ಮತ್ತಷ್ಟು ಎಲೆಕ್ಟ್ರಿಕ್ ಬಸ್ ಗಳು ಬಿಎಂಟಿಸಿ ತೆಕ್ಕೆಗೆ!

ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್‌ನಿಂದ ಮೊದಲ ನಾನ್-ಎಸಿ ಎಲೆಕ್ಟ್ರಿಕ್ ಬಸ್ ಶುಕ್ರವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಕೈ ಸೇರಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್‌ನಿಂದ ಮೊದಲ ನಾನ್-ಎಸಿ ಎಲೆಕ್ಟ್ರಿಕ್ ಬಸ್ ಶುಕ್ರವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಕೈ ಸೇರಲಿದೆ.

FAME II ಯೋಜನೆಯ ಅಡಿಯಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಸಂಸ್ಥೆಯು ಇಂದು ಮೊದಲ ಬಸ್'ನ್ನು ಬಿಎಂಟಿಸಿಗೆ ನೀಡಲಿದೆ.

ಶಕ್ತಿ ಯೋಜನೆ ಪ್ರಾರಂಭವಾದ ನಂತರ, ರಾಜ್ಯದಲ್ಲಿ ಸಾರಿಗೆ ಬಸ್ ಗಳಲ್ಲಿ ಸಂಚರಿಸುವ ಜನರ ಸಂಖ್ಯೆ ಹೆಚ್ಚಳವಾಗಿದೆ. ಪ್ರತೀನಿತ್ಯ ಸುಮಾರು 40 ಲಕ್ಷ ಜನರು ಬಿಎಂಟಿಸಿ ಬಸ್ ಗಳಲ್ಲಿ ಸಂಚರಿಸುತ್ತಿದ್ದಾರೆ.

ಒಪ್ಪಂದದಂತೆ TML ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ 921 ಬಸ್‌ಗಳನ್ನು ಬಿಎಂಟಿಸಿಗೆ ನೀಡಲಿದ್ದು, 12 ವರ್ಷಗಳವರೆಗೆ ಬಸ್ ಗಳನ್ನು ಪೂರೈಸಿ, ಅವುಗಳ ನಿರ್ವಹಣೆ ಮಾಡಲಿದೆ.

ಈ ಬಸ್​​ಗಳು ಲೋ ಫ್ಲೋರ್ ಬಸ್​ಗಳಾಗಿದ್ದು, ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಜಿಸಿಸಿ) ಮಾದರಿಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೊದಲ ಬಸ್ ಅನ್ನು ಪ್ರಾಯೋಗಿಕ ಚಾಲನೆ ಮಾಡಲಾಗುತ್ತದೆ. ನಂತರ ಸೇವೆಗೆ ಮತ್ತಷ್ಟು ಬಸ್ ಗಳನ್ನು ನೀಡಲಾಗುತ್ತದೆ. ಹಂತ ಹಂತವಾಗಿ ಎಲ್ಲಾ 921 ಬಸ್‌ಗಳನ್ನು ಹಸ್ತಾಂತರಿಸಲಾಗುತ್ತದೆ. ಪ್ರಸ್ತುತ, ನಿಗಮವು ಸ್ವಿಚ್ ಮೊಬಿಲಿಟಿ ಲಿಮಿಟೆಡ್‌ನಿಂದ ನೇರಳೆ ಮತ್ತು ಜೆಬಿಎಂ ಆಟೋದ ಹಸಿರು ಬಣ್ಣದ ಎರಡು ಮಾದರಿಯ ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ವಹಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com