ಬೆಂಗಳೂರು ವಿವಿಯಲ್ಲಿ 41 ಉತ್ತರ ಪತ್ರಿಕೆ ತಿದ್ದಿದ ಆರೋಪ: ಗುತ್ತಿಗೆ ನೌಕರರ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೇರಿದ್ದ 41 ಉತ್ತರ ಪತ್ರಿಕೆಗಳನ್ನು ತಿದ್ದಲಾಗಿದ್ದು, ಈ ಅಕ್ರಮ ಎಸಗಿರುವ ಆರೋಪದಡಿ ಗುತ್ತಿಗೆ ನೌಕರ ಟಿ. ಮಂಜುನಾಥ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೇರಿದ್ದ 41 ಉತ್ತರ ಪತ್ರಿಕೆಗಳನ್ನು ತಿದ್ದಲಾಗಿದ್ದು, ಈ ಅಕ್ರಮ ಎಸಗಿರುವ ಆರೋಪದಡಿ ಗುತ್ತಿಗೆ ನೌಕರ ಟಿ. ಮಂಜುನಾಥ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘2019ರಿಂದ 2023ರವರೆಗಿನ ಅವಧಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಶ್ರೀನಿವಾಸ್ ಅವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಬಂಡಲ್‌ಗಳಲ್ಲಿ ಇರಿಸಲಾಗುತ್ತದೆ. ನಿಗದಿತ ಬಂಡಲ್‌ಗಳನ್ನು ತೆರೆದು ಒಂದೊಂದೇ ಉತ್ತರ ಪತ್ರಿಕೆಯನ್ನು ಪರೀಕ್ಷಾ ಭವನದ ನೌಕರರು ಸ್ಕ್ಯಾನಿಂಗ್ ಮಾಡುತ್ತಾರೆ. ನಂತರ, ಅದೇ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಬಂಡಲ್‌ನಿಂದ ಅಕ್ರಮವಾಗಿ ಉತ್ತರ ಪತ್ರಿಕೆಗಳನ್ನು ಹೊರಗೆ ತೆಗೆದಿದ್ದ ಆರೋಪಿಗಳು, ಸಂಬಂಧಪಟ್ಟ ವಿದ್ಯಾರ್ಥಿಗಳಿಂದ ಪುನಃ ಉತ್ತರ ಬರೆಸಿದ್ದಾರೆ. ಅದೇ ಉತ್ತರ ಪತ್ರಿಕೆಯನ್ನು ಸ್ಕ್ಯಾನಿಂಗ್ ಮಾಡಿ ಪುನಃ ಬಂಡಲ್‌ನೊಳಗೆ ಸೇರಿಸಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಆರೋಪಿ ಟಿ. ಮಂಜುನಾಥ್, 2019ರಿಂದ ಪರೀಕ್ಷಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಇವರ ಜೊತೆ ಮತ್ತಷ್ಟು ಗುತ್ತಿಗೆ ನೌಕರರು ಕೆಲಸಕ್ಕಿದ್ದರು. ಇವರಲ್ಲಿ ಹಲವರು, ಹಣಕ್ಕಾಗಿ ಸಂಚು ರೂಪಿಸಿ. ಮೌಲ್ಯಮಾಪನದಲ್ಲಿ ಅಕ್ರಮ ಎಸಗಿರುವ ಅನುಮಾನವಿದೆ. ಈ ಸಂಬಂಧ 41 ಉತ್ತರ ಪತ್ರಿಕೆಗಳ ಫಲಿತಾಂಶವನ್ನು ಈಗಾಗಲೇ ತಡೆ ಹಿಡಿಯಲಾಗಿದ್ದು, ಗುತ್ತಿಗೆ ನೌಕರ, ವಿದ್ಯಾರ್ಥಿಗಳು ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರನ್ನೂ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸುವುದು ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಇದೀಗ ಗುತ್ತಿಗೆ ನೌಕರರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಈ ನಡುವೆ ಏಪ್ರಿಲ್ 25ರಿಂದ ಮಂಜುನಾಥ್ ಕೆಲಸಕ್ಕೆ ಗೈರಾಗಿರುವುದಾಗಿ ತಿಳಿದುಬಂದಿದ್ದು, ರಜೆ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com