ಕೇಂದ್ರದ ಕೃಷಿ ಕಾಯ್ದೆಗೆ ಪರ್ಯಾಯ... ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿಧಾನಸಭೆ ಅಂಗೀಕಾರ!

ಸೆಪ್ಟೆಂಬರ್ 27, 2020 ರಂದು ಜಾರಿಗೆ ತರಲಾದ ಕೇಂದ್ರದ ಮೂರು ಕೃಷಿ ಕಾನೂನುಗಳಿಗೆ ಅನುಗುಣವಾಗಿ ಬಿಜೆಪಿ ಸರ್ಕಾರದ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ತಂದಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ 2023 ಅನ್ನು ಕರ್ನಾಟಕ ವಿಧಾನಸಭೆ ಸೋಮವಾರ ಅಂಗೀಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸೆಪ್ಟೆಂಬರ್ 27, 2020 ರಂದು ಜಾರಿಗೆ ತರಲಾದ ಕೇಂದ್ರದ ಮೂರು ಕೃಷಿ ಕಾನೂನುಗಳಿಗೆ ಅನುಗುಣವಾಗಿ ಬಿಜೆಪಿ ಸರ್ಕಾರದ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ತಂದಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ 2023 ಅನ್ನು ಕರ್ನಾಟಕ ವಿಧಾನಸಭೆ ಸೋಮವಾರ ಅಂಗೀಕರಿಸಿದೆ.

ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧೇಯಕವನ್ನು ಮಂಡಿಸಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಾನೂನು ಇದಾಗಿತ್ತು. ಆದರೆ, ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ‌ಕಾನೂನನ್ನು ಕೇಂದ್ರ ಹಿಂಪಡೆದಿದೆ. ಹೀಗಿದ್ದರೂ, ರಾಜ್ಯದಲ್ಲಿ ಈ ಕಾನೂನು ಹಿಂಪಡೆದಿರಲಿಲ್ಲ. ಕೇಂದ್ರ ವಾಪಸ್ ಪಡೆದರೂ ರಾಜ್ಯ ವಾಪಸ್ ಪಡೆದಿಲ್ಲ.‌ ಇದರಿಂದ ರೈತರಿಗೆ ತೊಂದರೆ ಆಗುತ್ತಿತ್ತು. ಈ ಕಾರಣಕ್ಕಾಗಿ ಕಾನೂನಿಗೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.

ಕಾನೂನು ತಿದ್ದುಪಡಿ ಕುರಿತಾಗಿ, ಮಾಜಿ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ,‌ ಎಪಿಎಂಸಿ ಬಗ್ಗೆ ಅಧ್ಯಯನ ಮಾಡಿದರೆ ಕಾನೂನು‌ ವಾಪಸ್ ಪಡೆಯುತ್ತಿರಲಿಲ್ಲ. ಎಪಿಎಂಸಿಯನ್ನು ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಆರಂಭ ಮಾಡಿದ್ದು. ಎಪಿಎಂಸಿ ಒಳಗಡೆ ಬೆಳೆ ಮಾರಾಟ ಮಾಡಬೇಕು. ಹೊರಗಡೆ ಮಾರಾಟ ಮಾಡಲು ಅವಕಾಶ ಇಲ್ಲ ಎಂದರು.

ಆದರೆ ತಿದ್ದುಪಡಿಯಲ್ಲಿ ರೈತರ ಬೆಳೆಯನ್ನು ಯಾವಾಗ ಎಲ್ಲಿ ಯಾರಿಗೆ ಬೇಕಾದರೂ ಮಾರಾಟ ಮಾರಾಟ ಮಾಡಲು ಅವಕಾಶ ಇತ್ತು. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲ ತರುವ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಲಾಗಿತ್ತು.

ರೈತನಿಗೆ ತಾನು ಬೆಳೆದ ಬೆಳೆಯನ್ನು ಬೇರೆ ಕಡೆ ಮಾರಾಟ ಮಾಡಲು ಸ್ವಾತಂತ್ರ ಇಲ್ಲವೇ? ಈ ಹಿನ್ನಲೆಯಲ್ಲಿ ಈ ಕಾನೂನನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ ಎಂದರು.

ಬೆಳೆಯನ್ನು ಎಪಿಎಂಸಿ ಹೊರತಾಗಿ ಹೊರಗಡೆ ಮಾರಾಟ ಮಾಡಿದ್ದಲ್ಲಿ ಏಕೆ ದಂಡ ಹಾಕುತ್ತೀರಿ? ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಹಾಗೂ ಹೊಲದಲ್ಲೇ ಮಾರಾಟ ಮಾಡಲು ಅವಕಾಶ ಇರಬೇಕು ಎಂಬ ನಿಟ್ಟಿನಲ್ಲಿ ನಾನು ಕಾನೂನು ತಿದ್ದುಪಡಿ ಮಾಡಿದ್ದೆವು. ಆದರೆ ಇದೀಗ ಏಕೆ ತಿದ್ದುಪಡಿ ತರುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ಅಲ್ಲದೆ, ರೈತರಿಗೆ ಅನುಕೂಲ ಆಗಲ್ಲ, ಬದಲಾಗಿ ದಲ್ಲಾಳಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕಾನೂನು‌ ತಿದ್ದುಪಡಿ ಮಾಡಲಾಗಿದೆ ಎಂದರು. ಯಾರ ಜೊತೆಗೆ ಚರ್ಚೆ ಮಾಡದೆ ಈ ತಿದ್ದುಪಡಿ ಮಾಡಲಾಗಿದೆ ಎಂದರು.

