಗರದ ದಿ ಫೈನ್ ರೆಸ್ಟೋರೆಂಟ್‌ನ ವ್ಯವಸ್ಥಾಪಕ ಅಲೆಕ್ಸಾಂಡರ್ ಎಂಬುವವರು ಮಾತನಾಡಿ, ಜೂನ್‌ನಲ್ಲಿ ವ್ಯಾಪಾರವು ನೀರಸವಾಗಿತ್ತು.ಮಳೆಯಿಂದಾಗಿ ಶೇ.50 ನಷ್ಟವಾಗಿದೆ. ಮಳೆಯಿಂದಾಗಿ ಜನರು ರೆಸ್ಟೋರೆಂಟ್‌ಗೆ ಬರಲು ಮುಂದಾಗುತ್ತಿಲ್ಲ. ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಆರ್ಡರ್ ಮಾಡುತ್ತಿದ್ದಾರೆ. ಇದರಿಂದ ನಮ್ಮ ಲಾಭ ಕಡಿಮೆಯಾಗಿದೆ. ಇದಲ್ಲದೆ, ತರಕಾರಿಗಳು ಮತ್ತು ದಿನಸಿ ಬೆಲೆಗಳು ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ಬಿರಿಯಾನಿಯ ಬೆಲೆಯನ್ನು ಶೇ.7-8 ರಷ್ಟು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಟೊಮೆಟೊ ಬೆಲೆ ಕಡಿಮೆಯಾಗುವವರೆಗೆ ಹೋಟೆಲ್ ತಿಂಡಿ ತಿನಿಸುಗಳ ಪಟ್ಟಿಯಿಂದ ಟೊಮೆಟೊ ರೈಸ್, ಚಾಟ್‌ಗಳು ಮತ್ತು ಸಲಾಡ್‌ಗಳು ಹೊರಗುಳಿಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಈ ನಡುವೆ 50 ರೂ.ಗೆ ಎರಡು ಇಡ್ಲಿ ಹಾಗೂ 80 ರೂ.ಗೆ ದೋಸೆ ನೀಡುತ್ತಿರುವ ಬೆಂಗಳೂರು ಥಿಂಡೀಸ್, ಅವುಗಳ ಬೆಲೆಯನ್ನು ಶೇ.15ರಷ್ಟು ಹೆಚ್ಚಿಸಲು ಮುಂದಾಗಿದೆ.

ಬೆಲೆ ಏರಿಕೆಯಾಗುತ್ತಿರುವ ಕಾರಣ, ನಾವೇನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೋಟೆಲ್‌ನ ಆಡಳಿತ ಮಂಡಳಿ ಅಸಮಾಧಾನ ವ್ಯಕ್ತಪಡಿಸಿವೆ.

ಬ್ಯಾಚುಲರ್ ಆಗಿರುವ ಆಕೃತಿ ಸೆಹ್ರಾ (24) ಎಂಬುವವರು ಮಾತನಾಡಿ, “ನಾನು ಬ್ಯಾಚುಲರ್ ಆಗಿರುವುದರಿಂದ ಹೊರಗಿನ ಆಹಾರವನ್ನು ಹೆಚ್ಚಾಗಿ ಅವಲಂಬಿಸುತ್ತೇನೆ. ಈ ರೀತಿಯ ಹೆಚ್ಚಳವು ನಮ್ಮ ಜೇಬನ್ನು ಮತ್ತಷ್ಟು ಸುಡಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com