![ಸಂಗ್ರಹ ಚಿತ್ರ](http://media.assettype.com/kannadaprabha%2Fimport%2F2023%2F6%2F11%2Foriginal%2Farrest2.jpg?w=480&auto=format%2Ccompress&fit=max)
ಬೆಂಗಳೂರು; ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿ ಮಹಿಳಾ ಟೆಕ್ಕಿಗೆ ವಂಚನೆ ಮಾಡಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಾಗಲೂರು ನಿವಾಸಿ ಮುದಾಸೀರ್ ಅಲಿಯಾಸ್ ಅರವಿಂದ್ ಬಂಧಿತ ಆರೋಪಿಯಾಗಿದ್ದಾನೆ.ದುಬೈನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯೊಂದರಲ್ಲಿ ಸಲಹೆಗಾರನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಆರೋಪಿ ಮಹಿಳೆಯರು, ಪ್ರಮುಖವಾಗಿ ಸಾಫ್ಟ್ ವೇರ್ ವೃತ್ತಿಪರ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದ.
ಕೆಲ ದಿನಗಳ ಹಿಂದೆ ಕೂಡ ನಾಫ್ಟ್ ವೇರ್ ಇಂಜಿನಿಯರ್ ಮಹಿಳೆಯೊಬ್ಬರಿಗೆ ವಂಚನೆ ಮಾಡಿದ್ದ. ತಾಯಿಗೆ ಅನಾರೋಗ್ಯ ಎದುರಾಗಿದ್ದು, ಯುಕೆಯಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ಹೇಳಿ, ಮಹಿಳೆಯಿಂದ ರೂ.1 ಲಕ್ಷ ಪಡೆದುಕೊಂಡಿದ್ದಾನೆ. ನಂತರ ತಾಯಿ ಸತ್ತಿದ್ದಾಳೆಂದು ಕಥೆ ಕಟ್ಟಿದ್ದಾನೆ. ಇದಾದ ಬಳಿಕ ಮಹಿಳೆಯ ಸಂಪರ್ಕಕ್ಕೆ ಸಿಕ್ಕಿಲ್ಲ.
ಘಟನೆ ಬಳಿಕ ಮಹಿಳೆ ವ್ಯಕ್ತಿ ಕುರಿತು ಹುಡುಕಾಟ ನಡೆಸಿದ್ದು, ಈ ವೇಳೆ ಆರೋಪಿಯ ಸಹೋದರನ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿ ಹಾಗೂ ಮಕ್ಕಳೊಂದಿಗೆ ಅಮೃತಹಳ್ಳಿಯಲ್ಲಿ ವಾಸವಿರುವುದಾಗಿ ತಿಳಿದುಬಂದಿದೆ. ತಾಯಿ ಜಮ್ಮು ಮತ್ತು ಕಾಶ್ಮೀರದಲ್ಲಿದ್ದಾರೆಂದು ತಿಳಿದುಬಂದಿದೆ.
ಮಾಹಿತಿ ಪಡೆದ ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮದುವೆಯಾಗುವ ಭರವಸೆ ನೀಡಿದ್ದ ಆರೋಪಿ ಮಹಿಳಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎಂದೂ ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಇದೀಗ ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 419 ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement