ಬೆಂಗಳೂರು ಅಭಿವೃದ್ದಿಗೆ ಪ್ರತ್ಯೇಕ ಸಮಿತಿ ರಚನೆ; ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನೇರವಾಗಿ ಮತ್ತು ಪರೋಕ್ಷವಾಗಿ ಪಾಲುದಾರರಾಗಿರುವ ಎಲ್ಲರನ್ನೂ ಒಳಗೊಂಡು ಪ್ರತ್ಯೇಕ ವಿಷಯಗಳ ಮೇಲೆ ಪ್ರತ್ಯೇಕ ಸಮಿತಿ ರಚನೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೋಮವಾರ ಹೇಳಿದರು.
ವಿಧಾನಸೌಧದಲ್ಲಿ ಸೋಮವಾರ (ಜೂನ್5) ಹಮ್ಮಿಕೊಂಡಿದ್ದ ಬೆಂಗಳೂರು ಶಾಸಕ, ಸಂಸದರ ಸಭೆ ಬಳಿಕ ಮಾತನಾಡಿ ಅವರು ʼಬ್ರಾಂಡ್ ಬೆಂಗಳೂರುʼ ಅನ್ನು ʼಬೆಟರ್ ಬೆಂಗಳೂರಾಗಿʼ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತ್ಯೇಕ ಸಮಿತಿ ರಚನೆ ಮಾಡಲಾಗುತ್ತಿದ್ದು, ಈ ಸಮತಿಯು ಸಂಚಾರ, ನೀರು ಸರಬರಾಜು ಮತ್ತು ಇತರ ಸೌಕರ್ಯಗಳು ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸುತ್ತದೆ ಎಂದು ತಿಳಿಸಿದರು.
ಬೆಂಗಳೂರು ನಗರ ಅಭಿವೃದ್ಧಿಗೆ ನಿಮ್ಮ ಸಹಕಾರ, ಸಲಹೆ ಅಗತ್ಯವಿದೆ. ಚುನಾವಣಾ ರಾಜಕೀಯ ಮುಗೀತು, ಈಗ ರಾಜಕೀಯ ಬೇಡವೇ ಬೇಡ. ರಾಜಕೀಯವಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯ, ವ್ಯತ್ಯಾಸ ಇರಬಹುದು. ಈ ಭಿನ್ನಾಭಿಪ್ರಾಯ ಪಕ್ಕಕ್ಕಿಟ್ಟು ಬೆಂಗಳೂರು ಅಭಿವೃದ್ಧಿಗೆ ಸಲಹೆ ಕೊಡಿ. ಮಾಜಿ ಪ್ರಧಾನಿ ವಾಜಪೇಯಿ ಬೆಂಗಳೂರು ಘನತೆ ಬಗ್ಗೆ ಹೇಳಿದ್ದರು. ವಿಶ್ವಮಟ್ಟದಲ್ಲಿ ಬೆಂಗಳೂರು ಘನತೆ, ಪ್ರಾಮುಖ್ಯತೆ ಬಗ್ಗೆ ಹೇಳಿದ್ದರು. ಈಗಿನ ಪ್ರಧಾನಿಯವರೂ ಬೆಂಗಳೂರಿನ ಮಹತ್ವ ಬಗ್ಗೆ ಹೇಳಿದ್ದಾರೆ. ನಾವು, ನೀವೆಲ್ಲಾ ಸೇರಿ ಬೆಂಗಳೂರಿನ ಘನತೆ, ಗೌರವ, ಹೆಚ್ಚಿಸೋಣ ಎಂದರು.
ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡೋಣ, ರಾಜಕೀಯವನ್ನೇ ಮಾಡುತ್ತೇನೆ ಅಂದರೆ ನಾನು ಅದಕ್ಕೂ ರೆಡಿ. ಪ್ರೀತಿಗೂ ಸರಿ, ಸಂಘರ್ಷಕ್ಕೂ ರೆಡಿ. ಆದರೆ, ನನಗೆ ದ್ವೇಷದ ರಾಜಕೀಯ ಬೇಕಿಲ್ಲ, ಅದರಲ್ಲಿ ನಂಬಿಕೆ ಇಲ್ಲ. ನೀವು ನನಗೆ ಸಲಹೆ ಕೊಡಿ, ನಿರ್ಮಲ ಮನಸ್ಸಿಂದ ತೆಗೆದುಕೊಳ್ಳುತ್ತೇನೆ. ಜಿಎಸ್ಟಿ, ಸೆಸ್, ನಾನಾ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹಣ ಹೋಗುತ್ತದೆ. ರಾಜ್ಯಕ್ಕೆ ಬರಬೇಕಾದ ಪಾಲು ತಂದು ಅಭಿವೃದ್ಧಿ ಮಾಡೋಣ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ. ನಾವು ಪ್ರತಿಯೊಂದನ್ನೂ ಪರಾಮರ್ಶಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ದಿಕ್ಕು ತಪ್ಪಿಸಿದರೆ ಸಹಿಸಲ್ಲ. ಅಂತಹ ಅಧಿಕಾರಿಗಳು ಜಾಗ ಖಾಲಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಡಿಕೆ ಶಿವಕುಮಾರ್, ಬೆಂಗಳೂರು ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತನ್ನಿ. ಆ ಮೂಲಕ ಬೆಂಗಳೂರು ಪರಿವರ್ತನೆ ಮಾಡೋಣ ಎಂದು ಮನವಿ ಮಾಡಿದರು.
