ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರನ್ನು ವಿಮಾನ ಹತ್ತದಂತೆ ತಡೆದ ಏರ್‌ಏಷ್ಯಾ ಇಂಡಿಯಾ!

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಮಾನ ಹತ್ತಲು ಅನುಮತಿ ನಿರಾಕರಿಸಿದ ನಂತರ ಗುರುವಾರ ಮಧ್ಯಾಹ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ಹೈದರಾಬಾದ್‌ಗೆ ಏರ್‌ಏಷ್ಯಾ ಇಂಡಿಯಾ ವಿಮಾನ ಟೇಕ್ ಆಪ್ ಆಗಿದ್ದು, ಇದೊಂದು ಪ್ರೋಟೊಕಾಲ್ ಉಲ್ಲಂಘನೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು: ತಡವಾಗಿ ಬಂದರು ಎನ್ನುವ ಕಾರಣಕೊಟ್ಟು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಮಾನ ಹತ್ತಲು ಅನುಮತಿ ನಿರಾಕರಿಸಲಾಗಿದೆ. ಗುರುವಾರ ಮಧ್ಯಾಹ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ಹೈದರಾಬಾದ್‌ಗೆ ಏರ್‌ಏಷ್ಯಾ ಇಂಡಿಯಾ ವಿಮಾನ ಟೇಕಾಫ್ ಆಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಮೂಲವೊಂದು ಗವರ್ನರ್ ವಿಮಾನದೊಳಗೆ ಪ್ರವೇಶಿಸಲು ಬರುವಷ್ಟರಲ್ಲಿ ತುಂಬಾ ತಡವಾಗಿತ್ತು ಎಂದು ವಿಮಾನಯಾನ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ಇತರೆ ಅನೇಕ ಮೂಲಗಳು ರಾಜ್ಯಪಾಲರು ತಡವಾಗಿ ಬಂದಿಲ್ಲ ಎಂದಿವೆ. ಇದಾದ ಬಳಿಕ, ಗೆಹ್ಲೋಟ್ 90 ನಿಮಿಷಗಳ ನಂತರ ಮತ್ತೊಂದು ಏರ್ ಏಷ್ಯಾ ಇಂಡಿಯಾ ವಿಮಾನದ ಮೂಲಕ ಹೈದರಾಬಾದ್‌ಗೆ ತೆರಳಿದ್ದಾರೆ.

ಗವರ್ನರ್ ಇಲ್ಲದೆ ಟೇಕ್ ಆಫ್ ಆದ ಏರ್‌ಏಷ್ಯಾ ಇಂಡಿಯಾ ವಿಮಾನ I5972 ಮಧ್ಯಾಹ್ನ 2.05 ಕ್ಕೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬೇಕಿತ್ತು.

ಮೂಲವೊಂದು ಟಿಎನ್ಐಇ ಜೊತೆಗೆ ಮಾತನಾಡಿ, 'ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವರು, ಮುಖ್ಯಮಂತ್ರಿಗಳು ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಂತಹ ವಿವಿಐಪಿಗಳು ಸಾರ್ವಜನಿಕ ವೀಕ್ಷಣೆಯಿಂದ ದೂರವಿರುವ ‘ceremonial lounge’ಗೆ ವಿಶೇಷ ಪ್ರವೇಶವನ್ನು ಹೊಂದಿದ್ದಾರೆ. ರಾಜ್ಯಪಾಲರ ವಿಚಾರದಲ್ಲಿ ಅನುಸರಿಸಬೇಕಾದ ಶಿಷ್ಟಾಚಾರವೆಂದರೆ, ಅವರು ಯಾವುದೇ ತಪಾಸಣೆಗೆ ಒಳಗಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಒಂದು ವಾಹನವು ಗವರ್ನರ್ ಅವರನ್ನು ನೇರವಾಗಿ 'ಸೆರೆಮೋನಿಯಲ್ ಲಾಂಜ್' ನಿಂದ ವಿಮಾನವು ಟೇಕ್-ಆಫ್ ಆಗಲು ಸಿದ್ಧವಾಗಿರುವ ಸ್ಥಳಕ್ಕೆ ಕರೆದೊಯ್ಯುತ್ತದೆ ಮತ್ತು ನಿರ್ಗಮನಕ್ಕೆ ಅರ್ಧ ಘಂಟೆಗೂ ಮುನ್ನ ಮುಚ್ಚುವ ಸಾಮಾನ್ಯ ಬೋರ್ಡಿಂಗ್ ಗೇಟ್ ಮೂಲಕ ಅವರು ಹೋಗಬೇಕಾಗಿಲ್ಲ. ಇದಲ್ಲದೆ, ಎಲ್ಲಾ ಪ್ರಯಾಣಿಕರ ಬೋರ್ಡಿಂಗ್ ಪೂರ್ಣಗೊಂಡ ನಂತರ, ರಾಜ್ಯಪಾಲರ ಪ್ರೋಟೋಕಾಲ್ ತಂಡ ಸಿದ್ಧವಾಗುತ್ತದೆ. ನಂತರ ರಾಜ್ಯಪಾಲರು ಆಗಮಿಸುತ್ತಾರೆ ಮತ್ತು ವಿಮಾನವನ್ನು ಹತ್ತುವ ಕೊನೆಯ ಪ್ರಯಾಣಿಕರು ಆಗಿರುತ್ತಾರೆ. ರಾಜ್ಯಪಾಲರು ತಡವಾಗಿ ಬರುವ ಪ್ರಶ್ನೆಯೇ ಇಲ್ಲಿ ಎದುರಾಗುವುದಿಲ್ಲ. ಏಕೆಂದರೆ, ಅವರು ವಿಮಾನವನ್ನು ಹತ್ತುವ ಕೊನೆಯ ಪ್ರಯಾಣಿಕರಾಗಿರುತ್ತಾರೆ ಎಂದು ಅವರು ಹೇಳಿದರು.