ಕೊನೆಗೆ ವಿರೋಧ, ಧರಣಿಯ ನಡುವೆಯೂ 2023 ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ( ನಿಯಂತ್ರಣ ಮತ್ತು ಅಭಿವೃದ್ಧಿ) ( ತಿದ್ದುಪಡಿ) ವಿಧೇಯಕ ಅಂಗೀಕಾರಗೊಂಡಿತು.

ತಿದ್ದುಪಡಿ ವಿಧೇಯಕ ವಿಧಾನ ಪರಿಷತ್‌ನಲ್ಲೂ ಅಂಗೀಕಾರವಾದರೆ ಇನ್ಮುಂದೆ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಇದ್ದ ಅವಕಾಶ ರದ್ದಾಗಲಿದೆ. ರಾಜ್ಯದ ಎಪಿಎಂಸಿಗಳ ಪ್ರಾಂಗಣಗಳಲ್ಲಿ ಮಾತ್ರ ರೈತರು ಅಧಿಸೂಚಿತ ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೈಗೊಳ್ಳಲು ಮೂಲ ಅಧಿನಿಯಮದಲ್ಲಿ ಇದ್ದ ನಿರ್ಬಂಧಗಳು ಮರು ಜಾರಿಯಾಗಲಿವೆ. ಜೊತೆಗೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ 5 ಸಾವಿರ ರೂಪಾಯಿ ಗರಿಷ್ಟ 30 ಸಾವಿರ ರೂಪಾಯಿವರೆಗೆ ದಂಡ ವಿಧಿಸಲೂ ಕಾನೂನಲ್ಲಿ ಅವಕಾಶವಾಗಲಿದೆ.

ವಿಧೇಯಕದ ತಿದ್ದುಪಡಿ ಅಂಶಗಳ ಪ್ರಕಾರ, ಸರ್ಕಾರ ಗೊತ್ತುಪಡಿಸಿದ ಮಾರುಕಟ್ಟೆ ಪ್ರಾಂಗಣ, ಉಪ ಪ್ರಾಂಗಣ, ಉಪ ಮಾರುಕಟ್ಟೆ ಪ್ರಾಂಗಣ, ಖಾಸಗಿ ಮಾರುಕಟ್ಟೆ ಪ್ರಾಂಗಣ ಅಥವಾ ಸಂದರ್ಭಾನುಸಾರವಾಗಿ ರೈತ ಗ್ರಾಹಕ ಮಾರುಕಟ್ಟೆ ಪ್ರಾಂಗಣವನ್ನು ಹೊರತುಪಡಿಸಿ ಇನ್ಯಾವುದೇ ಸ್ಥಳವನ್ನು ಕೃಷಿ ಉತ್ಪನ್ನದ ಖರೀದಿ ಮತ್ತು ಮಾರಾಟ ಮಾಡುವಂತಿಲ್ಲ. ಜಿಲ್ಲಾ, ತಾಲ್ಲೂಕು ಎಪಿಎಂಸಿಗಳು, ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಮಾಡಿರುವ ಮಾರುಕಟ್ಟೆ ಮತ್ತು ರಾಜ್ಯ ಸರ್ಕಾರ ಅನುಮತಿ ನೀಡಿದ ಯಾವುದೇ ಇತರೆ ಸಹಕಾರ ಸಂಘದ ಮೂಲಕ ಮಾಡಿರುವ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಮಾಡಬಹುದು.

ಎಪಿಎಂಸಿ ತಿದ್ದುಪಡಿ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಿ ಯಾವುದೇ ಮಾರುಕಟ್ಟೆ ಪ್ರದೇಶದಲ್ಲಿ ಕೃಷಿ ಉತ್ಪನ್ನ ಖರೀದಿ ಮತ್ತು ಮಾರಾಟಕ್ಕೆ ಬಳಿಸಿದರೆ ಅಥವಾ ಅಧಿಕೃತ ಪರವಾನಗಿ ಇಲ್ಲದೆ ವ್ಯಾಪಾರಿ, ದಳ್ಳಾಳಿ, ಬ್ರೋಕರ್, ಸಂಸ್ಕರಣಕಾರ, ದಾಸ್ತಾನುದಾರನಾಗಿರುವುದು ಸಾಬೀತಾದರೆ ಅವರಿಗೆ ಮೂರು ತಿಂಗಳ ವರೆಗೆ ವಿಸ್ತರಿಸಬಹುದಾದ ಜೈಲು ಮತ್ತು ಐದು ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು. 2ನೇ ಬಾರಿ ನಿಯಮ ಉಲ್ಲಂಘನೆಗೆ 20 ಸಾವಿರ ರೂಪಾಯಿ ಮತ್ತು 3ನೇ ಬಾರಿ ಉಲ್ಲಂಘನೆಗೆ 30 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.

ಜವಳಿ, ಕಬ್ಬು, ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ಅವರು ಈ ತಿದ್ದುಪಡಿ ವಿಧೇಯಕವನ್ನು ಸದನದ ಪರ್ಯಾಲೋಚನೆಗೆ ಮಂಡಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಈ ಕಾನೂನನ್ನು ರಾಜ್ಯದಲ್ಲೂ ಜಾರಿಗೊಳಿಸಲಾಗಿತ್ತು. ಆದರೆ, ರೈತರ ವಿರೋಧ, ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಈ ಕಾನೂನನ್ನು ವಾಪಸ್ ಪಡೆದರೂ ರಾಜ್ಯದಲ್ಲಿ ಮುಂದುವರೆಸಲಾಗಿತ್ತು. ಇದರಿಂದ ರೈತರಿಗೆ ತೊಂದರೆ ಆಗುತ್ತಿತ್ತು. ಈ ಕಾರಣಕ್ಕಾಗಿ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಇದರಿಂದ ಕೃಷಿ ಮಾರುಕಟ್ಟೆಗಳು ಪುನಶ್ಚೇತನಗೊಳ್ಳಲಿದೆ. ರೈತರಿಗೆ ತಾವು ಬೆಳೆದ ಉತ್ಪನ್ನಗಳ ಮಾರಾಟಕ್ಕೆ ರಕ್ಷಣೆ ದೊರೆಯಲಿದೆ.

ಕಟ್ಟಡಗಳಿಗೆ ಅಗ್ನಿಶಾಮಕ ಇಲಾಖೆ ಎನ್‌ಒಸಿ: ಕಾಯ್ದೆಗೆ ಮಹತ್ವದ ತಿದ್ದುಪಡಿ
ಬೃಹತ್ ಕಟ್ಟಡಗಳಿಗೆ ಅಗ್ನಿ ಶಾಮಕ ದಳದ ನಿರಪೇಕ್ಷಣಾ ಪತ್ರ (NOC) ಪಡೆಯಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕ ಅಗ್ನಿಶಾಮಕ ದಳ ಮಸೂದೆ 2023ಕ್ಕೆ ಅನುಮೋದನೆ ನೀಡಲಾಗಿದೆ. ಈ ಮೂಲಕ ಕಟ್ಟಡಗಳಿಗೆ ಅಗ್ನಿ ಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಪೇಕ್ಷಣಾ ಪತ್ರವನ್ನು ಪಡೆಯಲು ಇದ್ದ ನಿಯಮವನ್ನು ಸಡಿಲಿಕೆ ಮಾಡಲಾಗಿದೆ.

ಕಟ್ಟಡಗಳ ಎತ್ತರವನ್ನು 15 ಮೀಟರ್‌ನಿಂದ 21 ಮೀಟರ್‌ಗೆ ಎತ್ತರಿಸುವ ಉದ್ದೇಶದೊಂದಿಗೆ ತಿದ್ದುಪಡಿ ಮಾಡಿ ಈ ಮಸೂದೆಯನ್ನು ಮಂಡಿಸಲಾಗಿದೆ. ಈ ತಿದ್ದುಪಡಿಗೆ ಹಿಂದಿನ ಸರ್ಕಾರ ಮಾರ್ಚ್‌ 24ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಹೊಸ ಕಾಯ್ದೆ ಜಾರಿಯಾದ ನಂತರ 21 ಮೀಟರ್‌ಗಿಂತ ಹೆಚ್ಚು ಎತ್ತರ ಇರುವ ಕಟ್ಟಡಗಳು ಅಗ್ನಿಶಾಮಕ ದಳದಿಂದ ನಿರಪೇಕ್ಷಣಾ ಪತ್ರ ಪಡೆಯುವುದು ಕಡ್ಡಾಯವಾಗಿದೆ.

ರಸ್ತೆ ಸುರಕ್ಷತಾ ಪ್ರಾಧಿಕಾರ ವ್ಯಾಪ್ತಿಗೆ ಬಿಬಿಎಂಪಿ: ವಿಧೇಯಕ ಅಂಗೀಕಾರ
ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಗೆ ಒತ್ತು ನೀಡಲು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವ್ಯಾಪ್ತಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ತರುವ 2023ರ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಯವರು ವಿಧೇಯಕ ಮಂಡಿಸಿದರು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ನಿಯಂತ್ರಿಸಿ, ಅಪಘಾತಗಳಿಂದ ಉಂಟಾಗುವ ಸಾಮಾಜಿಕ ಹಾಗೂ ಆರ್ಥಿಕ ಅಭದ್ರತೆ ನಿವಾರಿಸುವ ದೃಷ್ಟಿಯಿಂದ ರಸ್ತೆ ಸುರಕ್ಷತಾ ಪ್ರಾಧಿಕಾರದ ಅಡಿಗೆ ಪಾಲಿಕೆ ತರುವುದು ವಿಧೇಯಕದ ಉದ್ದೇಶವಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com