ಬಾಗಲಕೋಟೆಯ ಈ ಒಂದು ಗ್ರಾಮ 20 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟಿಲ್ಲ...! ಕಾರಣವೇನು?

ರಾಜ್ಯ ಸರ್ಕಾರ ಇದೀಗ ಉಚಿತ ವಿದ್ಯುತ್ ಎಂದು ಹೇಳುತ್ತಿದೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಕಳೆದ 20 ವರ್ಷಗಳಿಂದಲೂ ಅಘೋಷಿತ ಉಚಿತ ವಿದ್ಯುತ್ ಯೋಜನೆ ಚಾಲ್ತಿಯಲ್ಲಿದೆ.
ಶಿರೋಲ್ ಗ್ರಾಮದಲ್ಲಿನ ವಿದ್ಯುತ್ ಕೇಂದ್ರ.
ಶಿರೋಲ್ ಗ್ರಾಮದಲ್ಲಿನ ವಿದ್ಯುತ್ ಕೇಂದ್ರ.

ಬೆಳಗಾವಿ: ರಾಜ್ಯ ಸರ್ಕಾರ ಇದೀಗ ಉಚಿತ ವಿದ್ಯುತ್ ಎಂದು ಹೇಳುತ್ತಿದೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಕಳೆದ 20 ವರ್ಷಗಳಿಂದಲೂ ಅಘೋಷಿತ ಉಚಿತ ವಿದ್ಯುತ್ ಯೋಜನೆ ಚಾಲ್ತಿಯಲ್ಲಿದೆ.

ಹೌದು, ರೈತಪರ ಹೋರಾಟಕ್ಕೆ ಹೆಸರಾದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳದಲ್ಲಿ ಗ್ರಾಮಸ್ಥರು 20 ವರ್ಷಗಳಿಂದಲೂ ಕರೆಂಟ್‌ ಬಿಲ್‌ ಪಾವತಿಸುತ್ತಿಲ್ಲ. ಅಂದಿನ ರೈತರ ಹೋರಾಟದ ಫಲವಾಗಿ ಕೈಗೊಂಡ ನಿರ್ಣಯ ಇಂದಿಗೂ ಜಾರಿಯಲ್ಲಿದೆ.

ಶಿರೋಳ ಗ್ರಾಮ ಕಬ್ಬು ಬೆಳೆಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಗ್ರಾಮಸ್ಥರೆಲ್ಲ ಕೃಷಿಕರು. ಕಬ್ಬು ಬೆಳೆಯಿಂದ ರೈತರು ಅಭಿವೃದ್ಧಿ ಹೊಂದಿದ್ದಾರೆ. 2001ರಲ್ಲಿ ಗ್ರಾಮದಲ್ಲಿ ಕೃಷಿ ಪಂಪ್‌ಸೆಟ್‌, ಮನೆಗಳಿಗೆ ಸಮರ್ಪಕ ವಿದ್ಯುತ್‌ ಪೂರೈಕೆ ಆಗುತ್ತಿರಲಿಲ್ಲ. ಮೇಲಿಂದ ಮೇಲೆ ಟಿಸಿ ಸುಟ್ಟ ಕಾರಣ ರೈತರು ಕೃಷಿಯಲ್ಲಿ ಹಾನಿಗೀಡಾಗಿದ್ದರು. ಗುಣಮಟ್ಟದ ವಿದ್ಯುತ್‌ ಪೂರೈಕೆಯಾಗದ ಕಾರಣ ಗ್ರಾಮಸ್ಥರು ಟಿಸಿ ರಿಪೇರಿಗೆ ಹೆಸ್ಕಾಂ ಅಧಿಕಾರಿಗಳ ಬಳಿ ಹೋದಾಗ ಹಿಂದಿನ ಕರೆಂಟ್‌ ಬಿಲ್‌ ಭರಿಸಿಕೊಂಡು ಟಿಸಿ ರಿಪೇರಿ ಮಾಡಿಸಿಕೊಟ್ಟರು. ಇದರಿಂದ ರೋಸಿ ಹೋದ ಗ್ರಾಮಸ್ಥರು ನಾವೇ ಟಿಸಿ ದುರಸ್ತಿ ಮಾಡಿಕೊಳ್ಳುತ್ತೇವೆ, ಗುಣಮಟ್ಟದ ಕರೆಂಟ್‌ ಕೊಡದಿದ್ದರೆ ಬಿಲ್‌ ತುಂಬುವುದಿಲ್ಲ ಎಂದು ಅಭಿಯಾನ ನಡೆಸಿದರು.

