ಬೆಂಗಳೂರಿನಲ್ಲಿನ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಬೆಂಗಳೂರಿನಲ್ಲಿರುವ ಆಸ್ತಿಗಳ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಮತ್ತು ಯಾರೂ ಹಾಳುಮಾಡಲು ಸಾಧ್ಯವಾಗದ ಖಚಿತವಾದ ಗುರುತುಗಳನ್ನು ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಬೆಂಗಳೂರಿನಲ್ಲಿರುವ ಆಸ್ತಿಗಳ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಮತ್ತು ಯಾರೂ ಹಾಳುಮಾಡಲು ಸಾಧ್ಯವಾಗದ ಖಚಿತವಾದ ಗುರುತುಗಳನ್ನು ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಹೇಳಿದ್ದಾರೆ.

ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಅವರು, ನಗರದಲ್ಲಿ ತೆರಿಗೆ ವಂಚನೆಗೆ ಲಗಾಮು ಹಾಕಲಾಗುವುದು ಎಂದು ಹೇಳಿದರು.

ನಗರದಲ್ಲಿ ನಡೆದ ನಿವಾಸಿಗಳ ಕಲ್ಯಾಣ ಸಂಘಗಳ (ಆರ್‌ಡಬ್ಲ್ಯುಎ) ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಗರದಲ್ಲಿನ ಆಸ್ತಿಗಳನ್ನು ದಾಖಲಿಸಲಾಗುವುದು ಮತ್ತು ಅವುಗಳ ವಿವರಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ದಾಖಲೆಗಳಲ್ಲಿ ಡಿಜಿಟಲೀಕರಣಗೊಳಿಸಲಾಗುವುದು' ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಆಸ್ತಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಶೀಘ್ರವೇ ಜಾರಿಗೊಳಿಸಲಾಗುವುದು ಎಂದರು. 

ಎಸ್ಎಂ ಕೃಷ್ಣ ಅವರ ಅವಧಿಯಲ್ಲಿ ರೈತರ ಮನೆಬಾಗಿಲಿಗೆ ಪಹಣಿ ನೀಡುವ 'ಭೂಮಿ' ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆದೇ ರೀತಿ ಬೆಂಗಳೂರಿನ ನಾಗರಿಕರಿಗೂ ಸೌಲಭ್ಯ ಕಲ್ಪಿಸಲಾಗುವುದು. ಇದರಿಂದ ಯಾರ ಬಳಿ ಎಷ್ಟು ಆಸ್ತಿ ಇದೆ ಎಂಬ ಮಾಹಿತಿ ಹಾಗೂ ತೆರಿಗೆ ಪಾವತಿಯ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದರು.

ಕಾನೂನು ಪ್ರಕಾರ ತೆರಿಗೆ ಪಾವತಿಸುವವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ತೆರಿಗೆ ವಂಚನೆಯನ್ನು ತಪ್ಪಿಸಿ, ಆದಾಯ ಸಂಗ್ರಹಕ್ಕೆ ಆದ್ಯತೆ ನೀಡಲಾಗುವುದು. ಯೋಜನೆಗಳಿಗೆ ಅಗತ್ಯ ಸಂಪನ್ಮೂಲ ಕ್ರೋಢೀಕರಿಸಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಈವರೆಗೆ 30 ಸಾವಿರಕ್ಕೂ ಅಧಿಕ ಸಲಹೆಗಳು ಬಂದಿವೆ. ವಾರ್ಡ್‌ವಾರು ಸಭೆಗಳನ್ನು ನಡೆಸಲಾಗವುದು. ಆ ಮೂಲಕ ಸ್ಥಳೀಯ ನಾಗರಿಕರ ಅಭಿಪ್ರಾಯವನ್ನೂ ಪಡೆಯಲಾಗುವುದು. ಪ್ರೌಢಶಾಲೆ, ಕಾಲೇಜುಗಳನ್ನು ಸಂವಾದ, ಚರ್ಚೆ ಆಯೋಜಿಸಿ ವಿದ್ಯಾರ್ಥಿಗಳಿಂದಲೂ ಸಲಹೆ ಪಡೆಯಲಾಗುವುದು ಎಂದು ಅವರು ತಿಳಿಸಿದರು.

