ಹಾಸನ: ಅರಸೀಕೆರೆ ತಾಲೂಕಿನ ಬಾಗಿವಾಳು ಗ್ರಾಮದ ರೈತ ವೇಣುಗೋಪಾಲ್ ಅಲಿಯಾಸ್ ಮುತ್ತು ಎಂಬುವರು ಗಾಯಗೊಂಡಿದ್ದ ಚಿರತೆ ಮರಿಯೊಂದಿಗೆ ಕಾದಾಡಿ ಅದನ್ನು ಹಿಡಿದು ಶುಕ್ರವಾರ ಸಂಜೆ ತನ್ನ ದ್ವಿಚಕ್ರವಾಹನದಲ್ಲಿ ಮರಿಯನ್ನು ಗ್ರಾಮಕ್ಕೆ ತಂದಿದ್ದಾರೆ.
ವೇಣುಗೋಪಾಲ್ ತಮ್ಮ ತೆಂಗಿನ ಹೊಲಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಚಿರತೆ ಮರಿಯಂದು ಪೊದೆಯಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲು ಕಷ್ಟಪಡುತ್ತಿರುವುದನ್ನು ನೋಡಿದ ವೇಣುಗೋಪಾಲ್, ತನ್ನ ಮೋಟಾರ್ ಸೈಕಲ್ ನಿಲ್ಲಿಸಿ ಪ್ರಾಣಿಯನ್ನು ರಕ್ಷಿಸಲು ಯತ್ನಿಸಿದರು. ಈ ವೇಳೆ ಬೆದರಿದ ಚಿರತೆ ಮರಿ ವೇಣುಗೋಪಾಲ್ ಮೇಲೆ ದಾಳಿ ಮಾಡಿ ಎರಡು ಕೈಗಳಿಗೆ ಗಾಯ ಮಾಡಿತು.
ನಂತರ ದಾರಿಹೋಕರ ಸಹಾಯದಿಂದ ಚಿರತೆ ಮರಿಯ ಎರಡೂ ಕಾಲುಗಳನ್ನು ಸೆಣಬಿನ ದಾರದಿಂದ ಕಟ್ಟಿ ಅದೇ ಮೋಟಾರ್ ಸೈಕಲ್‌ನಲ್ಲಿ ಗ್ರಾಮಕ್ಕೆ ಸಾಗಿಸಿ, ಮಾಹಿತಿ ಮೇರೆಗೆ ಗ್ರಾಮಕ್ಕೆ ಆಗಮಿಸಿದ್ದ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದರು. 8 ತಿಂಗಳ ಚಿರತೆಯನ್ನು ಚಿಕಿತ್ಸೆಗಾಗಿ ಗ್ರಾಮದ ಪಶು ಆಸ್ಪತ್ರೆಗೆ ಸ್ಥಳಾಂತರಿಸಿದ ಅರಣ್ಯಾಧಿಕಾರಿಗಳು, ಚಿರತೆ ಮರಿ ನಡೆದಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಅರಣ್ಯಾಧಿಕಾರಿಗಳು ವೇಣುಗೋಪಾಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ರೇಂಜ್ ಫಾರೆಸ್ಟ್ ಆಫೀಸರ್ ಹೇಮಂತ್ ಅವರ ಪ್ರಕಾರ, ರೈತನು ನರಳುತ್ತಿರುವ ಚಿರತೆಯನ್ನು ರಕ್ಷಿಸಿದ್ದು, ಇಲಾಖೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ನರಳುತ್ತಿರುವ ಚಿರತೆಯನ್ನು ಮೋಟಾರು ಸೈಕಲ್‌ನಲ್ಲಿ ಹೊತ್ತೊಯ್ದ ರೈತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಾಯಗೊಂಡಿದ್ದ ಪ್ರಾಣಿಯನ್ನು ಪಶು ಆಸ್ಪತ್ರೆಗೆ ಸ್ಥಳಾಂತರಿಸಿದ ವೇಣುಗೋಪಾಲ್ ಅವರನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ಸಣ್ಣಪುಟ್ಟ ಗಾಯಗಳಾಗಿರುವ ವೇಣುಗೋಪಾಲ್ ಅವರು ಅರಸೀಕೆರೆಯ ಜೆಸಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಮತ್ತೊಂದು ಘಟನೆಯಲ್ಲಿ ಶುಕ್ರವಾರ ಸಂಜೆ ಹಾಸನ ತಾಲೂಕಿನ ಹೊಸಹಳ್ಳಿ ಗ್ರಾಮದ ದನದ ಕೊಟ್ಟಿಗೆಯಿಂದ ಮೂರು ವರ್ಷದ ಗಂಡು ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಅರಣ್ಯಾಧಿಕಾರಿಗಳು ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
ತಂತಿಬೇಲಿಗೆ ಸಿಲುಕಿ ನರಳಿದ ಚಿರತೆ
ಮತ್ತೊಂದೆಡೆ ಆಹಾರ ಅರಸಿ ಬಂದಿದ್ದ ಚಿರತೆಯೊಂದು ತಂತಿ ಬೇಲಿಯಲ್ಲಿ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿರುವ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸಿಕೊಂಡು ಬಂದ ವೇಳೆ ತೋಟಕ್ಕೆ ಹಾಕಿದ ಬೇಲಿಗೆ ಚಿರತೆ ಸಿಲುಕಿಕೊಂಡು ಹೊರಬರಲಾಗದೆ ಒದ್ದಾಡುತ್ತಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡ ಚಿರತೆ ಮತ್ತೆ ಉದ್ರೇಕಕ್ಕೆ ಒಳಗಾಗಿದೆ. ನಂತರ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಶಿವಮೊಗ್ಗದಲ್ಲಿರುವ ಅರವಳಿಕೆ ತಜ್ಞರಿಗೆ ಕರೆ ಮಾಡಿದ್ದಾರೆ. ಸದ್ಯ ಶಿವಮೊಗ್ಗ ವೈದ್ಯರು ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
Advertisement