ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ; ಆಫ್ಘಾನಿಸ್ತಾನದಲ್ಲಿ ಮಾಸ್ಟರ್ ಮೈಂಡ್ ಜುನೈದ್, ಎಲ್ಇಟಿ ಜೊತೆ ನಂಟು!

ಸಿಸಿಬಿ ಪೊಲೀಸರಿಂದ ಐವರು ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಮಹತ್ವದ ಮಾಹಿತಿಗಳು ಹೊರಬೀಳುತ್ತಲೇ ಇದೆ. ಸದ್ಯ ಪ್ರಕರಣ ಸಂಬಂಧ ಪರಾರಿಯಾಗಿರುವ ಜುನೈದ್,  ಮೋಸ್ಟ್​ ವಾಂಟಡ್​ ಕ್ರಿಮಿನಲ್ ಆಗಿದ್ದು, ಈತನ​ ಹಿನ್ನೆಲೆ ಇದೀಗ ಬೆಳಕಿಗೆ ಬಂದಿದೆ.
ಮೊಹಮ್ಮದ್ ಜುನೈದ್
ಮೊಹಮ್ಮದ್ ಜುನೈದ್

ಬೆಂಗಳೂರು: ಸಿಸಿಬಿ ಪೊಲೀಸರಿಂದ ಐವರು ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಮಹತ್ವದ ಮಾಹಿತಿಗಳು ಹೊರಬೀಳುತ್ತಲೇ ಇದೆ. ಸದ್ಯ ಪ್ರಕರಣ ಸಂಬಂಧ ಪರಾರಿಯಾಗಿರುವ ಜುನೈದ್,  ಮೋಸ್ಟ್​ ವಾಂಟಡ್​ ಕ್ರಿಮಿನಲ್ ಆಗಿದ್ದು, ಈತನ​ ಹಿನ್ನೆಲೆ ಇದೀಗ ಬೆಳಕಿಗೆ ಬಂದಿದೆ.

ಬೆಂಗಳೂರಿನ ಹೆಬ್ಬಾಳದ ಸುಲ್ತಾನಪಾಳ್ಯದ ಕುರಿ ವ್ಯಾಪಾರಿಯಾಗಿದ್ದ ಮೊಹಮ್ಮದ್ ಜುನೈದ್, ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರೊಂದಿಗೆ ನೇರ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ.

ಅವಮಾನದ ದ್ವೇಷದಿಂದ ವ್ಯಕ್ತಿಯೊಬ್ಬನ ಹತ್ಯೆ ಮಾಡಿ ಜೈಲು ಹೋಗಿದ್ದ ಜುನೈದ್​, ಜೈಲಿನಿಂದ ಹೊರ ಬಂದಿದ್ದು ಜಿಹಾದಿಯಾಗಿ.

ಈತ ಹೆಬ್ಬಾಳದ ಸುಲ್ತಾನ್ ಪಾಳ್ಯದಲ್ಲಿ ವಾಸವಿದ್ದ. ಕುರಿ ವ್ಯಾಪಾರ ಮಾಡ್ಕೊಂಡು ಜೀವನ ನಡೆಸುತ್ತಿದ್ದ. 2017ರಲ್ಲಿ ಜಿ. ಸಿ ನಗರದ ನೂರ್ ಅಹ್ಮದ್ ಎಂಬಾತನ ಜೊತೆ ಜಗಳ ಆಗಿತ್ತು. ಹಣಕಾಸಿನ ವಿಚಾರಕ್ಕೆ ಮನೆಗೆ ಬಂದು ಪತ್ನಿ ಮುಂದೆಯೇ ಜುನೈದ್​ ಅಂಗಿ ಬಿಚ್ಚಿ, ಅವಮಾನಿಸಿ, ಹಲ್ಲೆ ಮಾಡಿ ಹೋಗಿದ್ದ.