ಸರ್ಕಾರಕ್ಕೆ ನೀಡಿರುವ ದಾಖಲೆಗಳನ್ನು ಎಂದಿಗೂ ತಿದ್ದಬಾರದು. ಎಸ್‌ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಭೂಮಿ ಯೋಜನೆಗೆ ಚಾಲನೆ ನೀಡಿದಂತೆ, ನಗರ ಪ್ರದೇಶಗಳಲ್ಲಿನ ಭೂ ದಾಖಲೆಗಳನ್ನು ಸಹ ಡಿಜಿಟಲೀಕರಣಗೊಳಿಸಬೇಕಿದೆ ಎಂದು ಹೇಳಿದರು.

ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದ ಶಿವಕುಮಾರ್, ಆಸ್ತಿ ತೆರಿಗೆ ಸುಸ್ತಿದಾರರ ಬಗ್ಗೆ ಗಮನ ಹರಿಸಲಾಗುತ್ತದೆ. 'ನಾನು ಅತಿಯಾದ ತೆರಿಗೆಯನ್ನು ವಿಧಿಸುವ ಬಗ್ಗೆ ಯೋಚಿಸುತ್ತಿಲ್ಲ. ಆದರೆ, ತೆರಿಗೆ ಪಾವತಿಸದವರ ಬಗ್ಗೆ ಗಮನ ಹರಿಸುತ್ತಿದ್ದೇನೆ. ಅಂತವುಗಳನ್ನು ನಿಯಂತ್ರಿಸಲು ನಾವು ತಂತ್ರಜ್ಞಾನವನ್ನು ಬಳಸುತ್ತೇವೆ' ಎಂದು ಹೇಳಿದರು.

'ಕೆಲವರು ಆಸ್ತಿ ತೆರಿಗೆಯನ್ನು ಪಾವತಿಸುವುದಿಲ್ಲ. ನಾವು ಅಂತಹ ಪ್ರಕರಣಗಳ ಮೇಲೆ ಗಮನ ಹರಿಸುತ್ತೇವೆ. ಈಗಾಗಲೇ ಅಧಿಕಾರಿಗಳ ಜತೆ ಒಂದು ಸುತ್ತಿನ ಸಭೆ ನಡೆಸಿದ್ದೇನೆ. ಅಂತಹವರನ್ನು ಕಾನೂನಿನ ಚೌಕಟ್ಟಿನೊಳಗೆ ತರುತ್ತೇವೆ' ಎಂದು ಅವರು ಹೇಳಿದರು.

ಆರ್‌ಡಬ್ಲ್ಯುಎಗಳೊಂದಿಗಿನ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು, ನಗರದ ಸಮಸ್ಯೆಗಳಿಗೆ ಅನುಗುಣವಾಗಿ ಸಮಯಕ್ಕೆ ಸರಿಯಾಗಿ ಪರಿಹಾರ ರೂಪಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದಾಗಿ ಹೇಳಿದರು.

ಮಹಾನಗರ ಪಾಲಿಕೆ ಚುನಾವಣೆ ನಡೆದಿಲ್ಲ ಎಂದು ಬಹುತೇಕ ಆರ್‌ಡಬ್ಲ್ಯುಎಗಳು ಸೂಚಿಸಿದ್ದಾರೆ. ಪೌರಾಡಳಿತ ಸಂಸ್ಥೆಗಳಿಗೆ ಅಧಿಕಾರಗಳ ವಿಕೇಂದ್ರೀಕರಣವನ್ನು ಉಲ್ಲೇಖಿಸುವ ಭಾರತೀಯ ಸಂವಿಧಾನದ 74 ನೇ ತಿದ್ದುಪಡಿಯ ಅಡಿಯಲ್ಲಿ ಜನರು ಘನತೆ ಮತ್ತು ಅವರ ಹಕ್ಕುಗಳನ್ನು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಅವರು ನ್ಯಾಯಸಮ್ಮತವಾಗಿ ಪಾರದರ್ಶಕತೆಯನ್ನು ಬಯಸುತ್ತಿದ್ದಾರೆ ಎಂದು ಅವರು ಹೇಳಿದರು.

ಆರ್‌ಡಬ್ಲ್ಯುಎಗಳು ನೀಡಿರುವ ಸಲಹೆಗಳಲ್ಲಿ ಅಂತರ್ಜಲ ಮರುಪೂರಣ, ಕುಡಿಯುವ ನೀರು ಪೂರೈಕೆ ಸಮಸ್ಯೆಗಳನ್ನು ಪರಿಹರಿಸುವುದು, ವಿದ್ಯುತ್ ಏರಿಳಿತ ತಪ್ಪಿಸುವುದು ಮತ್ತು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವುದು ಸೇರಿದೆ ಎಂದು ಶಿವಕುಮಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com