ಗವರ್ನರ್ ವಿಮಾನದ ಬಳಿ ಬಂದಾಗ ವಿಮಾನದ ಬಾಗಿಲು ಇನ್ನೂ ಮುಚ್ಚಿರಲಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇನ್ನೊಂದು ಮೂಲವು ಸಹ ವಿಮಾನದ ಬಾಗಿಲು ಮುಚ್ಚಿರಲಿಲ್ಲ ಎಂದು ಖಚಿತಪಡಿಸಿದೆ. 'ರಾಜ್ಯಪಾಲರು ವಿಮಾನವನ್ನು ಹತ್ತಲು ಅನುಮತಿ ನೀಡಬೇಕಿತ್ತು ಮತ್ತು ಇದು ಪ್ರೋಟೋಕಾಲ್ ಉಲ್ಲಂಘನೆಯಾಗಿದೆ' ಎಂದು ಅವರು ಹೇಳಿದರು.

'ಟೇಕಾಫ್‌ಗೂ ಮೊದಲು ಅನುಸರಿಸಬೇಕಾದ ನಿಯಮಗಳಿವೆ'

ಆದಾಗ್ಯೂ, ವಿಮಾನ ಸುರಕ್ಷತಾ ಸಲಹೆಗಾರ ಮತ್ತು ಮಾಜಿ ಪೈಲಟ್ ಕ್ಯಾಪ್ಟನ್ ಮೋಹನ್ ರಂಗನಾಥನ್ ಟಿಎನ್ಐಇ ಜೊತೆಗೆ ಮಾತನಾಡಿ, ಟೇಕಾಫ್ ಮಾಡುವ ಮೊದಲು ಎಲ್ಲಾ ನಿಯಮಗಳನ್ನು ಅನುಸರಿಸಬೇಕು. 'ಕ್ಯಾಪ್ಟನ್ 'ಲೋಡ್ ಮತ್ತು ಟ್ರಿಮ್' ಶೀಟ್ ಎಂಬ ಸ್ವೀಕಾರ ದಾಖಲೆಗೆ ಸಹಿ ಹಾಕುತ್ತಾರೆ. ಇದರಲ್ಲಿ ವಿಮಾನದಲ್ಲಿನ ಪ್ರಯಾಣಿಕರ ಸಂಖ್ಯೆ ಮತ್ತು ಇತರ ವಿವರಗಳು ಇರುತ್ತವೆ. ಶೀಟ್‌ಗೆ ಸಹಿ ಮಾಡಿದ ನಂತರವಷ್ಟೇ, ಪೈಲಟ್‌ಗೆ ಯಾರನ್ನೂ ವಿಮಾನದೊಳಗೆ ಪ್ರವೇಶಿಸದಂತೆ ತಡೆಯುವ ಹಕ್ಕಿರುತ್ತದೆ' ಎಂದು ಅವರು ಹೇಳಿದರು.

ಈ ಹಿಂದೆ ತಾನು ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾಗಿನ ಎರಡು ನಿದರ್ಶನಗಳನ್ನು ಉಲ್ಲೇಖಿಸಿದ ಕ್ಯಾಪ್ಟನ್ ರಂಗನಾಥನ್, '10 ನಿಮಿಷ ತಡವಾಗಿ ಬಂದರು ಎನ್ನುವ ಕಾರಣಕ್ಕೆ ತಮಿಳುನಾಡಿನ ಮಾಜಿ ಸಚಿವ ಅರುಣಾಚಲಂ ಮತ್ತು ಅವರ ಕುಟುಂಬವನ್ನು 1988ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಹತ್ತಲು ಅನುಮತಿ ನಿರಾಕರಿಸಲಾಯಿತು. ಜನವರಿ 8, 1989ರಲ್ಲಿ, ಎಕ್ಸ್-ರೇ ಸ್ಕ್ಯಾನರ್ ಅನ್ನು ಹಾದುಹೋಗದೆ ಬಂದಿದ್ದರಿಂದ ನಾನು ನಾಗರಿಕ ವಿಮಾನಯಾನ ಸಚಿವ ಶಿವರಾಜ್ ವಿ ಪಾಟೀಲ್ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿ ರಾಜೇಶ್ ಪೈಲಟ್ ಅವರನ್ನು ವಾಪಸ್ ಕಳುಹಿಸಿದ್ದೆ. ಅವರು ಭದ್ರತಾ ಸ್ಕ್ರೀನಿಂಗ್ ಮೂಲಕ ಬಂದ ನಂತರ, ನಾನು ಅವರನ್ನು ವಿಮಾನ ಹತ್ತಲು ಅನುಮತಿ ನೀಡಿದೆ' ಎಂದು ಅವರು ಹೇಳಿದರು.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏರ್ ಏಷ್ಯಾ ಇಂಡಿಯಾ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗುರುವಾರ ಸಂಜೆಯವರೆಗೆ, ಗವರ್ನರ್ ಪ್ರೋಟೋಕಾಲ್ ತಂಡವು ಏರ್ ಏಷ್ಯಾ ಇಂಡಿಯಾ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ. ರಾಜ್ಯಪಾಲರಿಲ್ಲದೇ ವಿಮಾನ ಟೇಕಾಫ್ ಆಗಲು ಕಾರಣಗಳನ್ನು ತಿಳಿದುಕೊಂಡ ನಂತರವೇ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com