ಗ್ಲೋಬಲ್ ಬೆಂಗಳೂರನ್ನು ವಿಷನ್ ಬೆಂಗಳೂರನ್ನಾಗಿ ಮಾಡುವ ನಿಟ್ಟಿನಲ್ಲಿ ಸಲಹಾ ಸಮಿತಿ ರಚನೆಯ ಜೊತೆಗೆ ಬ್ರಾಂಡ್ ಬೆಂಗಳೂರು ಬೆಟರ್ ಬೆಂಗಳೂರು ಆಗಬೇಕು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಲದ ರೀತಿಯಲ್ಲಿ ಬೆಂಗಳೂರಿನ ಸ್ಟೇಕ್ ಹೋಲ್ಡರ್‌ಗಳನ್ನು ಭೇಟಿ ಮಾಡಿ ವಿಷನ್ ಬೆಂಗಳೂರು ಸಮಿತಿ ರಚಿಸಲು ಯೋಜಿಸಲಾಗಿದೆ. ಕುಡಿಯುವ ನೀರು, ಕಸ ನಿರ್ವಹಣೆ, ಸಂಚಾರ ದಟ್ಟಣೆಯ ಸಮಗ್ರ ಯೋಜನೆ ಕುರಿತು ಚರ್ಚಿಸಲಾಗಿದೆ. ಇದೇ ಮಳೆಗಾಲದ ವೇಳೆ ತಲೆದೋರುವ ಮುಖ್ಯ ಸಮಸ್ಯೆಗಳಿಗೆ ಕಾರಣವಾಗಿರುವ ಒತ್ತುವರಿ, ರಾಜಕಾಲುವೆ ನಿರ್ವಹಣೆ ಕುರಿತು ಸಹ ಸಮಾಲೋಚನೆ ನಡೆಸಲಾಗಿದೆ. ಬೆಂಗಳೂರು ಅಭಿವೃದ್ಧಿಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಾಲುದಾರರಾಗಿರುವ ಎಲ್ಲರನ್ನೊಳಗೊಂಡ ಪ್ರತ್ಯೇಕ ವಿಷಯಗಳ ಮೇಲೆ ಪ್ರತ್ಯೇಕ ಸಮಿತಿಗಳನ್ನು ರಚನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಪ್ರತಿ ವಾರ್ಡ್‌ಗೆ ಪ್ರತ್ಯೇಕ ಕಡತವನ್ನು ಅಧಿಕಾರಿಗಳು ನಿರ್ವಹಿಸಬೇಕುವಾರ್ಡ್‌ವಾರು ಅಭಿವೃದ್ಧಿ ಕಾರ್ಯಗಳ ಆರಂಭ, ಮಧ್ಯಂತರ ಮತ್ತು ಪೂರ್ಣಗೊಂಡ ವಿಡಿಯೋ, ಛಾಯಾಚಿತ್ರಗಳನ್ನು ಕಡತದಲ್ಲಿ ಮಂಡಿಸಬೇಕು. ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಕಸ ನಿರ್ವಹಣೆಯ ಲೆಕ್ಕ ಪಕ್ಕಾ ಇರಬೇಕು. ಎಲ್ಲಿಂದ ಎಲ್ಲಿಗೆ ಸಾಗಿಸಲಾಯಿತು ಎನ್ನುವುದು ಲೆಕ್ಕವಿರಬೇಕು. ಬೆಂಗಳೂರಿನ ಸ್ವಚ್ಛತೆ ನಮ್ಮೆಲ್ಲರ ಹೊಣೆಯಾಗಿದೆ. ಬಿಡಿಎ ಕಾಂಪ್ಲೆಕ್ಸ್‌ಗಳ ರಿ-ಮಾಡೆಲಿಂಗ್ ಕುರಿತಂತೆಯೂ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಕುಡಿಯುವ ನೀರಿನ ನಿರ್ವಹಣೆ ಸರಬರಾಜು ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಮತ್ತು ಭ್ರಷ್ಟಾಚಾರದಿಂದ ಬಳಲುತ್ತಿದ್ದಾರೆ. ಇದನ್ನು ನಾವು ಪರಿಹರಿಸಬೇಕಾಗಿದೆ, ಇದು ನಮ್ಮ ಕರ್ತವ್ಯವೂ ಆಗಿದೆ ಎಂದರು.
ಇದೇ ವೇಳೆ ನೀರು ಪೂರೈಕೆ ಕುರಿತು ವಿಧಾನಸಭೆವಾರು ನೀರು ಪೂರೈಕೆಯ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಶಿವಕುಮಾರ್ ಅವರು ಸೂಚನೆ ನೀಡಿದರು. ಜನಸಂಖ್ಯೆಗನುಗುಣವಾಗಿ ನೀರು ಪೂರೈಕೆಯಾಗುತ್ತಿದೆಯೇ ಎಂಬುದನ್ನು ತಿಳಿಯಬೇಕಿದೆ ಎಂದು ಹೇಳಿದರು.
ಬಳಿಕ ಬಿಬಿಎಂಪಿ ಚುನಾವಣೆ ಕುರಿತು ಮಾತನಾಡಿಗ, ಈ ಚರ್ಚೆ ನಡೆಸಿಲ್ಲ. ಈವಿಚಾರ ನ್ಯಾಯಾಲಯದ ಅಂಗಳದಲ್ಲಿದೆ, ಇದನ್ನು ಪರಿಶೀಲಿಸಿ ನಿರ್ಧರಿಸುತ್ತೇವೆಂದು ಹೇಳಿದರು.