ಅವಮಾನದ ಪ್ರತೀಕಾರವಾಗಿ ಅದೇ ವರ್ಷದ ಸೆಪ್ಟೆಂಬರ್​ನಲ್ಲಿ ಅಹ್ಮದ್ ​ನನ್ನು ಜುನೈದ್​ ಅಪಹರಿಸಿ ಕೊಲೆ ಮಾಡಿದ್ದ. ಪ್ರಕರಣ ಸಂಬಂಧ ಪೊಲೀಸರು 21 ಮಂದಿಯನ್ನು ಬಂಧನಕ್ಕೊಳಪಡಿಸಿದ್ದರು. ಪ್ರಕರಣದಲ್ಲಿ ಜೈಲಿಗೆ ಹೋದ ಜುನೈದ್ ನೇರ ಸಂಪರ್ಕ ಮಾಡಿದ್ದು, ಶಂಕಿತ ಉಗ್ರ ನಾಸೀರ್ ಎಂಬಾತನನ್ನು.

ಜೈಲಿನಿಂದ ಹೊರ ಬಂದು ಮತ್ತೆ 2020ರಲ್ಲಿ ರಕ್ತಚಂದನ ಸಾಗಿಸುವ ಪ್ರಕರಣದಲ್ಲಿ ಒಳ ಹೋಗಿದ್ದ. ನಂತರ ಜಾಮೀನಿನಿಂದ ಹೊರ ಬಂದವ ಸಂಪೂರ್ಣ ಟೀಂ ಕಟ್ಟಿದ್ದ. ಬಳಿಕ ಅವರ ತಂಡ ನೇರ ದುಬೈಗೆ ಹಾರಿತ್ತು.

2021ರಲ್ಲಿ ಭಾರತದ ಗಡಿ ದಾಟಿದ್ದ ಈತ, ಆಫ್ಘಾನ್ ಗಡಿ ಸಮೀಪ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ. ಅಲ್ಲಿಂದಲೇ ಬೆಂಗಳೂರಿನಲ್ಲಿರುವ ತನ್ನ ಸಹಚರರಿಗೆ ಸೂಚನೆಗಳನ್ನು ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಅಧಿಕಾರಿಗಳು ಜುನೈದ್ ಬಗ್ಗೆ ಇಂಟರ್ ಪೋಲ್ ಗೆ ಮಾಹಿತಿ ನೀಡಿದ್ದಾರೆ. ಉಗ್ರ ಚಟುವಟಿಕೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಐವರು, ಜುನೈದ್ ಜೊತೆಗೆ ಸಂಪರ್ಕದಲ್ಲಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಈ ನಡುವೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ರಾಜ್ಯ ಪೊಲೀಸರು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲು ಚಿಂತನೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ಬೆಂಗಳೂರು ಸೆಂಟ್ರಲ್ ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ಜುನೈದ್ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದೆ.

ನಿನ್ನೆಯಷ್ಟೇ ಸಿಸಿಬಿ ಪೊಲೀಸರು ಸೈಯದ್ ಸುಹೇಲ್ ಖಾನ್, ಮೊಹಮ್ಮದ್ ಫೈಝಲ್ ರಬ್ಬಾನಿ, ಮೊಹಮ್ಮದ್ ಉಮರ್, ಮುದ್ದಸ್ಸಿರ್ ಪಾಷಾ ಮತ್ತು ಜಾಹಿದ್ ತಬ್ರೇಜ್ ಎಂಬುವವದನ್ನು ಬಂಧನಕ್ಕೊಳಪಡಿಸಿದ್ದರು. ಐವರಿಂದ ಅಪಾರ ಪ್ರಮಾಣದ ಸ್ಫೋಟಕಗಳು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.

ಒಂದು ವೇಳೆ ಶಂಕಿತ ಉಗ್ರರು ಬಂಧನಕ್ಕೊಳಗಾಗದೇ ಹೋಗಿದ್ದಲ್ಲಿ, ಬೆಂಗಳೂರಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ದೊಡ್ಡ ವಿಧ್ವಂಸಕ ಕೃತ್ಯ ನಡೆದು ಹೊಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com