

ಮಡಿಕೇರಿ: ಮಡಿಕೇರಿಯಲ್ಲಿ ಅಕ್ರಮವಾಗಿ ಮರ ಕಡಿಯುತ್ತಿದ್ದ ಆಂಧ್ರ ಪ್ರದೇಶದ ಮೂವರು ರಿಯಲ್ ಎಸ್ಟೇಟ್ ಮಾಲೀಕರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕೇಸ್ ದಾಖಲಿಸಿದ್ದಾರೆ.
ರಿಯಲ್ಟರ್ ಗಳ ವಿರುದ್ಧ ನಿವೃತ್ತ ಏರ್ ಮಾರ್ಷಲ್ ಕೆಸಿ ಕಾರಿಯಪ್ಪ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಮಂಗಳಾದೇವಿ ನಗರದಲ್ಲಿ ಭೂಕುಸಿತ ಸಂಭವಿಸುವ ಅಪಾಯವಿರುವ 38.5 ಎಕರೆ ಪ್ರದೇಶದಲ್ಲಿ 80ಕ್ಕೂ ಹೆಚ್ಚು ಮರಗಳನ್ನು ರೆಸಾರ್ಟ್ ನಿರ್ಮಾಣಕ್ಕಾಗಿ ರಿಯಲ್ ಎಸ್ಟೇಟ್ ಮಾಲೀಕರು ಕಡಿದು ಹಾಕಿದ್ದಾರೆ.
ರಿಯಲ್ಟರ್ ಗಳು ಮರ ಕಡಿಯಲು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ತಿಳಿದುಬಂದಿದೆ.
ಮಂಗಳಾದೇವಿ ನಗರದಲ್ಲಿ 18.95 ಎಕರೆ ವಿಸ್ತೀರ್ಣದ ಸರ್ವೆ ನಂಬರ್ 540/73ರ ಜಮೀನು ಆಂಧ್ರಪ್ರದೇಶ ಮೂಲದ ಎಸ್.ಅಪ್ಪಾರಾವ್ ಅವರ ಒಡೆತನದಲ್ಲಿದೆ.
ಸರ್ವೆ ಸಂಖ್ಯೆ 543/74ರಲ್ಲಿ 19.01 ಎಕರೆ ವಿಸ್ತೀರ್ಣದ ಜಮೀನು ಆಂಧ್ರ ಪ್ರದೇಶ ಮೂಲದ ಮತ್ತೊಬ್ಬ ವ್ಯಕ್ತಿ ಎಸ್.ಸುಬ್ಬಯ್ಯಮ್ಮ ಅವರ ಹೆಸರಿನಲ್ಲಿದೆ. ಈ ಇಬ್ಬರು ಭೂಮಾಲೀಕರು 2017ರಲ್ಲಿ ಕೃಷಿ ಭೂಮಿಯನ್ನು ವಸತಿಗಾಗಿ ಪರಿವರ್ತಿಸಿದ್ದರು.
2018 ರಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪದಲ್ಲಿ, ಭೂಕುಸಿತದಿಂದ ಮಂಗಳಾದೇವಿ ನಗರದಾದ್ಯಂತ ಹಲವಾರು ಮನೆಗಳಿಗೆ ಹಾನಿಯಾಗಿತ್ತು ಮತ್ತು ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ನಂತರ ಈ ಇದನ್ನು ಅಪಾಯಕಾರಿ ಸ್ಥಳ ಎಂದು ಘೋಷಿಸಲಾಗಿತ್ತು.
ಈ ಅಪಾಯಕಾರಿ ಸ್ಥಳದಲ್ಲಿನ ಮರಗಳನ್ನು ಕಡಿದ ಇಬ್ಬರು ಭೂಮಾಲೀಕರ ವಿರುದ್ಧ ಮಡಿಕೇರಿ ವಿಭಾಗದ ಅರಣ್ಯ ಇಲಾಖೆಯು ಇದೀಗ ಕರ್ನಾಟಕ ಅರಣ್ಯ ಕಾಯ್ದೆ ಮತ್ತು ಕರ್ನಾಟಕ ಮರಗಳ ಸಂರಕ್ಷಣೆ ಕಾಯ್ದೆ 1976 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.