ಲಂಚ ಪಡೆದು ಎಸ್ಕೇಪ್ ಆಗುತ್ತಿದ್ದ ಅಧಿಕಾರಿ: ಲೋಕಾಯುಕ್ತ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನ; ಚೇಸ್ ಮಾಡಿ ವಶಕ್ಕೆ!

ಮಹಾಂತೇಗೌಡ ಬಿ. ಕಡಬಾಳು ಎಂಬವರೇ ಬಂಧಿತ ಆಹಾರ ನಿರೀಕ್ಷಕ ಎಂದು ತಿಳಿದು ಬಂದಿದೆ. ಮಹಾಂತೇಗೌಡ, ಇತ್ತೀಚೆಗೆ ರಂಗಧಾಮಯ್ಯ ಎಂಬುವವರ ಬಳಿ ಉದ್ದಿಮೆ ಪರವಾನಗಿ ಪರಿಶೀಲನೆಗಾಗಿ 1ಲಕ್ಷ‌ ಲಂಚಕ್ಕೆ ಬೇಡಿಕೆ ಇಟ್ಟಿದ್ದರು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧಿಸಲು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಮತ್ತು ಅಧಿಕಾರಿಗಳ ಮೇಲೆ ವಾಹನ ಹತ್ತಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದಲ್ಲಿ ಬೆಂಗಳೂರು ಉತ್ತರ ತಾಲೂಕಿನ ಆಹಾರ ನಿರೀಕ್ಷಕನನ್ನು ಶುಕ್ರವಾರ ಬಂಧಿಸಲಾಗಿದೆ.

ಮಹಾಂತೇಗೌಡ ಬಿ. ಕಡಬಾಳು ಎಂಬವರೇ ಬಂಧಿತ ಆಹಾರ ನಿರೀಕ್ಷಕ ಎಂದು ತಿಳಿದುಬಂದಿದೆ. ಮಹಾಂತೇಗೌಡ, ಇತ್ತೀಚೆಗೆ ರಂಗಧಾಮಯ್ಯ ಎಂಬುವವರ ಬಳಿ ಉದ್ದಿಮೆ ಪರವಾನಗಿ ಪರಿಶೀಲನೆಗಾಗಿ 1 ಲಕ್ಷ‌ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 12,000 ಮುಂಗಡವಾಗಿ ಪಡೆದಿದ್ದರು. ಈ ಬಗ್ಗೆ ರಂಗಧಾಮಯ್ಯ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.

ಶುಕ್ರವಾರ ನಗರದ ಸ್ಥಳವೊಂದರಲ್ಲಿ ರಂಗಧಾಮಯ್ಯ ಅವರಿಂದ 43,000 ಲಂಚದ‌ ಹಣ ಪಡೆದುಕೊಂಡಾಗ ಲೋಕಾಯುಕ್ತ ಪೊಲೀಸರು ಬಂಧನಕ್ಕೆ‌ ಕಾರ್ಯಾಚರಣೆ ನಡೆಸಿದ್ದರು. ಮಹಾಂತೇಗೌಡ ಕಾರು ಏರಿಸಿ ಪರಾರಿಯಾಗಲು ಯತ್ನಿಸಿದ್ದರು.

15 ಕಿ.ಮೀ. ವರೆಗೂ ಆರೋಪಿಯನ್ನು ಬೆನ್ನಟ್ಟಿ ಹೋದ ಲೋಕಾಯುಕ್ತ ಪೊಲೀಸರು, ನೆಲಮಂಗಲ‌ ಸೊಂಡೆಕೊಪ್ಪ‌ ರಸ್ತೆಯಲ್ಲಿ ಆರೋಪಿಯ ಕಾರನ್ನು ಸುತ್ತುವರಿದರು. ಆಗ ಸಾಕ್ಷಿಗಳಾಗಿ ಬಂದಿದ್ದ ಸರ್ಕಾರಿ ನೌಕರರು ಮತ್ತು ಲೋಕಾಯುಕ್ತ ಪೊಲೀಸರ ಮೇಲೆ ವಾಹನ ಹತ್ತಿಸಿ ಪರಾರಿಯಾಗಲು ಮಹಾಂತೇಗೌಡ ಯತ್ನಿಸಿದರು. ನಂತರ ಆತನನ್ನು ಹಿಂಬಾಲಿಸಿ ಬಂಧಿಸಲಾಗಿದೆ.

ಮಹಾಂತೇಗೌಡ ಅವರನ್ನು ಲಂಚದ ಹಣದ ಸಮೇತ ಬಂಧಿಸಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ‌ ದಾಖಲಿಸಿರುವ ಪ್ರಕರಣದ ಜತೆಯಲ್ಲಿ ಸರ್ಕಾರಿ‌ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ವಾಹನ ಹತ್ತಿಸಲು ಯತ್ನಿಸಿದ ಆರೋಪದ ಮೇಲೆ‌‌ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ‌ ಎಂದು‌ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com