ರಾಮನಗರ: ಕ್ಷುಲ್ಲಕ ಕಾರಣಕ್ಕೆ ಗುದ್ದಲಿಯಿಂದ ತಲೆಗೆ ಹೊಡೆದು ತಂದೆಯನ್ನೇ ಕೊಂದ ಮಗಳು!
ರಾಮನಗರ: ಕ್ಷುಲ್ಲಕ ಕಾರಣಕ್ಕೆ ಮಗಳೊಬ್ಬಳು ತನ್ನ ತಂದೆಯನ್ನೇ ಕೊಂದಿರುವ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು ಹುಚ್ಚೀರಯ್ಯ(68) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಮಗಳನ್ನು ಪುಷ್ಪ (30) ಎಂದು ಗುರುತಿಸಲಾಗಿದೆ. ಆಕೆ ಸ್ಥಳದಿಂದ ನಾಪತ್ತೆಯಾಗಿದ್ದಾಳೆ.
ಚನ್ನಪಟ್ಟಣ ತಾಲೂಕಿನ ನಾಯಿದೊಳೆ ಗ್ರಾಮದಲ್ಲಿ ಘಟನೆ ನಡೆದಿದೆ. ಪುಷ್ಪಾ ಗೃಹಿಣಿಯಾಗಿದ್ದು, ಕೆಲವು ವರ್ಷಗಳ ಹಿಂದೆ ತನ್ನ ಪತಿಯೊಂದಿಗೆ ಜಗಳವಾಡಿಕೊಂಡು ಬಂದು ಪೋಷಕರ ಮನೆಗೆ ಮರಳಿದ್ದಳು. ಕೆಲಕಾಲ ಮಾನಸಿಕವಾಗಿ ನೊಂದಿದ್ದಳು.
ಮನೆಯಲ್ಲಿ ಊಟ ಮಾಡುವ ವೇಳೆ ತಂದೆ ಮತ್ತು ಮಗಳ ನಡುವೆ ಜಗಳ ಆರಂಭವಾಗಿದೆ, ಈ ವೇಳೆ ನಿಯಂತ್ರಣ ತಪ್ಪಿದ ಪುಷ್ಪ ಗುದ್ದಲಿಯಿಂದ ಅಪ್ಪನ ತಲೆಗೆ ಹೊಡೆದಿದ್ದಾಳೆ. ಪರಿಣಾಮ ಹುಚ್ಚೀರಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಗಲಾಟೆ ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು ಚನ್ನಪಟ್ಟಣ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