ಈ ಅಭಿಯಾನ ಹೋರಾಟದ ಸ್ವರೂಪ ಪಡೆದ ಪರಿಣಾಮ ಕೃಷಿ, ಮನೆಗಳ ವಿದ್ಯುತ್‌ ಬಿಲ್‌ ಭರಿಸುವುದು ಬಂದ್‌ ಆಯಿತು.

ರೈತ ಮುಖಂಡ ದಿ.ನಂಜುಂಡಸ್ವಾಮಿ, ರಮೇಶ ಗಡದನ್ನವರ ಅವರ ನೇತೃತ್ವದಲ್ಲಿ ರೈತರೇ ಟಿಸಿ ರಿಪೇರಿ ಅಭಿಯಾನ ನಡೆಸಿದರು.

ಶಿರೋಳದ ವೆಂಕಣ್ಣ ಮಳಲಿ ಮಾತನಾಡಿ, ಗ್ರಾಮದ ಜನರು 2003 ರವರೆಗೂ ತೀವ್ರ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದರು. ಬೆಳೆಗಳಿಗೆ ನೀರುಣಿಸಲು ವಿದ್ಯುತ್ ಅನ್ನು ಅವಲಂಬಿಸಿದ್ದಾರೆ. ವಿದ್ಯುತ್ ಬಿಕ್ಕಟ್ಟಿನ ಕಾರಣದಿಂದಾಗಿ ಪ್ರತಿ ವರ್ಷ ದೊಡ್ಡ ನಷ್ಟವನ್ನು ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ಮಂಡಳಿಯ (ಕೆಇಬಿ) ಅಧಿಕಾರಿಗಳು ಸೂಕ್ತ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಆದರೆ, ಈ ಮನವಿಗೆ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ 2003 ರಲ್ಲಿ ಶಿರೋಳ ಗ್ರಾಮ ಪಂಚಾಯಿತಿ ಕಚೇರಿ ಎದುರು ರೈತ ಸಂಘದ ಮುಖಂಡರ ನೇತೃತ್ವದಲ್ಲಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮನವೊಲಿಸಲು ಬಂದಿದ್ದ ಅಧಿಕಾರಿಗಳ ತಂಡವನ್ನು ಗ್ರಾಮಸ್ಥರು ಪಂಚಾಯಿತಿ ಕಚೇರಿಯಲ್ಲಿ ಸೇರಿಸಿ ಬೀಗ ಹಾಕಿದ್ದರು.

ಸೂಕ್ತ ರೀತಿಯಲ್ಲಿ ವಿದ್ಯುತ್ ಪೂರೈಕೆಯಾಗದ ಹೊರತು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಗ್ರಾಮಸ್ಥರು ನಿರ್ಧಾರ ಕೈಗೊಂಡರು. ಪ್ರತಿಭಟನೆ ಬಳಿಕ ವಿದ್ಯುತ್ ಸೂಕ್ತ ರೀತಿಯಲ್ಲಿ ಪೂರೈಕೆಯಾಗುತ್ತಿದ್ದರೂ ಗ್ರಾಮಸ್ಥರು ಮಾತ್ರ ಬಿಲ್ ಗಳನ್ನು ಪಾವತಿ ಮಾಡುತ್ತಿಲ್ಲ ಎಂದು ವೆಂಕಣ್ಣ ಅವರು ಮಾಹಿತಿ ನೀಡಿದ್ದಾರೆ.

ಈ ನಡುವೆ ಶಿರೋಳ ಗ್ರಾಮದಲ್ಲಿ ಹೊಸ ಮನೆಗಳು ನಿರ್ಮಾಣಗೊಂಡಿದ್ದು, ವಾಣಿಜ್ಯ ಸಂಸ್ಥೆಗಳು ಬಂದಿವೆ. ಇಲ್ಲಿನ ಮಾಲೀಕರು ವಿದ್ಯುತ್ ಮೀಟರ್ ಹಾಗೂ ಕೇಬಲ್ ಗಳನ್ನು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯದೆಯೇ ಅಳವಡಿಸಿಕೊಂಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com